ಪ್ರಿಯ ಸಖಿ
ಕ್ಷಿಪ್ರಗತಿಯಲ್ಲಿ ಬದಲಾಗುತ್ತಿರುವ ಜೀವನ ವಿಧಾನದಿಂದ ನಿಧಾನಕ್ಕೆ ನಾವು ನೈಜತೆಯಿಂದ ಕೃತಕತೆಯೆಡೆಗೆ ಮುಖ ಮಾಡಿ ನಡೆಯುತ್ತಿದ್ದೇವೆ. ನಮ್ಮ ಒಂದು ದಿನದ ದಿನಚರಿಯನ್ನು ನಮ್ಮ ನಡವಳಿಕೆ, ಮಾತು ಕೃತಿಗಳನ್ನು ಗಮನಿಸಿದರೆ ನಾವೆಷ್ಟು ಕೃತಕವಾಗುತ್ತಿದ್ದೇವೆ ಎಂದು ತನ್ನಷ್ಟಕ್ಕೇ ಗೋಚರವಾಗುತ್ತಾ ಸಾಗುತ್ತದೆ. ಇಂದು ಆಧುನಿಕ ಮಾನವನ ನಡೆನುಡಿಗಳೆಲ್ಲಾ ವ್ಯವಹಾರಿಕವಾಗಿವೆ. ತನಗೆ ಇಷ್ಟವಿರಲಿ ಬಿಡಲಿ ಕಾರ್ಯಸಾಧನೆಗೆ ಅನಿವಾರ್ಯವೆಂಬಂತೆ ಹಲವಾರು ಮುಖವಾಡಗಳನ್ನು ತೊಟ್ಟುಕೊಂಡು ಬಿಟ್ಟಿದ್ದಾನೆ. ಕೆಲವೊಮ್ಮೆ ತನ್ನ ನಿಜ ಮುಖ ಯಾವುದು? ಮುಖವಾಡ ಯಾವುದು? ಎಂಬುದೇ ಅವನಿಗೆ ಗೊಂದಲವಾಗುವಷ್ಟು ಮುಖವಾಡಗಳು ಇಂದು ಪ್ರಮುಖ ಪಾತ್ರ ವಹಿಸುತ್ತಿವೆ.
ಆದರೆ ಸೂಕ್ಷ್ಮ ವ್ಯಕ್ತಿಯೊಬ್ಬನಿಗೆ ತನ್ನ ನೈಜ ಮುಖ ಸದಾ ಕಾಡುತ್ತಿರುತ್ತದೆ. ನೈಜ, ಸೂಕ್ಷ್ಮ ಭಾವನೆಗಳು ಕೃತಕತೆಯ ದಾಳಿಯಿಂದ ಮನದಾಳದಲ್ಲಿ ಸದಾ ನಲುಗುತ್ತಿರುತ್ತದೆ. ವ್ಯಕ್ತಿ ಹೆಚ್ಚು ಹೆಚ್ಚು ಮಹತ್ವಾಕಾಂಕ್ಷಿ, ಅಹಂಕಾರಿ, ಆಶೆಬುರುಕನಾದಷ್ಟೂ ಅವನ ಈ ಎಲ್ಲಾ ಗುಣಗಳ ಪೂರೈಕೆಗಾಗಿ ತನ್ನ ಸುತ್ತಲೂ ಕೋಟೆಗಳನ್ನು ಕಟ್ಟಿಕೊಳ್ಳುತ್ತಾ ಹೋಗುತ್ತಾನೆ. ಜೊತೆಗೆ ಹೆಚ್ಚು ಮುಖವಾಡಗಳನ್ನು
ತೊಟ್ಟುಕೊಳ್ಳುತ್ತಾ ಸಾಗುತ್ತಾನೆ. ಹಾಗೇ ತಾನು ಹಿರಿಯ, ದೊಡ್ಡವ್ಯಕ್ತಿ, ಪ್ರತಿಭಾವಂತ, ಶ್ರೇಷ್ಟ, ಗೌರವಾನ್ವಿತ ಎಂಬೆಲ್ಲಾ ಭ್ರಮೆಗಳು ತಲೆಯನ್ನು ಹೊಕ್ಕರೆ ಅದನ್ನು ಪೂರೈಸುವ ಸಲುವಾಗಿಯೂ ತಾನಾಗಿಲ್ಲದ್ದರ, ಆದರೆ ತಾನು ಭ್ರಮಿಸಿದ್ದರಂತೆ ಕಾಣಲು ಬಲವಂತಕ್ಕೆ ಮುಖವಾಡಗಳನ್ನು ಹಾಕಿಕೊಂಡು ಪೋಸುಗಳನ್ನು ಕೊಡಲು ಪ್ರಾರಂಭಿಸಿ ಬಿಡುತ್ತಾನೆ.
ಸಖಿ, ಆದರೆ ಇವೆಲ್ಲಾ ಕೃತಕತೆಗಳು, ಮುಖವಾಡಗಳು, ನಾಟಕೀಯತೆಗಳು ಒಂದಿಲೊಮ್ಮೆ ವ್ಯಕ್ತಿಗೋ ಇಡೀ ಮಾನವ ಜನಾಂಗಕ್ಕೋ ಅಸಹ್ಯ ತರಿಸುವುದೇ ಇಲ್ಲವೇ? ಅಂತಹ ಕಾಲ ಬಹಳ ಬೇಗ ಬರಲಿ. ನಾವು ಮತ್ತೆ ನಮ್ಮ ನೈಜತೆಗೆ ಬೆಲೆ ಕೊಡುವಂತಾಗಲಿ, ನೈಸರ್ಗಿಕ ಭಾವನೆಗಳನ್ನು ಅರ್ಧೈಸಿಕೊಳ್ಳುವಂತಾಗಲಿ. ಈ ಎಲ್ಲಾ ಮುಖವಾಡಗಳನ್ನು ವ್ಯವಹಾರಿಕತೆಯನ್ನು ಮೀರಿ ನಮಗೆ ನಾವು ಸತ್ಯವಾಗುತ್ತಾ, ಪಾರದರ್ಶಕವಾಗುತ್ತಾ, ಹೋಗುವುದು ಸಾಧ್ಯವೇ ಇಲ್ಲವೇ? ಆ ದಿಕ್ಕಿನೆಡೆಗೆ ನಡೆದಾದರೂ ನೋಡಬೇಕೆಂಬ ಆಸೆ ಈ ಮನುಕುಲಕ್ಕೆ ಬರಬೇಕಲ್ಲವೇ?
ಹೀಗಾದಾಗ ನಮಗೆ ಯಾವ ಧರ್ಮ, ನೀತಿ, ಕಾನೂನು, ಶಾಸ್ತ್ರಗಳೂ ಬೇಕಿಲ್ಲ. ಏಕೆಂದರೆ ಸೂಕ್ಷ್ಮ ಸಂವೇದನೆಗಳಿಗೆ ಮಿಡಿಯುವ ನಮ್ಮ ಪ್ರಾಮಾಣಿಕ ನೈಜತೆ ಆಗ ನಮ್ಮೊಂದಿಗಿರುತ್ತದೆ. ಮನಸ್ಸೆಂಬ ಮಾನದಂಡ ಜೊತೆಗಿರುವ ವ್ಯಕ್ತಿಗೆ ತಪ್ಪು ಸರಿಗಳನ್ನು ತಾನೇ ನಿರ್ಧರಿಸಬಲ್ಲ ಸ್ಥೈರ್ಯವೂ ಇರುತ್ತದೆ. ಹೀಗಾದಾಗ ಬೇರೆ ಚೌಕಟ್ಟುಗಳೆಲ್ಲಾ ಏಕೆ?
ಸಖಿ, ಈ ವ್ಯವಹಾರದ ಬದುಕಿನಲ್ಲಿ ನಿತ್ಯವೂ ನಲುಗುತ್ತಿರುವ ನಮ್ಮ ನೈಜ ಸೂಕ್ಷ್ಮತೆಗಳನ್ನು ಇನ್ನಾದರೂ ಉಳಿಸಿಕೊಳ್ಳಲು ಪ್ರಯತ್ನಿಸೋಣ, ಬೇರೆ ಬೇರೆ ಸಂಸ್ಕೃತಿಯ ಧಾಳಿಗೆ ಈಡಾಗುವ ಮೊದಲು ನಮ್ಮ ನಮ್ಮ ಮನದ ಸ್ವಧರ್ಮಕ್ಕೆ ಹಿಂತಿರುಗೋಣ. ಅಲ್ಲಿಯೇ ನಮ್ಮ ನಿಜವಾದ ನೆಲೆಗಳಿರುವುದು. ಈ ಬದುಕಿಗೊಂದು ಬೆಲೆಯಿರುವುದು, ಅಲ್ಲವೇ ಸಖಿ ?
*****