ಅವ್ವ ಕೇಳೇ ನಾನೊಂದ ಕನಸ ಕಂಡೇ….
ಅವ್ವ ಕೇಳೇ ಕನಸೊಂದ ಕಂಡೆನೆ….
ಮುಂಗೋಳಿ ಕೂಗಿತ್ತು ಮೂಡಲ್ಲಿ ಕೆಂಪಿತ್ತು
ಬೆಳ್ಳಿಯೂ ಮರಳಿತ್ತು ಹಕ್ಕಿಯೂ ಹಾಡಿತ್ತು
ಮಲ್ಲಿಗೆ ಸಂಪಿಗೆ ಘಮ್ಮೆಂದು ಬಿರಿದಿತ್ತು
ಹಾದಿಲಿ ಇಬ್ಬನಿಯು ಮುತ್ತಾಗಿ ಸುರಿದಿತ್ತು. ||ಅವ್ವ||
ಕಣ್ಣರೆಪ್ಪೆ ಬಿಗಿಯೆ ಕದ ತಟ್ಟಿ ಒಳಬಂದ
ಕಾರಿರುಳ ಕೆಂಜೆಡೆಗೆ ಚಂದಿರನ ಮುಡಿದಿದ್ದ
ಕಾಲ್ಗಜ್ಜೆ ಕುಣಿಸುತ್ತ ಶರಣು ಶರಣು ಅಂದ
ಮುಕ್ಕಣ್ಣ ತಾನೆಂದು ಮುಂಗೈಗೆ ಮುತ್ತಿಟ್ಟ
ಕೀಟಲೆ ನಗೆ ನಕ್ಕು ಕಪ್ಪರವ ಮುಂದಿಟ್ಟ
ಒಲ್ಲೆ ಎಂದರೂ ಬಿಡದೆ ಒಲವು ಬೇಡಿದನವ್ವ….
ಮುದ್ದಾಗಿ ಮಾತಾಡಿ ಮರುಳು ಮಾಡಿದನವ್ವ ||ಅವ್ವ||
ತುಂಬೆಯ ಹೂ ಬಿಡಿಸಿ ತುರುಬಿಗೆ ಮುಡಿಸಿದ
ಒಂದೊಂದು ಕಿವಿಯಲ್ಲೂ ದುಂಬಿಯ ಇರಿಸಿದ
ಮಿಂಚಿನ ಹುಳೂವಲ್ಲೇ ಮೂಗುತಿಯ ಮಾಡಿದ
ನೇರಳೆ ಹಣ್ಣಿನ ಹಾರವ ತೊಡಿಸಿದ
ಕೀಟಲೆ ನಗೆ ನಕ್ಕು ಕಪ್ಪರವ ಮುಂದಿಟ್ಟ
ಒಲ್ಲೆ ಎಂದರೂ ಬಿಡದೆ ಒಲವು ಬೇಡಿದನವ್ವ…..
ಮುದ್ದಾಗಿ ಮಾತಾಡಿ ಮರುಳು ಮಾಡಿದನವ್ವ ||ಅವ್ವ||
ಹುಲಿಚರ್‍ಮ ಹೊದ್ದರೂ ಹಾಲುಮನಸಿನ ಹುಡುಗ
ಡೊಳ್ಳ ಬಾರಿಸಿ, ಢಕ್ಕೆಯ ಬಡಿದು, ಡಮರುಗ ನುಡಿಸಿದ
ನವಿಲ ಹಾಗೆ ಕುಣಿದು ಮಿಂಚು ಮಳೆ ಕರೆದ
ಹಕ್ಕಿಪಿಕ್ಕಿಯಂಗೆ ಕೂಗಿ ನಕ್ಕು ನಗಿಸಿದ
ಕೀಟಲೆ ನಗೆ ನಕ್ಕು ಕಪ್ಪರವ ಮುಂದಿಟ್ಟ
ಒಲ್ಲೆ ಎಂದರೂ ಬಿಡದೆ ಒಲವು ಬೇಡಿದನವ್ವ….
ಮುದ್ದಾಗಿ ಮಾತಾಡಿ ಮರಳು ಮಾಡಿದನವ್ವ ||ಅವ್ವ||
ಚಪ್ಪರ ತೋರಣ ಒಡವೆ ಓಲಗವಿಲ್ಲ
ಮಂಟಪ ಮಂಡಿಗೆ ಧಾರೆ ದಿಬ್ಬಣವಿಲ್ಲ
ಆರತಿ ಎತ್ತಲು ಮುತ್ತೈದೆಯರಿಲ್ಲ
ಮಂತ್ರಗಳಿಲ್ಲ ಶಾಸ್ತ್ರಗಳಿಲ್ಲ….
ಮಸಣದೊಳಗೆ ಮದುವಣಗಿತ್ತಿ ನಾನದೆವನವ್ವ….
ಬೂದಿಬಡುಕನ ಬಾಳ ಬೆಳಗಿದನವ್ವ ||ಅವ್ವ||
ಕದಳಿಯ ಬನದೊಳಗೆ ಕಾದಿಹನವ್ವ….
ಕಣಗಿಲೆ ಹೂ ಹಾಸಿ ಕಾದಿಹನವ್ವ….
ಕಣ್ಣ ಬತ್ತಿಯ ಉರಿಸಿ ಕಾದಿಹನವ್ವ….
ಜನುಮ ಜನುಮದ ಒಲವು ಫಲಗೂಡಿತವ್ವ….
ಹುಟ್ಟು-ಸಾವಿನಾಚೆಯ ದಡದಿ ಮನೆ ಮಾಡಿಹನವ್ವ
ತಪ್ಪೋ ಒಪ್ಪೋ ಮನ್ನಿಸಿ ಹರಸವ್ವ
ತಪ್ಪೊ ಒಪ್ಪೋ ಹರಸಿ ನೀ ಕಳಿಸವ್ವ. ||ಅವ್ವ||
*****