ಅಂತ ಕರಣ ಒಸರಿಸಿದ
ರಸಪದದ ರಾಗ ಹರಿವ
ನದಿಯ ಜುಳು ಜುಳು
ಸಪ್ತಸ್ವರವಾದ ಸಪ್ತರ್ಷಿಮಂಡಲ
ಮಿನುಗು ಮಿಂಚು ರಸಭಾವ
ಎಲ್ಲ ತಲ್ಲಣಗಳ ದಾಟಿ
ಒಡಲಿಂದ ಒಡಲಿಗೆ ಸೇರುವ
ಅಂತರಂಗದ ಸಮುದ್ರ.
ವೃಷ್ಠಿ ಸಮಷ್ಠಿಯ ಮಂಗಳ ಹಾಸು
ಬೀಸಿದ ಹೃದಯದಲಿ ಶೀವನ ನಟುವಾಂಗ
ತಿಳಿಗಾಳಿಯ ಗುಂಟ ಹರಡಿ ಹಾಸಿ ಗಂಧ
ಪ್ರಣೀತ ಊದಿದ ಕೊಳಲು ಗಾನ ಹರಸಿ
ಸನ್ಮಾರ್ಗ ತುಂಬ ಚಿನ್ನದ ಗರಿಗಳು
ಹಸಿರು ಹಬ್ಬಿದ ಸಿರಿಬೋಗ ಮಳೆಹರಿದು
ಇಳಿದು ಬಂತು ಮೇಲಿನಿಂದ ಜೀವ ರಾಗ.
ಮನದೊಳಗೆ ಸೆಲೆಒಡೆದ ತೀವ್ರರಾಗ
ಹನಿಹನಿ ಇಬ್ಬನಿ ಮನದನಿಯಲಿ ಇಳಿದು
ಎದೆಯಿಂದ ಎದೆಗೆ ಕೊರಳಿನಿಂದ ಕೊರಳಿಗೆ
ಬಣ್ಣದೋಕುಳಿಯಾಡಿ ಮರಳಿ ಮುರಳಿಗಾನ
ಪ್ರೀತಿ ಹರಿದ ಹಕ್ಕಿಕೊರಳ ತುಂಬ ಇನಿಧ್ವನಿ
ಬಯಲು ತುಂಬ ಗಂಧರ್ವಲೋಕ ತನತನ
ಆತ್ಮಪರಮಾತ್ಮನ ಲೀನ ನಿವೇದನೆ ನಿನ್ನ ಹರವಿನಲಿ.
*****