ತನು ಮನ ಸೆಳೆಯುವ
ಬೃಂದಾವನಕೆ ಹೋಗುವ ಬಾರೆ ಸಖಿ
ಕರೆಯೋಲೆಯನಿತ್ತು ಕರೆಯುತಿದೆ
ಬೃಂದಾವನ ||

ನವರಸ ಶೃಂಗಾರ ರಸದೌತಣ
ನವ ಚೈತನ್ಯ ಮೈತಾಳಿತ್ತು
ರಾಧೆ ಕೃಷ್ಣೆಯರ ಗೋಪಿಕೆಯರ
ವನ ಬೃಂದಾವನ ||

ಕಿನ್ನರ ಲೋಕದ ಕಿನ್ನರಿಯ ನರ್‍ತನ
ಜಲದಿನಿಂದು ಮೆರೆವ ಸ್ವರ್‍ಗ
ಮಧುಸೂದನನ ವನ ಬಿನ್ನಾಣ
ಇಳೆಯ ಗೀತಗಾನ ಬೃಂದಾವನ ||

ಪುಷ್ಪಕ ವಿಮಾನ ರಾಜಹಂಸ ತೂಗಿ
ಆಡಿಸಿತ್ತು ಜೋಗುಳ ಬೆಳ್ಳಿಯ
ಕಿರೀಟವ ಧರಿಸಿ ಝೆಂಕಾರದಲಿ
ಜಲದಿ ರಾಜ ನಿಂದು ಹರಿಸಿದವನ ಬೃಂದಾವನ ||

ಕೊಳಲ ಗಾನದಲಿ ನಾಟ್ಯವಾಡುವ ಅಪ್ಸರೆ
ಬಳಕುತ ಬಳ್ಳಿಲತೆಗಳಂತೆ ರಮಣಿಯ
ರಾಗ ಭಂಗಿಯಲಿ ಸೋಪಾನ
ಕೆಳೆವಿತ್ತು ಕರೆಯಿತು ಬೃಂದಾವನ ||
*****