ಹುರಿಹೊಸೆದ ಹಗ್ಗದಲಿ ಹಾವು ಕಂಡಿತೆ, ಪಾಪ!
ಬರಿಯುಸಿರು ಬಿಟ್ಟವರೆ ಇಲ್ಲಿ ಕೇಳಿ;
ತುದಿಗಾಲ ಮೇಲೇಕೆ ನಿಲ್ಲುವಿರಿ? ಬಣ್ಣದುರಿ
ಹಳೆಮನೆಯ ಉರಿಸಿದರೆ ತಪ್ಪೆ ಹೇಳಿ.
ಅಜ್ಜ ಮೊಮ್ಮಗು ಮಾತು ನಮಗೇಕೆ ಬಿಟ್ಟುಬಿಡಿ
ಮಣ್ಣು ಹಡೆದದ್ದರಿತೆ ಪ್ರೀತಿ ನೀತಿ ;
ಮುಟ್ಟಿದರೆ ಮೈಲಿಗೆ, ಗೆದ್ದವರ ಸಾಲಿಗೆ
ತೆಪ್ಪ ತೇಲಿತು ಬನ್ನಿ ತೆರೆಮೇಲಕೆ.
ಬಣ್ಣಬಣ್ಣದ ಗುಳ್ಳೆ ಬಾಳಂತೆ, ಇರಬಹುದು
ನೀರು ಒಡೆಯುವುದಿಲ್ಲ ಚಿಂತೆ ಏಕೆ?
ಆಟವಾಡಿದ ಜನರು ಹೇಳಿದುದ ಕೇಳಿದಿರ?
ಔಟು ಜೂಟುಗಳೆಲ್ಲ ಕುಣಿವ ನೆಪಕೆ.
ಹರಿದು ಹೋಯಿತು ನನ್ನ ಹಳೆಯ ಪುಸ್ತಕ, ಎಸೆದು
ಆನಂದ ಹೊಸ ‘ಕಾಪಿ’ ಕೊಂಡು ತಂದ;
ಹಳೆ ತಪ್ಪ ತಿದ್ದಿ ಹೊಸ ಹಾಳೆಯಲಿ ಮುದ್ರಿಸಿದೆ
ನೀವೇನೆ ಹೇಳಿ ಇದು ಅದಕು ಚಂದ.
ನೆರೆಯವರು ಯಾರೆಂದೆ ಇನ್ನು ಗೊತ್ತಿಲ್ಲ,
ವರುಷಗಳೆ ಉರುಳಿದುವು ಇಲ್ಲಿ ಬಂದು!
ಮತ್ತೆ ಹೊಕ್ಕುಳ ಸುತ್ತ ದೃಷ್ಟಿ ಸುತ್ತುತ್ತ ಇದೆ
ಹಳೆಯ ಕಥೆ ಕನಸುಗಳ ನೆನಪ ಕೊಂದು.
ಹೆರಳ ಮರೆಯಲಿ ನಿಂತು ಮಲ್ಲಿಗೆಯ ಮೂಸಿದೆವು
ಪರಿಮಳಕೆ ಅರಳಿದುವು ನೂರು ಕನಸು;
ಕತ್ತಲಿನ ಬಟ್ಟಲಲಿ ಬೆಳುದಿಂಗಳನು ತುಂಬಿ
ಮುಖ ಆಚೆ ಬದಿಗಿಹುದು, ಹಡೆದ ನನಸು.
ತೂಬು ತೆರೆಯಲು ನಿನಗೆ ಹಿಂಜರಿಕೆ ಬೇಕಿಲ್ಲ
ಇದೆ ಮೋಡ ಕಡಲು ಕೆರೆಯೊಡಲು ಬಿಸಿಲು;
ನೀರು ತುಂಬಲಿ ನಾಳೆ, ಸರಿಸು ಓದಿದ ಹಾಳೆ
(ಆಟವಾಡಿದ ಜನರ ಮಾತು ಮೇಲೆ).
ಹತ್ತು ವರುಷದ ಹಿಂದೆ ಮತ್ತೂರ ತೇರಿನಲಿ
ಅತ್ತಿತ್ತ ಸುಳಿದವರು ನಾವೇನೆ!
ಹತ್ತು ವರುಷದ ಮೇಲೆ ಮತ್ತೆ ಬರುವೆವು ಬಿಡಿ
ಭೂಮಿ ಗುಂಡಾಗಿದೆ ನಿಜತಾನೆ?
*****