ಕನಸುಗಳು ಹೆಚ್ಚಿ ರಾತ್ರಿ
ಕಪ್ಪು ಕಾಡಿಗೆ ಕಣ್ಣುಗಳಿಗೆ
ಮರದಲಿ ಸದ್ದಿಲ್ಲದೇ ಅರಳುವ
ಎಲೆಗಳೂ ಹಸಿರು ಸೇರಿಸುತ್ತವೆ
ಅರಸುತ ಅಲೆದಾಡುವ ಹೊರಳಾಡುವ
ಮೂಕಮರ್ವಕ ಹಾಸಿಗೆಯಲಿ
ದಪ್ಪ ಗಾಜಿನ ಕಿಟಕಿಯಾಚೆ ಚಿಕ್ಕಿಗಳು.
ಹೂವು ತುಂಬಿದ ಮರದ ಅಡಿ
ಹಾಸಿವೆ ಉದುರಿದ ಫಲಕುಗಳು
ನೆನಪುಗಳ ದಿವ್ಯತೆ ಸುಗಂಧವಾಗಿ
ಎದೆಯ ಕೊಳೆದತುಂಬ ಸ್ಪಂದನದಲೆಗಳು
ಅಂಗಳಗುಡಿಸಿದಾಗ ಬೆವರಿಗೆ ಅಂಟಿಕೊಳ್ಳುವುದು
ಧೂಳಿನ ಕಣಗಳು ಸರಿಗೆಯ ಮೇಲೆ
ಹಾರಾಡುವ ಬಣ್ಣ ಬಟ್ಟೆ ಚಿಟ್ಟೆಗಳು
ಸುರಿಯುತ್ತವೆ ಓಕುಳಿ ಏಕಾಂತದಲಿ.
ಬಯಲು ಗಾಳಿ ತೇಲಿದ ಮರದ ಹಸಿರು
ಹರಿದು ಹಾಯ್ದ ಪ್ರಭೆ ಬೆಳಕಿನ ಕಿರಣಗಳು
ಭಾವ ರಾಗವಾಗಿ ಎದೆಗಿಳಿದು ಎಲ್ಲೆಲ್ಲೂ
ಚಂದ್ರಬಿಂಬ ಹೂವಿನ ಹಾಸಿಗೆ ಚಿಲಿಪಿಲಿರಾಗ
ಬೆಚ್ಚಗೆ ಗುನುಗುಣಿಸುವ ಜೋಗುಳ ಹಿಡಿದ
ಕೈಗಳ ಬಳೆಯತುಂಬ ನೀಲಿಚಿಕ್ಕಿ ತೇಲಿ
ತೂಗಿ ತೂಗಿ ಜಗದ ತೊಟ್ಟಿಲು ಅವಳ ಕೈಯಲ್ಲಿ
ರೆಕ್ಕೆ ಬಿಚ್ಚಿ ಬಯಲ ಹಾರಿದ ಹಕ್ಕಿಯ
ದಾರಿಗುಂಟ ತೇಲಿ ಹೋದ ಮಧುರ ಗಾನ
ರೊಯೈಂದು ತಿದ್ದಿ ತೀಡಿ ತಣ್ಣಗೆ ಗಾಳಿ ಗಂಧ
ಬೆರಳಿಗಂಟಿದ ಚಿಟ್ಟೆ ಬಣ್ಣದ ಸರಗ ನೂಲಿನಲಿ
ನೇಯ್ದು ಹಗುರ ದೂರ ದಾರಿ ಒಳ ದಾರಿ
ಎಳೆ ಹಿಡಿದು ಜೇಡ ನೂತ ಬಿಡುಗಡೆಯ
ಬೆಚ್ಚನೆಯ ಸ್ಪರ್ಶ ಉಳಿದಂತೆ ಈಗ ಹುಟ್ಟಿದ ಕಂದನ ಬೊಗಸೆಯಲಿ.
*****