ಅವಳು ನಡೆಯುತ್ತಿದ್ದಾಳೆ.
ತನ್ನ ದಾರಿಯ ಪಥ ಸಂಚಲನ
ಸರಳೀಕರಿಸಿಕೊಳ್ಳುತ್ತ
ಗೊತ್ತು ಅವಳಿಗೆ,
ಆಸ್ಟ್ರೇಲಿಯಾದ ಏಕಾಂತ ಬೀದಿಗಳು
ಬೆಂಗಳೂರಿನ ಕಾಂಕ್ರೀಟು
ಕಾಡುಗಳ ಕಾಲುದಾರಿಗಳು
ನಮ್ಮ ನಿಮ್ಮೂರಿನ ಕಾಡಿನ
ಕವಲು ಹಾದಿಗಳು
ಚೂರು ಬದಲಾಗಿಲ್ಲ.
ನಾಯಿಗಳ ಆಕ್ರಮಣ
ಕೊಳ್ಳೆ ಹೊಡೆಯುವುದ ಬಿಟ್ಟಿಲ್ಲ.
ನಡೆಯುತ್ತಿದ್ದಾಳೆ ಅವಳು
ತುಂಡಂಗಿ ಗೀರಿದ ಉದ್ರೇಕ
ತಡೆಯಲಾಗದೇ
ತೋಳಗಳು ಮಾಂಸದ ರುಚಿಗೆ ಬಿದ್ದಿವೆ
ಎಂದೆಲ್ಲಾ ಜನರಾಡಿಕೊಳ್ಳುತ್ತಾರೆ.
ನಿಜಕ್ಕೂ ಅದಲ್ಲ.
ಬುರಖಾದ ಒಳಗಿನ ಮುಚ್ಚಿದ ಬೆಚ್ಚಗಿನ
ಮೈ ಕೂಡ ವಿವರ್ಣವಾಗಿದೆ.
ಕರಿಮಣಿಯ ಜೊತೆಗೆ ಅಲ್ಲಲ್ಲಿ
ಹೊಳೆವ ಗುಂಡುಗಳ ಪೋಣಿಸಿ
ಕನಸಿನಲ್ಲಿ ಮಾಲೆ ಕಟ್ಟುತ್ತಾಳೆ
ಲಾಸ್ಯವಾಡುತ್ತದೆ ತುಟಿಯಂಚು
ತಟ್ಟನೆ ಕೆಂಪು ದೀಪ ಉರಿಯುತ್ತದೆ.
ಭಗ್ನಗೊಳ್ಳುತ್ತವೆ,
ಸೆಟೆದು ಚೂರಾಗುತ್ತವೆ ಮಣಿಗಳು
ತುಟಿಯೊಡೆದು ರಕ್ತ ಒಸರುತ್ತದೆ.
ಮೂಲೆಯಲ್ಲಿ ರಾಶಿ ತುಪ್ಪೆಯಾಗಿರುವ
ಬಲೂನುಗಳು ಎದ್ದು
ವಿಕಾರ, ವಿದ್ರೂಪ ಭಂಗಿಗಳಲ್ಲಿ
ಗೋಡೆ ಎತ್ತರಕೆ ಜಿಗಿದು
ಜಡ್ಡುಗಟ್ಟಿಸುತ್ತವೆ ಅವಳನ್ನು.
ಆದರೂ ಕಣ್ಣು ಮುಚ್ಚಿ ಕನಸೇರುತ್ತಾಳೆ
ಮಣಿ ಪೋಣಿಸುತ್ತಾಳೆ.
ದಾರಿ ದಾರಿಯ ಮಧ್ಯೆ
ವೈರುಧ್ಯಗಳ ಕವಲು ಸೀಳುಗಳು
ಅಣಕಿಸುತ್ತವೆ ದಿಕ್ಕು ತಪ್ಪಿಸುತ್ತವೆ ಕೂಡಾ
ಮುಡಿ ಕಟ್ಟಿ, ಮುಡಿ ಬಿಚ್ಚಿ
ಬೆದರು ಬೊಂಬೆಗಳು ಯಾತ್ರೆಯಲ್ಲೂ
ಜಾತ್ರೆ ಮಾಡುತ್ತವೆ.
ಬಾವಿಕಟ್ಟೆಯ ಎಂದೂ ಒಣಗದ ಹಸಿಯಂತೆ.
ಯೂರೋಪಿನ ಕರಿಯ ಜೀತರ
ಮಾರಣ ಹೋಮ
ಇಸ್ರೇಲು, ಪ್ಯಾಲಿಸ್ತೇನಿನ ಕರಿಯ
ಬಂದೂಕುಗಳು
ಅರಬರ ಮರಳುಗಾಡು
ಕೊರಿಯಾದ ಕಗ್ಗೋಲೆಗಳು
ಸರಣಿ ಅನುಕ್ರಮವಾಗಿ
ಕೆಂಪು ಬಣ್ಣದ ಬಟ್ಟೆಗಳಲ್ಲಿ
ಕಸ ಎತ್ತಿ ಸುರುವಿ ಹಾಕುತ್ತವೆ.
ಕಥೆ ಹೇಳುತ್ತವೆ.
ಕಣ್ಣಿನ ದಳಗಳು ಕೊಳದಲ್ಲಿ ಮುಳುಗೇಳುತ್ತವೆ.
ನಡೆಯುತ್ತಿದ್ದಾಳೆ ಆಕೆ.
ಕಲಾಯಿ ಕಂದಿದ ತಾಮ್ರದ
ಪಾತ್ರೆಯಲ್ಲಿ ಅನ್ನಕ್ಕಿಡಬಾರದು
ಅಂದುಕೊಳ್ಳುತ್ತ ನಡೆಯುತ್ತಿದ್ದಾಳೆ.
ನಿತ್ಯಪಥದ ಮಿಗೆಯಗಲ ಅಂಕುರಿಸಿದ
ಕೊಳೆಗಳ ಕೈಗೆಟುಕುವಷ್ಟು ಕಿತ್ತೆಸೆದು
ಮತ್ತೆ ನಡೆಯುತ್ತಾಳೆ.
ಅಕ್ಷರದ ಅರಮನೆಗೆ ಪರಿಮಳವ
ಮಾರಿ ಬರಬೇಕು ಎನ್ನುತ್ತ
ನಡೆಯುತ್ತಿದ್ದಾಳೆ ಅವಳು.
*****