ಮೊದಲ ಹೆಜ್ಜೆಗಳಲ್ಲೆ ಅಸಲು ಕುಣಿತದ ಆಸೆ;
ಹುಡುಕಾಟ, ನಕಲಿ ಹೆಜ್ಜೆಯನಿಟ್ಟ ಮಿಡುಕಾಟ.
ಯಾರದೋ ಚೊಣ್ಣ, ಅಂಗಿಯ ತೊಟ್ಟು ಹುಸಿಮೀಸೆ
ಹೊತ್ತು ಎಗರಿದ್ದಕ್ಕೆ ಪಶ್ಚಾತ್ತಾಪ ಪರದಾಟ;
ದುಃಖ, ಗಾಢ ವಿಷಾದ, ಸೃಷ್ಟಿಕಾರಕ ನೋವು.
ಕಾವು ಕೂತಿತು ಹಕ್ಕಿ. ಮಣ್ಣ ಕತ್ತಲಿನಲ್ಲಿ
ಸಣ್ಣ ಬೆತ್ತಲೆ ಬೀಜ, ಹೇಗಾದೇನು ಹೂವು
ಹೇಗಾದೇನು ಹಣ್ಣು ಎನ್ನುವ ತಪಸ್ಸಿನಲ್ಲಿ
ಬೋಧಿವೃಕ್ಷದ ಕೆಳಗೆ ಏನೊ ಫಳ್ಳನೆ ಮಿಂಚಿ
ಚಂಡೆ ಮದ್ದಳೆ ಬಡಿತ, ಬೆರಗೆಬ್ಬಿಸುವ ಕುಣಿತ;
ಗರುಡರೆಕ್ಕೆಯ ಬಿಚ್ಚಿ ನೀಲನಭದಲ್ಲಿ ಹೊಂಚಿ
ಸುತ್ತಿಸಾಗುವ ಮೋಡಿ, ಬಲಿಷ್ಠಮೈಯ ಮಣಿತ
ಭಾಷೆ ಲಯ ನಾದದಲ್ಲಿ ಎದ್ದ ಹೊಸ ನೋಟಕ್ಕೆ ದಂಗಾಯ್ತು ಇಡಿಯ ಕವಿಕುಲವೇ
ಭೋರ್ಗರೆವ ಸಾಗರಕೆ, ಬೆಳಗಿನಾಕಾಶಕ್ಕೆ ಯಾರು ಹೋಲಿಕೆ? ನಿಮಗೆ ನೀವೇ!
*****