ಎಲ್ಲಮ್ಮನ ಜಾತ್ರೆಗೆ ಬಲ್ಲವರು ಹೋಗಿ ನೋಡಿಲಿಬೇಕು
ಅಲ್ಲಮಪ್ರಭುವಿನ ಮೇಲಡಿ ದಟ್ಟಿನ ಚಳ್ಳುಗುರ್ಕೊಳ್ಳದ
ಕಲ್ಲೊಳು ಜನಿಸಿ ಬಲು ಚಲುವೆ ಎನಿಸಿ ಕಲಿಯುಗದೊಳು ಮರೆದ
ಸಲ್ಲಲಿತದಿ ಶರ್ವಾಣಿಯ ಜಾತ್ರೆಗೆ ||೧||
ಏಳುಕೊಳ್ಳ ಸರೋವರ ಒಂದು ಅಲ್ಲಿಳಿದಳೋ ಬಂದು
ತಾಳ ಜಾಗುಟಿ ಗೋಳಿಡುತಲಿ ಚೌಡಿಕೆ
ಮೇಳ ಸಹಿತ ಉಧೋ ಎಂಬುವ ಗಾನಕೆ
ಬಾಳ ವಿಲಾಸದಿ ಮೈಮೇಲೆ ರೋಮಾಂಚನವೇಳುವ ಮಹಾಂ-
ಕಾಳಿಯ ಜಾತ್ರೆಗೆ ಬಲ್ಲವರು ಹೋಗಿ ನೋಡಲಿ ಬೇಕು ||೨||
ಮಂಡಲ ಹೊತ್ತು ಮೆರದಂಥಾಕಿ ಬ್ರ-
ಹ್ಮಾಂಡಕ ಸೊಕ್ಕಿ ನವಖಂಡ ಅ-
ಜಾಂಡಕ ತಾಕಿ ಜಗತ್ಪಂಡಿತರಿಗೆ ಪಾವನಾತ್ಮಳಾಗಿ ಸುಖ
ತಾಂಡವ ತೇಜ ಕರಂಡಿ ಎನಿಸಿ ತಾ
ಗೊಂಡು ತಾಳಿ ಮುತ್ತೈದಿ ಹುಣ್ಣಿವೆ ||೩||
ರೇಣುಕಾತ್ಮಜೆಯಾಗಿ ಜನಿಸಿ
ತನು ಮನಗಳಿಂದ ತೋಷವ ಪಡಿಸಿ
ಕ್ಷೋಣಿಯೊಳು ಜಮದಗ್ನಿ ವರಿಸಿ
ಗೋಣಕೊಯಿಸಿ ಕುಣಿಸುತ ಲೋಕದಿ
ಮಾಣದೆ ಮುನಿಗಳ ಮೌನಗೊಳಿಸಿದಿ
ಜಾಣಗಳೆಣಿಪ ಜಗದಂಬೆಯ ಜಾತ್ರೆಗೆ ||೪||
ಹಡೆದ ಮಗನೊಳು ಹಗೆಯವ ತಾಳಿ
ಕಡು ಹರುಷದಿ ಎಕ್ಕಯ್ಯಗ ಪೇಳಿ
ಒಡಗೂಡಿದ ಋಷಿಗಳಿಗೆಲ್ಲ ಬಂಗಿ
ಪುಡಿ ರಸವನು ಕುಡಿಸಿ ಜಗವನು ಸಲುಹಿದ
ಒಡೆಯ ಶಿಶುನಾಳಧೀಶನ ಮಡದಿಯ ಜಾತ್ರೆಗೆ ||೫||
* * * *