ನಿನ್ನ ಸಿಟ್ಟು ಸೆಡವುಗಳನ್ನು
ದಿಕ್ಕರಿಸುತ್ತೇನೆ.
ನಿನ್ನ ಪಂಜಿನಂತಹ ಕೈಗಳು
ಸುಕೋಮಲ ಹೂಗಳನ್ನು
ಹೊಸಕಿ ಹಾಕುವುದನ್ನೂ
ನಿನ್ನ ಕೆಂಡದಂತಹ ಕಣ್ಣುಗಳು
ಕೋಗಿಲೆಯ ಹಾಡುಗಳನ್ನು
ನಿಷ್ಕರುಣೆಯಿಂದ ಸುಡುವುದನ್ನೂ
ಧಿಕ್ಕರಿಸುತ್ತೇನೆ.
ನೀನು ಮೈಯೆಲ್ಲಾ
ಕಿಡಿಯಾಗಿರುವ ತನಕ
ಈ ಚೈತನ್ಯಮಯವಾದ
ಕಾಡನ್ನು ಪ್ರವೇಶಿಸಲು ನಿಷೇಧವಿದೆ.
ನಿನ್ನ ಕ್ರೌರ್ಯ, ಆಕ್ರೋಶಗಳನ್ನು
ಧಿಕ್ಕರಿಸುತ್ತೇನೆ.
ನಿನ್ನ ಸಾವಿರ ಸಾವಿರ
ನದಿಗಳಲ್ಲಿ ಬಂದೂಕಿನ
ಅಲೆಗಳು ತೇಲುವುದನ್ನೂ
ಪುಟಿಯುವ ಮೀನುಗಳ ಬದಲು
ಗುಂಡುಗಳು ಹಾರಾಡುವುದನ್ನೂ
ಓಕುಳಿಯ ಬದಲು
ನೆತ್ತರು ಹರಿಯುವುದನ್ನೂ
ಧಿಕ್ಕರಿಸುತ್ತೇನೆ.
ನೀನು ಮೈಯೆಲ್ಲಾ
ಬಂದೂಕಾಗಿರುವ ತನಕ
ಈ ಪ್ರೇಮಮಯ
ಸಮುದ್ರವನ್ನು ಪ್ರವೇಶಿಸಲು
ನಿಷೇಧವಿದೆ
ನಿನ್ನನ್ನು ಒಪ್ಪಿಕೊಳ್ಳುವುದೆಂದರೆ
ಈ ನೆಲದ ಒಡಲಿಂದ
ಕೇವಲ ಜ್ವಾಲಾಮುಖಿಗಳನ್ನೇ
ಅಗೆಯಬೇಕು.
ತಂಪಾದ ಕಾಡುಗಳನ್ನೂ
ತಣ್ಣನೆಯ ನದಿಗಳನ್ನೂ
ನಿರಾಕರಿಸಬೇಕು.
ನಿನ್ನನ್ನು ಒಪ್ಪಿಕೊಳ್ಳಬೇಕೆಂದರೆ
ಆ ಆಕಾಶದ ಒಡಲಲ್ಲಿ
ಕೇವಲ ಸುಡುವ
ಸೂರ್ಯರನ್ನೆ ಎಣಿಸಬೇಕು
ತಣ್ಣನೆಯ ಮೋಡಗಳನ್ನೂ
ತಂಪಾದ ಚಂದ್ರರನ್ನೂ
ನಿರಾಕರಿಸಬೇಕು.
ಜ್ವಾಲಾಮುಖಿಯೇ ಆಗಲಿ
ಸೂರ್ಯನೇ ಆಗಲಿ
ಸಿಟ್ಟಿನಿಂದ, ಆಕ್ರೋಶದಿಂದ
ಯಾರನ್ನೂ ಸುಟ್ಟ ದಾಖಲೆಗಳಿಲ್ಲ.
ನೀನು ಭೂಮಿಯ-ಆಕಾಶದ
ನಿಯಮಗಳನ್ನು ಮೀರಲಾರೆ.
*****