ಹನಿಹನಿ ಬಿದ್ದು ಲಯ ಭೋರೆಂದು
ಸುರಿದಾಗ ಬೀದಿಯಲಿ ಹರಿಯುವ
ಧಾರೆ ಹಳ್ಳವಾಗಿ ನದಿಯಾಗಿ
ಸಮುದ್ರ ಸೇರುವ ಧ್ಯಾನದಲ್ಲಿ ತಟಸ್ಥ
ವಾಗಿ ಕುಳಿತಿದೆ ಪಾಚಿಗಟ್ಟಿದ ಪಾಗಾರದ
ಮೇಲೆ ನೀಲಿಹಕ್ಕಿ ತೊಯ್ದು ತಪ್ಪಡಿಯಾಗಿ.
ಸಾಲು ಸಾಲು ಪಾಠವ ಮುಗಿಸಿದ ಮೇಷ್ಟ್ರು
ಕೈಯಲ್ಲಿ ಕೋಲು ನೋಡಿದ ಪಿಳಿಪಿಳಿ ಕಣ್ಣುಗಳು
ಬೆರಳು ಸಂದಿ ಪೆನ್ಸಿಲ್ಲು ಗೀಚುವ ಗಣಿತ
ಬೀಜ ಬಿತ್ತುವ ಬಿಕ್ಕುವ ನೆಲದಲಿ
ಚಿಗುರಿ ಚಿಮ್ಮುವ ಕನಸಿನ ಸದ್ದು
ಗರಿಕೆದರಿ ಹಾರುವ ಗುಬ್ಬಿ ಹನಿಗೆ ಮುದುರಿ
ನಿಟ್ಟುಸಿರು ಬಿಟ್ಟ ಸಮಯ ಅಕ್ಷರಗಳು ತೂಗುತ್ತವೆ
ಮೋಡಗಳಲ್ಲಿ ಹನಿಯಾಗಿ.
ಕಾಲು ಮುರಿದು ಬಿದ್ದಿವೆ ಹಾರುವ ಚಿಟ್ಟೆಗಳು
ನಿನ್ನೆ ನಾಳೆಗಳ ಕಲಿಸಿ ಈ ದಿನದಲ್ಲಿ ಸುರಿದ
ಮಳೆಗೆ ಬಣ್ಣ ತೊಳೆದು ರಾಡಿ ನೀರು ಎಲ್ಲೆಲ್ಲೂ
ಜೋಗುಳದ ಹಾಡಿನಲಿ ಚಿಕ್ಕಳಿಕೆ ಅಡುಗೆ
ಒಲೆ ಉರಿಯಲಿಲ್ಲ ಒಳಗೆ, ಮಾಡಿನ
ಮೇಲೆ ಜಿನುಗಿದ ಹನಿಗಳು ಅಂಗಳದ
ತುಂಬೆಲ್ಲಾ ತೂತು ತೂತು ಹೂಡಿವೆ.
ಸೋಗಲಾಡಿ ಸೋನೆ ಮತ್ತದೇಧಾವಂತ ಹೊತ್ತು
ಬರುತ್ತಾಳೆ ಕವಿತೆ ಹುಟ್ಟುವ ತವಕದ ಇಳಿಸಂಜೆಯಲಿ.
*****