ಯಾವ ವಿಷಾಧಗಳಿಲ್ಲ ಚೌಕಟ್ಟು ಮೀರಿ
ಅಂಕೆಇಲ್ಲದ ಆಕಾರ ಸುರುಳಿ ಸುತ್ತಿಯಾಗಿ
ಚೌಕಟ್ಟು ದಾಟಿ ನದಿ ಹರಿದು ಬಯಲು ಸೇರಿದ
ಬಯಕೆ ನನ್ನದಲ್ಲದ್ದು.
ಕಿಟಕಿಗಳ ತಬ್ಬಿದ ಗೋಡೆಗಳಾಚೆ ಇದೆ
ನೀಲಬಾನ ತುಂಬ ಚುಕ್ಕಿಗಳು ಯಾವ
ತಡೆಯಿಲ್ಲದೇ ತೇಲಿ ಮೀರಿ ಬೆಳದಿಂಗಳು
ರಾಶಿ ನನ್ನದಲ್ಲದ್ದು.
ಬಯಲ ಗೆರೆಗಳು ಚೆಲುವ ಚಿತ್ತಾರ
ಅರಿವ ಒಳಗಣ ನಿಶ್ಯಬ್ದ ಮೌನ ಕೊನೆಗೆ
ಬೆಳಕು ಹರಿಯುತ್ತದೆ ಸತತವಾಗಿ
ಮಾತಿನಾಚೆ ಇರದ ಹುಡುಕಾಟ.
ಗುಬ್ಬಿ ಕಾಗೆ ಕೋಗಿಲೆ ಗಿಳಿವಿಂಡು
ಉತ್ತರದ ಹೊಲದ ಬದುವಿನಲಿ ಉಲಿದಾಗ
ದೃಷ್ಠಿಗೆ ಸ್ಪರ್ಶ ಹುಟ್ಟಿ ಹೊಸರೂಪ ಹೊಸಹಾಡು
ಇಬ್ಬನಿಯ ಹನಿಯಲಿ ತಂಪು ಬಿಂಬ.
ನನ್ನದಲ್ಲದ್ದು ನಿನ್ನದಾಗಿ, ನಿನ್ನದಲ್ಲದ್ದು ನನ್ನದಾಗಿ
ಕಾಲಪುಟ್ಟದಲ್ಲಿ ನೆರಳಯ ಹರಡಿದ ಬೋಧಿಮರ
ಮಾತಿನಿಂದ ಮೌನಕ್ಕೆ ಹೊಂದಿದ ಆಕಾರ ಸ್ವರೂಪಗಳು
ಪ್ರತಿ ಮುಂಜಾನೆ ಹುಟ್ಟಿ ಸಂಜೆಗೆ ಅಂತ್ಯಗೊಳ್ಳುತ್ತದೆ.
*****