ಬೆಳ್ಳಾನೆ ಬೆಳದಿಂಗಳು
ಬೆಳ್ಳಿಯ ಕೋಲ್ ಮಿಂಚು
ಬೆಳ್ಳಿ ಕುದುರೆ ಏರಿ ಬಂದಾನೆ
ನನ್ನ ಸರದಾರ||ಽಽಽಽ
ಮನಸು ಲಲ್ಲೆಯಾಡಕೊಂಡ್ಯಾವೆ
ಅವನ ನೋಡಿ||ಽಽಽಽ
ಅಂಬರದ ಹೊಂಬೆಳಕಲ್ಲಿ
ಇಬ್ಬನಿಯ ತಂಪಲ್ಲಿ ಜೊತೆಗೂಡಿ
ಆಡಿದ ಆಟದಾಗ
ನಾಚಿ ಮೊಗ್ಗಾದೆನೆ||ಽಽಽಽ
ಗಂಡು: ತಾಸು ಹೊತ್ತಿನ ಚೋರಿ
ಕಣ್ಣ ಮುಚ್ಚಾಲೆ ಆಡಿ
ಕಣ್ಣ್‌ಸನ್ನೆ ನೋಟವ ಬೀರಿ
ಕರೆದಾಳೆ ನನ್ನ ಗೆಳತಿ
ಸುಂಕದ ಕೋಯ್ಲ ಬೆಡಗಿ
ನನ್ನವಳೇಽಽಽಽ ನನ್ನ ಗೆಳತಿ||
ಹೆಣ್ಣು: ತೊಟ್ಟ ಜರಿಯ ಪೇಟ
ಉಟ್ಟ ಪಂಚೆ ರೇಶಿಮೆ
ಕೆಂಪಾನೆ ಹಣೆಯ ತಿಲಕವನಿರಿಸಿ
ಚಿಗುರ ಮೀಸೆ ತಿರುವಿದಾಗ ನನ್ನ ಸರದಾರ
ರಾಜಠೀವಿ ದುಂಡು ಮೊಗದಾಗಽಽಽಽ
ಬಳಿಗೆ ಬಂದಾನೆ ನನ್ನ ಸೆಳೆದಾನೆ
ಮಲ್ಲಿಗೆ ದಂಡೆಯ ಮುಡಿಸ್ಯಾನೆ
ನನ್ನ ನಲ್ಲಾಽಽಽಽ
ಮೆಲ್ಲನೆ ಕೈಯ ಹಿಡಿದ್ಯಾನೆಽಽಽಽ
ಗಂಡು: ಪಚ್ಚೆ ಹಸಿರ ಹಾಸಿಗೆ
ಹೆಜ್ಜೆ ಹೆಜ್ಜೆಯಂದವ ಕೂಡಿ
ಲಜ್ಜೆಯಿಂದಲಿ ಬಳುಕುವ ಪೋರಿ
ಮುದ್ದು ಮೊಗ್ಗ ಅರಳಿ ಲತೆಯಂತೆ
ಮೈದೋರಿಽಽಽಽ
ಮುಂಗುರುಳ ನಗೆ ಬೀರಿ ಸೆಳೆದಾಳೆ
ಸಗ್ಗದ ಸಿರಿಯ ತೋರ್‍ಯಾಳೆ
ಕಾಲ್‌ಗೆಜ್ಜೆ ಹಿಗ್ಗನ್ನು ತಂದು ಮೆರೆಸ್ಯಾಳೇಽಽಽಽ
ಹೆಣ್ಣು: ಸುಗ್ಗಿಯ ಸಿರಿದೋರಿ
ನಡು ಕಟ್ಟೆ ನಗೆ ಬೀರಿ
ರಾಶಿ ರಾಶಿ ಭಾಗ್ಯವ ತಂದಾನೆ
ಮುತ್ತಿನ ಹಾರ ತೊಡಿಸ್ಯಾನೆ
ಸಿರಿದೇವಿವೆ||ಽಽಽಽ
ನನ್ನ ಮನವ ತಣಿಸ್ಯಾನೆ
ತಂದಾನಾನಿ ತಾನಿ ಕುಣಿಸ್ಯಾನೆ
ಗಂಡು: ನಡು ಗೆಜ್ಜೆಡಾಬಿನ ಬಿಂಕದ ಗೆಳತಿ ಬಿನ್ನಾಣಗಿತ್ತಿ
ಸಾಕು ಸಾಕೆಲೆ ಮಾಟಗಾತಿ ಅಂದಗಾತಿ
ಸಂಕರಮಣ ಚಪ್ಪರದಾಗೆ ಮದುವಣಗಿತ್ತಿ
ಹಸನಾದ ಹಸೆ ಮೇಲೆ ನಿಂದವಳೆ
ಹಸಿರಾದ ಬಾಳಿಗೆ ಉಸಿರಾಗು ನನ್ನವಳೆ
ತುಂಬಿದ ಬಾಳಿಗೆ ಹೊನ್ನ ಕಳಶವ ಇಟ್ಟವಳೆಽಽಽಽ
ಹೆಣ್ಣು: ನಿನ್ನ ಮಾತಿಗೆ ಮನ ಸೋತು ನಿಂದೆನೋ
ಹಸೆ ಮಣೆಯ ಏರಿ ಹೊಸತನದ ಬಾಳ್ವೆಗೆ
ಉಷೆಯಾಗಿ ಶಶಿ ನಿನ್ನಲ್ಲಿ ನಾ ಒಂದಾಗಿ ಬರುವೆನೋ
ಬೆಳ್ಳಿ ಕುದರಿ ಏರಿ ಚೈತ್ರದಾ ಹೊನಲಿಗೆ
ನಾ ಮಿಂದು ಬರುವೆನೋಽಽಽಽ
ಭೂ ತಾಯ ಮಡಿಲ ಹೂವಾಗಿ ನಲಿಯುವೆನೋಽಽಽಽ
*****