ಪ್ರತಿಯೊಬ್ಬ ಮನುಷ್ಯನೂ ತಾನು ಮಲಗುವ ಸಮಯದಲ್ಲಾದರೂ ತುಸು ಆತ್ಮಾವಲೋಕನ ಮಾಡಿಕೊಳ್ಳುತ್ತಾನೆ. ಏನು ಮಾಡುತ್ತಿದ್ದೇನೆ? ಯಾತಕ್ಕೆ ಮಾಡುತ್ತಿದ್ದೇನೆ? ಮಾಡುತ್ತಿರೋದು ಸರಿಯೆ, ತಪ್ಪೆ? ಹೀಗೆ ಪ್ರಶ್ನೆಗಳನ್ನ ಕೇಳ್ತ ತನ್ನ ವಿಚಾರಗಳನ್ನ ಚರ್ಚಿಗೆ ಗುರಿಪಡಿಸಿಕೊಳ್ಳುತ್ತಾನೆ. ತಾನು ಮಾಡ್ತಿರೋದು ಸರಿಯಲ್ಲ ಎಂದೆನಿಸಿದರೆ, ಮಾರನೆದಿನದಿಂದ ಹೊಸ ಜೀವ ಸುರುಮಾಡ್ತೇನೆ ಎಂಬ ಸಂಕಲ್ಪದಲ್ಲಿ ನಿದ್ರಿಸಲು ಯತ್ನಿಸುತ್ತಾನೆ. ಮಾರನೆ ದಿನ ಇದೆಲ್ಲ ಮರೆತುಹೋಗಿರಬಹುದು. ಅಥವ ನೆನಪಿನಲ್ಲಿದ್ದರೂ, ತನ್ನ ಸಂಕಲ್ಪವನ್ನವನು ಮುಂದಕ್ಕೆ ಹಾಕುತ್ತ ಹೋಗಬಹುದು. ಮಾಡಿದ ತಪ್ಪನ್ನೆ ಮತ್ತೆ ಮತ್ತೆ ಮಾಡಬಹುದು. ಕೇವಲ ಅಭ್ಯಾಸವೇ ಅವನಿಗೆ ಭಂಡಧೈರ್ಯ ತಂದುಕೊಡಬಹುದು. ಅದೇನೇ ಇದ್ದರೂ, ನಿದ್ದೆಗೆ ಮೊದಲಿನ ಆತ್ಮ ವಿಮರ್ಶೆಯಿಂದ ಯಾವನಿಗೂ ಬಿಡುಗಡೆ ಯಿಲ್ಲ.
ವಿನಯಚಂದ್ರನೊಳಗೆ ಅದು ರೇಶ್ಮಾ ದೃಷ್ಟಿಯಿಂದ ಮರೆಯಾದ ತಕ್ಷಣವೇ ಸುರುವಾಗಿತ್ತು. ಕೆಟ್ಟು ಹೋದ ರಿಮೋಟ್ ಕಂಟ್ರೋಲರನ್ನ ಗುಬ್ಬಿಮರಿಯಂತೆ ಮಡಿಲಲ್ಲಿಟ್ಟುಕೊಂಡು ಬಾಲ್ಕನಿಯಲ್ಲಿ ಚೀರೆಳೆದು ಕೂತವನೆ ಸಿಗರೇಟು ಹಚ್ಚಿ ಸೇದತೊಡಗಿದ. ಹಳೆ ತಮಿಳು ಪಿಕ್ಚರುಗಳ ನಾಯಕನಿಗೆ ಸಂಭವಿಸುವಂತೆ ಅವನಿಗೂ ಆಯಿತು. ತನ್ನೊಡಲಿಂದ ಪ್ರತಿರೂಪಿಯೊಂದು ಚಂಗನೆ ನೆಗೆದು ದೂರನಿಂತು ಹೀಯಾಳಿಸಲು ಸುರುಮಾಡಿತು. ನಿನ್ನ ಈ ಪರೋಪಕಾರಿ ಅವತಾರದ ಬೊಗಳೆಯೆಲ್ಲ ಬೇಡ. ಇದೇ ಫ್ಲೋರಿನಲ್ಲಿರೋ ಪಾರ್ಸಿ ದಂಪತಿಗಳ ಸಹಾಯಕ್ಕೆ ನೀನು ಎಂದಾದರೂ ಧಾವಿಸಿದ್ದುಂಟೇ. ಅವರಿಗೋ ವಯಸ್ಸಾಗಿದೆ. ಮಕ್ಕಳು ಹಣ ಗಳಿಸಲೆಂದು ವಿದೇಶಕ್ಕೆ ಹೋಗಿರುವರು. ಕೆಲಸದಾಕಿ ಬಾರದ ದಿನ ಆ ಪಾರ್ಸಿ ಮುದುಕಿಯೇ ಕಸದ ಡಬ್ಬವನ್ನು ಕೆಳ ತೆಗೆದುಕೊಂಡು ಹೋಗೋದನ್ನು ನೀನು ಎಷ್ಟೊಂದು ಬಾರಿ ನೋಡಿಲ್ಲ!
“ನಾ ಕೇಳೋಣಾಂತಿದ್ದೆ, ಆದರೆ ಅವರು ತಪ್ಪು ತಿಳಕೋಬಹುದು ಅಂತ ಭಯಪಟ್ಟೆ. ಇಂಥ ಫ಼್ಲಾಟುಗಳಲ್ಲಿ ಕಳ್ತನ ಇತ್ಯಾದಿ ಜಾಸ್ತಿ ಅಲ್ವೆ? ಆದ್ದರಿಂದ ಯಾರು ಯಾರನ್ನೂ ಮಾತಾಡಿಸೋಕೆ ಹೋಗಲ್ಲ. ಮಾತಾಡಿಸಿದ್ರೆ ಸಂದೇಹದಿಂದ ನೋಡ್ತಾರೆ.”
“ಆದರೂ ರೇಶ್ಮಾ ಜಿಂದಲ್ ಕಣ್ಣಿಗೆ ಬಿದ್ದ ತಕ್ಷಣ ಅವಳನ್ನ ಬೇಕಂತಲೆ ಮಾತಾಡಿಸಲು ಆತುರನಾದಿ. ಆಕೆ ಯಾರು, ಏನಂತಲೂ ನಿನಗೆ ಗೊತ್ತಿರಲಿಲ್ಲ! ನೇಬರ್ಲಿನೆಸ್ ಬಗ್ಗೆ ಬೊಗಳೆ ಬಿಟ್ಟೆ! ಮಣ್ಣಿನ ಸಂಪರ್ಕ ಅಂತ ಭಾಷಣ ಮಾಡಿದಿ! ಮಣ್ಣಿನ ಸಂಪರ್ಕ! ನಿನಗೆ ನಿಜಕ್ಕೂ ಬೇಕಾದ್ದು ಹೆಣ್ಣಿನ ಸಂಪರ್ಕ!
ಅದಕ್ಕೋಸ್ಕರ ಎಂಥ ನಾಟಕ ಕಟ್ಟೋದಕ್ಕೂ ನೀನು ತಯಾರು! ಅಲ್ದಿದ್ದರೆ ಈ ನಿನ್ನ ವೇಷ ಏನು! ಈ ಗಡ್ಡ ಏನು! ಹೆರಾಕ್ಲಿಟಸ್ ಓದಿ ತಾನೇ ಹೆರಾಕ್ಲಿಟಸ್ ಅನ್ನೋರೀತಿ ಮಾತಾಡೋದೇನು! ಪಕ್ಕಾ ವೂಮನೈಸರ್!”
“ಆದರೆ ಒಂದು ಮಾತು : ನಾ ಬೇಕಂತಲೆ ಯಾರಿಗೂ ಮೋಸ ಮಾಡ್ತ ಇಲ್ಲ. ರೇಶ್ಮಾಳನ್ನು ನಾನು ಕಣ್ಣಾರೆ ಕಂಡಿರದೆ ಇರಬಹುದು, ಆದರೆ ತರಂಗಾಂತರಗಳನ್ನು ಮರೀಬೇಡ. ನಿಜ, ಅವಳಿಗೋಸ್ಕರ ಬೇಸ್ ಮೆಂಟ್ ನಲ್ಲಿ ಕಾದು ಕುಳಿತೆ. ನಾನಾಗಿಯೆ ಮಾತಡಿಸ್ದೆ. ಬೇಡಾ ಅಂದ್ರೂ ಚೀಲಗಳನ್ನು ಹೊತ್ತುಕೊಂಡು ಹೋದೆ. ಪಾಪ! ಹತ್ತು ಮಹಡಿಗಳನ್ನ ಆಕೆ ಏರೋದಿತ್ತಲ್ಲ. ಇನ್ನು ಈ ಗಡ್ಡ, ಈ ವೇಷ ಇತ್ಯಾದಿ. ಅವು ನಿನಗೂ ಇವೆ. ಯಾಕೆಂದ್ರೆ ನೀನು ನನ್ನ ಪ್ರತಿರೂಪಿ. ಅವನ್ನ ದೂರೋದಕ್ಕೆ ನಿನಗೆ ಹಕ್ಕಿಲ್ಲ. ವೂಮನೈಸರಂತೆ ವೂಮನೈಸರ್!”
ಆ ಮಾತು ಅವನನ್ನು ತುಂಬ ಹರ್ಟ್ ಮಾಡಿತ್ತು; ಏನೀ ಶಬ್ದದ ನಿಜವಾದ ಅರ್ಥ ಎಂದು ಚಿಂತಿಸಿದ. ಆಮೇಲೆ ಒಳಕ್ಕೆ ಬಂದು ನಿಘಂಟುವಿನಲ್ಲಿ ಹುಡುಕಿದ. ವೂಮನೈಸ್ ಎಂಬ ಕ್ರಿಯಾಪದದ ಅರ್ಥ “ಕೇವಲ ತಾತ್ಕಾಲಿಕ ಲೈಂಕಾಸಕ್ತಿಯ ಉಪಶಮನಕ್ಕೋಸ್ಕರ ಹೆಣ್ಣುಗಳ ಹಿಂದೆ ಬೀಳುವುದು,” ಎಂದಿತ್ತು. ವೂಮನೈಸರ್ ಎಂಬ ನಾಮಪದದ ಅರ್ಥ “ವೂಮನೈಸ್ ಮಾಡುವವ” ಎಂದು ಕೊಟ್ಟಿತ್ತು. ಎಂದರೆ ಇಷ್ಟೆ; ಈ ಹಂತದಲ್ಲಂತೂ ತನ್ನನ್ನು ವೂಮನೈಸರ್ ಎಂದು ಕರೆಯುವಂತಿಲ್ಲ. ನಿಘಂಟುವಿನ ವಿವರಣೆ ಯಲ್ಲಿರುವ ಹೆಣ್ಣುಗಳು ಎನ್ನುವ ಬಹುವಚನ ತನ್ನ ಕೆಲಸಕಾರ್ಯಗಳಿಗೆ ಇನ್ನೂ ಅನ್ವಯಿಸುವುದಿಲ್ಲ. ಒಂದು ವೇಳೆ ತಾನು ಯಾರದಾದರೂ ಬೆನ್ನು ಹತ್ತಿದ್ದರೆ ಅದು ರೇಶ್ಮಳದು ಮಾತ್ರ. ವಿನಯಚಂದ್ರನಿಗೀಗ ವಿಚಿತ್ರವಾದ ಸಮಾಧಾನವಾಯಿತು. ನಿಘಂಟುಗಳು ನಮ್ಮ ನಮ್ಮ ಆಂತರಿಕ ಗೊಂದಲಗಳನ್ನು ತೊಡೆದು ಹಾಕುತ್ತವೆ. ಸಮಸ್ಯೆಗಳನ್ನು ಸ್ಪಷ್ಟಗೊಳಿಸುತ್ತವೆ ಹಾಗೂ ಆ ಮೂಲಕ ಬಗೆಹರಿಸುತ್ತವೆ. ಇನ್ನು ಯಾವ ಪ್ರತಿರೂಪಿಯೂ ತನ್ನನ್ನು ವೂಮನೈಸರೆಂದು ಹೀಯಾಳಿಸುವಂತಿಲ್ಲ. ಅಲ್ಲದೆ ಆ ಪಾರ್ಸಿ ದಂಪತಿಗಳ ಸಂಗತಿಯೇ ಬೇರೆ. ಅವರು ಯಾರ ಜತೆಯೂ ಮಾತಾಡೋದಿಲ್ಲ. ದುಃಖದಿಂದಿದ್ದಾರೆಂದು ಯಾತಕ್ಕೆ ತಿಳಕೋಬೇಕು? ಸುಖದಿಂದ್ಲೆ ಇರಬಹುದು.
ರಿಮೋಟ್ ಕಂಟ್ರೋಲರನ್ನು ಪರೀಕ್ಷಿಸಿ ನೋಡಿದ, ಕಳಚಿ ಬ್ಯಾಟರಿಗಳ ಚೇಂಬರನ್ನು ನೋಡಿದರೆ ಅಲ್ಲಿ ಇನ್ನೂ ನೀರಿನ ಪಸೆ ಹಾಗೇ ಇತ್ತು. ಒಳಗಿನ ರಚನೆಗಳೆಲ್ಲಾ ಹಾಳಾಗಿವೆ ಅನಿಸಿತು. ಇದೊಂದು ಪರೀಕ್ಷೆಯ ಕಾಲ. ಏನು ಮಾಡುವುದು? ತಕ್ಷಣ ಕಾರ್ಯನಿರತನಾಗದೇ ವಿಧಿಯಿಲ್ಲ. ಲೋಕದ ಯಾವುದೇ ಸಮಸ್ಯೆಗೂ ಪರಿಹಾರವಿರುತ್ತದೆ, ಕೆಲವೊಮ್ಮೆ ಅವು ಕೈಗೂಡುತ್ತವೆ. ಕೆಲವೊಮ್ಮೆ ಕೈಗೂಡುವುದಿಲ್ಲ – ಇಷ್ಟೇ ವ್ಯತ್ಯಾಸ. ಕ್ಲಾಸ್ ಮೇಟ್ ಮೊಹಿಯುದ್ದೀನನ ನೆನಪಾಯಿತು. ಮೊಹಿಯುದ್ದೀನನ ತಂದೆಗೆ ಟೀವಿ ಡೀಲರ್ ಶಿಪ್ಪಿತ್ತು. ಸಂಜೆ ಮೊಹಿಯುದ್ದೀನ್ ಕೆಲವೊಮ್ಮೆ ಅಂಗಡಿಯಲ್ಲಿ ಕೂತು ತಂದೆಗೆ ಸಹಾಯಮಾಡುತ್ತಿದ್ದ. ಇದು ನೆನಪಿಗ ಬಂದೊಡನೆ ವಿನಯಚಂದ್ರ ಅಂಗಡಿಗೆ ಫೋನ್ ಹಚ್ಚಿ ಮೊಹಿಯುದ್ದೀನ್ ಇದ್ದಾನೆಯೆ ಎಂದು ವಿಚಾರಿಸಿದ. ಬಂದಿಲ್ಲ ಎಂಬ ಉತ್ತರ ಸಿಕ್ಕಿತು, ಅಂಗಡಿಯಿಂದ ಮನೆ ನಂಬರ ತೆಗೆದುಕೊಂಡು ನೇರ ಮನೆಗೆ ಹಚ್ಚಿದಾಗ ಸಿಕ್ಕಿದ. ಅಂಗಡಿಯ್ಂದ ಮನೆ ನಂಬರ ತೆಗೆದುಕೊಂಡು ನೇರ ಮನೆಗೆ ಹಚ್ಚಿದಾಗ ಸಿಕ್ಕಿದ.
“ಮೊಹಿ! ಒಂದು ತುರ್ತು ಕೆಲಸ ಇದೆ. ಕೂಡಲೆ ಅಂಗಡಿ ಕಡೆ ಬರೋಕಾಗತ್ತ್ಯೆ?”
“ಏನದು ಅರ್ಜೆಂಟ್ ಕೆಲಸಾಪ್ಪ?”
“ಎಲ್ಲ ಆಮೇಲೆ ಹೇಳ್ತೇನೆ. ಬರುತ್ತೀಯಾ?”
“ಬರ್ತೇನೆ.”
“ಅರ್ಧಗಂಟೆ ಒಳಗೆ?”
“ಓ ಕೆ”
ಅರ್ಧಗಂಟೆಗೆಲ್ಲಾ ವಿನಯಚಂದ್ರ ರೇಶ್ಮಾಳ ರಿಮೋಟ್ ಕಂಟ್ರೋಲರ್ ಸಹಿತ ಮೊಯಿಯುದ್ದೀನನ ಫ಼ನ್ ಇಲೆಕ್ಟ್ರಾನಿಕ್ಸಿನೊಳಗೆ ಹಾಜರಾದ. ಟೀವಿ, ವೀಡಿಯೋ, ರೇಡಿಯೋ, ಟೂ-ಇನ್-ವನ್, ಥ್ರೀ – ಇನ್ – ವನ್ ತುಂಬಿ ತುಳುಕುವ ಅಂಗಡಿ ಫ಼ನ್ ಇಲೆಕ್ಟ್ರಾನಿಕ್ಸ್. ಫ಼ನ್ ಯಾತಕ್ಕಂತಂದರೆ ಅದು ಫ಼ಜೀರ್ ಉಮ್ಮರ್ ನಾಸಿರಹಮ್ಮದ್ ರ ಶಾರ್ಟ್ ಫ಼ಾರಮ್. ಸಂಜೆ ಸಮಯವಾದ್ದರಿಂದ ಪ್ರತಿಯೊಂದು ಟೀವೀನೂ ನ್ಯಾಶನಲ್ ಚಾನೆಲಿನ ಯಾವುದೋ ಒಂದು ಪ್ರೋಗ್ರಾಮ್ ತೋರಿಸುತ್ತಿತ್ತು. ಯಾವುದೋ ಟೂ-ಇನ್-ವನ್ ಕಿವಿಗಿಡುಚಾಗುವಂತೆ ವೆಸ್ಟರ್ನ್ ಸಂಗೀತ ಹೊರಡಿಸುತ್ತಾ ಇತ್ತು. ಇಲ್ಲಿ ನಿತ್ಯವೂ ಕೆಲಸ ಮಾಡುವವರಿಗೆ ಕಣ್ಣು ಕಿವಿ ಎರಡೂ ಮಂದವಾಗುವುದು ಖಂಡಿತವೆನಿಸಿತು. ಮೊಹೆಯುದ್ದೀನ್ ಕಾಲೇಜಿನ ಬಾಸ್ಕೆಟ್ ಬಾಲ್ ಟೀಮಿನ ಕ್ಯಾಪ್ಟನ್. ಆದ್ದರಿಂದ ಆಗಾಗ ಬಾಸ್ಕಟ್ ಬಾಲ್ ಆಡುತ್ತಿದ್ದ ವಿನಯಚಂದ್ರನಿಗೆ ಅವನ ವಿಶೇಷ ಸಲುಗೆ. ಅಲ್ಲದೆ ಮೊಹಿಯುದ್ದೀನನ ಅಂಗಡಿಯಿಂದಲೆ ಆತ ಮನೆಗೆ ಟೀವಿ ತರಿಸಿಕೊಂಡದ್ದು ಕೂಡ.
ತುಸು ಹೊತ್ತಾದ ಮೇಲೆ ಮೊಹಿಯುದ್ದೀನ್ ಬಂದ. “ಏನಯ್ಯ ವಿನ್ ಅದೆಂಥ ತುರ್ತು ಕೆಲ್ಸ ಹೇಳು” ಎಂದ.
ವಿನಯಚಂದ ರಿಮೋಟ್ ಕಂಟ್ರೋಲರ್ ತೆಗೆದು ಅವನ ಮುಂದಿರಿಸಿದ.
“ಮೀಯೋದಕ್ಕೆ ಕುದಿಸಿದ ನೀರಲ್ಲಿ ಅದ್ದಿ ತೆಗೆದದ್ದು. ಈಗ ಕೆಲಸ ಮಾಡ್ತ ಇಲ್ಲ. ಇದು ಮತ್ತೆ ಕೆಲಸ ಮಾಡ್ಬೇಕಾದರೆ ಏನು ಮಾಡ್ಬೇಕು ಹೇಳು.”
ಮೊಹಿಯುದ್ದೀನ್ ಅದನ್ನ ಸುತ್ತ ತಿರುಗಿಸಿ ರತ್ನಪರೀಕ್ಷಕನ ತರ ನೋಡಿದ.
ಎಲ್ಲಿಂದ ತಂದೀ ಇದನ್ನ? ಈ ಬ್ರಾಂಡಿನ ಟೀವೀನ ನಾವು ಡೀಲ್ ಮಾಡಲ್ಲವಲ್ಲ. ” ಎಂದ.
“ಒಬ್ಬ ಫ಼್ರೆಂಡಿಂದು. ಊರು ಹೆಸರು ಕೇಳಬೇಡ. ಆದರೆ ಇದರ ರಿಪೇರಿ ಆಗೋದು ಬಹಳ ಇಂಪಾರ್ಟೆಂಟ್.”
“ಕಂಪೆನಿಗೆ ಕಳಿಸ್ಬೇಕಾಗತ್ತೆ. ಅದಕ್ಕಿಂತ ಸುಲಭ ಹೊಸತೊಂದನ್ನ ಕೊಂಡುಕೊಳ್ಳೋದು. ವಾಪಸು ರಿಪೇರಿಗೆ ಕಳಿಸಿದ್ರೂ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸ ಆಗಲ್ಲ.”
“ಹೊಸತಿಗೆ ಎಷ್ಟಾಗತ್ತೆ?”
“ಗೊತ್ತಿಲ್ಲ. ಈ ಬ್ರಾಂಡಿನ ಡೀಲರ ಹತ್ತಿರ ಕೇಳಬೇಕು. ಒಂದೇ ತೊಂದರೆಯೆಂದರೆ, ರಿಮೋಟನ್ನ ಪ್ರತ್ಯೇಕವಾಗಿ ಯಾರೂ ತರಿಸಿ ಇಟ್ಟುಕೊಂಡಿರೋದಿಲ್ಲ. ಟೀವೀ ಸೆಟ್ಟಿನ ಜತೆ ತರಿಸಿ ಇಟ್ಟುಕೊಂಡಿರುತ್ತಾರೆ. ಬಿಡಿಯಾಗಿ ಮಾರಬೇಕೆಂದರೆ ಜಾಸ್ತಿ ಚಾರ್ಜ್ ಮಾಡಬಹುದು. ಬಹಳ ಅರ್ಜೆಂಟೆ?”
ಇಪ್ಪತ್ತನಾಲಕ್ಕು ಗಂಟೆ ಸಮಯಾವಕಾಶ. ಟೈಮ್ ಈಸ್ ಮನಿ. ಎವ್ರಿಥಿಂಗ್.”
“ಇದರ ಡೀಲರ ಹತ್ರ ಹೋಗ್ಬೇಕು. ನನ್ನೊಬ್ಬ ಕಸಿನ್ ಸಿಕಂದರಾ ಬಾದ್ನಲ್ಲಿದ್ದಾನೆ. ಅವನಿಗಿದರ ಡೀಲರ್ ಶಿಪ್ಪಿದೆ. ಫೋನ್ ಮಾಡಿ ವಿಚಾರಿಸ್ತೇನೆ.”
ಮೊಹಿ ಫೋನ್ ನಲ್ಲಿ ಮಾತಾಡ್ತಿದ್ದಾಗ ವಿನಯಚಂದ್ರ ಸಿಗರೇಟು ಬೆಳಗಿಸಿ ತನ್ನ ಇಷ್ಟದೈವಕ್ಕೆ ಹರಕೆ ಹೊತ್ತ. ಮಾತು ಮುಗಿಸಿದ ಮೊಹಿ ಹೆಬ್ಬೆರಳೆತ್ತಿ ವಿಜಯದ ಸೂಚನ ಕೊಟ್ಟಾಗಲೇ ಸಮಾಧಾನವಾದದ್ದು.
“ಎಷ್ಟಾಗತ್ತೆ ಕೇಳಿದ್ಯ?”
“ಅದೆಲ್ಲ ಕೇಳಿಲ್ಲ. ಹೇಗಿದ್ರೂ ಈಗ ಹೋಗ್ತೀವಲ್ಲ.”
“ಅದ್ರೆ ಒಂದು ಮಾತು, ಮೊಹೀ. ನೀನೇ ಎರಡು ದಿನಕ್ಕೆ ಅಜಸ್ಟ್ ಮಾಡ್ಬೇಕಪ್ಪ.”
“ಲೆಟಸ್ ಸೀ”
ಮೊಹಿಯುದ್ದೀನ್ ನ ಮೋಬೈಕ್ ನಲ್ಲೆ ಇಬ್ಬರೂ ಸಿಕಂದರಾಬಾದಿಗೆ ಬಂದರು. ಕಸಿನ್ ನ ಅಂಗಡಿ ಪಾರ್ಕ್ ಲೇನ್ ವಠಾರದಲ್ಲಿತ್ತು. ಹೆಸರೇನೆಂದು ವಿನಯಚಂದ್ರ ನೋಡಿದ. ಜಾಯ್ ಇಲೆಕ್ಟ್ರಾನಿಕ್ಸ್. ಇದೂ ಯಾವುದಾದರೂ ಅದ್ಭುತ ಹೆಸರಿನ ಬೀಜಾಕ್ಷರವಿರಬಹುದೇ ಎಂಬ ಶಂಕೆ ಬಂತು. ಅಂಗಡಿ ಫನ್ ಇಲೆಕ್ಟ್ರಾನಿಸ್ ನಷ್ಟು ದೊಡ್ಡದಿರಲಿಲ್ಲ. ಆದರೂ ಬೆಳಕಿನಿಂದ ಜಗಜಗಸುತ್ತಿತ್ತು. ಗೋಡೆಗೆ ಕನ್ನಡಿ ಹಾಕಿ ದೊಡ್ಡ ಜಾಗದ ಭ್ರಮೆ ಉಂಟಾಗುತ್ತಿತ್ತು. ಅಂಗಡಿ ಪ್ರವೇಶಿಸಿದವನಿಗೆ ಮೊದಲು ಕಾಣುವುದು ತನ್ನ ಅನೇಕ ಪ್ರತಿರೂಪಗಳು. ವಿನಯಚಂದ್ರ ಈ ಹೊತ್ತಿನಲ್ಲಿ ಇದಕ್ಕೆ ಸರ್ವಥಾ ತಯಾರಿರಲಿಲ್ಲ. ಆದ್ದರಿಂದ ನೇರವಾಗಿ ನೋಡದೆ ನಿಂತ.
ಮೊಹಿಯುದ್ದೀನನ್ನು ಕಂಡದ್ದೆ ಕಸಿನ್ ಎದ್ದು ಬಂದ. ಅವನದೆ ವಯಸ್ಸಿನ ಯುವಕ. ಓದು ಬರಹಕ್ಕೆ ತಿಲಾಂಜಲಿಯಿತ್ತು ಹಣ ಮಾಡುವುದನ್ನೆ ಬದುಕಿನ ಮುಖ್ಯ ಧ್ಯೇಯವನ್ನಾಗಿ ಸ್ವೀಕರಿಸಿದ್ದ. ಈಗಾಗಲೆ ಮನೆ ಮಡದಿ, ಮಾರುತಿ ಯೆಂಬ ಮೂರು ಮಮಕಾರಗಳನ್ನು ಸಂಪಾದಿಸಿಯಾಗಿತ್ತು. ಮೊಹಿಯುದ್ದೀನನೆ ಅವನಿಗೆ ಪರಿಸ್ಥಿತಿಯನ್ನು ವಿವರಿಸಿದ. ಕೆಟ್ಟು ಹೋದ ರಿಮೋಟನ್ನು ಕೈಯಲ್ಲಿ ಹಿಡಿದು ಕಸಿನ್ ಕೇವಲ ಭಾರವನ್ನು ನೋಡುವವನಂತೆ ಕಂಡ. “ಇದು ರಿಪೇರಾಗುವುದಿಲ್ಲ.” ಎಂದು ಖಡಾಖಂಡಿತವಾಗಿ ಹೇಳಿದ. ಇದೇ ಬ್ರಾಂಡಿನ ಹೊಚ್ಚಹೊಸ ಟೀವೀ ಸೆಟ್ಟೊಂದು ಈಗತಾನೆ ಬಂದಿದೆ, ಯಾರೋ ಮುಂಗಡ ಕೊಟ್ಟು ತರಿಸಿದ್ದು, ಅದರ ರಿಮೋಟ್ ಕಂಟ್ರೋಲರ್ ಬೇಕಾದರೆ ಕೊಡಬಹುದು , ಆದರೆ ಬೆಲೆ ಜಾಸ್ತಿಯಾಗುತ್ತದೆ ಎಂದು ವ್ಯಾಪಾರೀ ಕಳಕಳಿಯಿಂದ ಹೇಳಿದ.
“ಜಾಸ್ತಿ ಅಂದರೆ ಎಷ್ಟಾಗತ್ತೆ?” ಎಂದ ವಿನಯಚಂದ್ರ.
ಅವನ ಆರ್ತತೆಯನ್ನು ಕಸಿನ್ ಗಮನಿಸದಿರಲಿಲ್ಲ.
“ಒಂದೂವರೆ ಸಾವಿರ ಆಗತ್ತೆ, ಅದೂ ನಿಮಗೋಸ್ಕರ ಇನ್ನೂರೈವತ್ತು ಕಡಿಮೆ ಮಾಡಿದ್ದೇನೆ. ಎರಡು ಸಾವಿರ ಕೊಟ್ಟು ತಗೊಂಡು ಹೋಗುವವರೂ ಇದ್ದಾರೆ.”
ಗಲ್ಫ಼್ ಮನಿ ಬಗ್ಗೆ ಒಂದು ಪುಟ್ಟ ಭಾಷಣ ಕೊಡಲು ಕಸಿನ್ ತಯಾರಿದ್ದ. ಆದರೆ ಗಿರಾಕಿಗೆ ಅದರಲ್ಲಿ ಆಸಕ್ತಿಯಿಲ್ಲವೆಂದು ಕಂಡು ಸುಮ್ಮನಾದ. ಮೊಹಿಯುದ್ದೀನ್ ವಿನಯಚಂದ್ರನ ಮುಖ ನೋಡಿದ. ವಿನಯಚಂದ್ರ ಪ್ಯಾಕ್ ಮಾಡಲು ಹೇಳಿದ. ಆದರೆ ಗಿರಾಕಿಯ ಪೂರ್ತಿ ಸಮಾಧಾನವು ತನ್ನ ಕರ್ತವ್ಯ ವೆಂದುಕೊಂಡ ಕಸಿನ್ ಹೊಸ ರಿಮೋಟ್ ಕಂಟ್ರೋಲರನ್ನು ತರಿಸಿ ಅದರ ವಿವಿಧ ಬಟನುಗಳನ್ನು ಒತ್ತಿ ಅನೇಕ ಚಮತ್ಕಾರಗಳನ್ನು ಪ್ರದರ್ಶಿಸಿದ. ನಂತರ ಒಬ್ಬ ಕೆಲಸದವನಿಗೆ ರಿಮೋಟನ್ನ ಪ್ಯಾಕ್ ಮಾಡುವಂತೆಯೂ ಇನ್ನೊಬ್ಬನಿಗೆ ಚಹಾ ತರುವಂತೆಯೂ ಹೇಳಿ ಇತರ ಗಿರಾಕಿಗಳತ್ತ ಗಮನಹರಿಸಿದ. ಈ ಮಧ್ಯ ಮೊಹಿಯುದ್ದೀನ್ ರಿಮೋಟಿನ ಬಿಲ್ಲಿಗೆ ತಾನು ಜವಾಬ್ದಾರನೆಂದು ಕಸಿನಿಗೆ ಮಾತುಕೊಟ್ಟಿದ್ದ.
ಮೊಹಿಯುದ್ದೀನಿನ ಜತೆ ಮತ್ತೆ ಸಿಟಿ ಕಡೆ ವಾಪಸಾಗುತ್ತಿದ್ದಂತೆ ಅತ್ಯಂತ ಹಿತವಾದ ಗಾಳಿ ಮುಖದ ಮೇಲೆ ರಪರಪನೆ ಬಡಿಯತೊಡಗಿತು. ಈ ಗಾಳಿಗೆ ಜೇಬಿನಲ್ಲಿದ್ದ ರಿಮೋಟ್ ಕಂಟ್ರೋಲ್ ಪ್ಯಾಕು ಜಿಗಿದು ಬೀಳದಂತೆ ಕೈಯನ್ನು ಅದರ ಮೇಲೆ ಇರಿಸಿಕೊಂಡ. ಸದ್ಯದ ಬದುಕಿನಲ್ಲಿ ಅಂದಿನಷ್ಟು ಖುಶಿಯನ್ನು ಆತ ಇನ್ನೆಂದೂ ಅನುಭವಿಸಿರಲಿಲ್ಲವೆಂದೇ ಹೇಳಬೇಕು.
“ಆ ನೀರಿನ ಮೇಲೆ ಹೇಗೆ ಇಡೀ ನಗರವೇ ಬಿದ್ದು ಬಿಟ್ಟಿದೆ ನೋಡು!” ಎಂದ ಮೊಹಿಯುದ್ದೀನನಿಗೆ. ತಕ್ಷಣವೆ ಮೋಟರ್ ಸವಾರನಿಗೆ ಹೀಗೆಲ್ಲ ಹೇಳಿ ಅವನ್ ಏಕಾಗ್ರತೆ ತಪ್ಪಿಸಬಾರದು ಎಂಬ ಅರಿವಾಯಿತು. ರೋಡು ಟ್ರಾಫ಼ಿಕ್ಕಿ ನಿಂದ ತುಂಬಿ ತುಳುಕುತ್ತಿತ್ತು.
“ಆ ಹಳೀ ರಿಮೋಟನ್ನ ಏನು ಮಾಡಿದೆ?” ಎಂದ ಮೊಹಿಯುದ್ದೀನ್.
“ಓ! ಅದೇ? ಬಹುಶಃ ಅಲ್ಲೇ ಮರೆತಿರಬೇಕು. ಯಾಕೆ, ತರಬೇಕಾಗಿತ್ತೆ?”
“ತಂದಿದ್ದರೆ ಈ ಸರೋವರದಲ್ಲಿ ಎಸೀಬಹುದಾಗಿತ್ತು!”
ಮೂರ್ಖ! ಈ ಮನುಷ್ಯ ಯಾರನ್ನಾದರೂ ಪ್ರೀತಿಸೋದು ಸಾಧ್ಯವೆ? ರೇಶ್ಮ ಟಚ್ ಮಾಡಿದ್ದು ಕಣೋ ಅದು! ನಿನ್ನ ಕಸಿನ್ ನ ಅಂಗಡೀಲಿ ಬಿಟ್ಟು ಬರಬರದಾಗಿತ್ತು – ಆ ಮಾತು ಬೇರೆ. ನಾಳೇನೋ ನಾಡಿದ್ದೋ ನಾನೇ ಹೋಗಿ ತಗೊಂಡು ಬರುತ್ತೇನೆ. ಅಥವಾ ತಗೊಂಡು ಬರದೇ ಇದ್ರೂ, ಅದನ್ನ ಲೇಕಿಗೆ ಎಸೆಯೋ ವಿಚಾರ ಎಂಥ ಕ್ರೂರವಾದ್ದು! ಆದರೆ, ಬೈಕಿನಲ್ಲಿ ಕೂತಿರುತ್ತ ಅವನ ಜತೆ ವಿವಾದ ಎಬ್ಬಿಸೋದಕ್ಕೆ ವಿನಯಚಂದ್ರನಿಗೆ ಮನಸ್ಸಾಗಲಿಲ್ಲ. ಅಲ್ಲದೆ, ತನ್ನ ಆತ್ಮೀಯ ಅನಿಸಿಕೆಗಳನ್ನು ಇನ್ನು ಯಾರಿಗೂ ಹೇಳಬಾರದೆಂಬ ತೀರ್ಮಾನವನ್ನು ಈಗಾಗಲೆ ಮಾಡಿಯಾಗಿತ್ತಲ್ಲ! ಚಟರ್ಜಿಗೆ ರೇಶ್ಮಳ ಮನೆ ಫೋನಿನ ನಂಬರ ಕೊಡಬಾರದಾಗಿತ್ತು. ಆತ ಉಳಿದೆಲ್ಲ ಮರೆತರೂ ಫೋನ್ ನಂಬ್ರ ಮರೆಯುವವನಲ್ಲ! ಕೈಮಿಂಚಿ ಹೊದ್ದಕ್ಕೆ ಚಿಂತಿಸಿ ಫ಼ಲವಿಲ್ಲವೆಂದು ಸುಮ್ಮನೆ ಕುಳಿತ. ಸರೋವರ ಕಳೆಯಿತು, ಸೆಕ್ರೆಟೇರಿಯಟ್ ಕಳೆಯಿತು. ವಿಧಾನಸೌಧ ಕಳೆಯಿತು, ಗನ್ ಫ಼ೌಂಡ್ರಿ ಕಳೆಯಿತು, ಅಬೀಡ್ಸಿನ ಒಂದು ತಿರುವಿನಲ್ಲಿ ಫ಼ನ್ ಇಲೆಕ್ಟ್ರಾನಿಕ್ಸ್. ಮುಂದೆ ಬೈಕು ಧಡ್ ಧಡ್ಡೆಂದು ನಿಂತಿತು.
ಅಲ್ಲೆ ಪಾರ್ಕ್ ಮಾಡಿದ್ದ ತನ್ನ ಸ್ಕೂಟರಿನಲ್ಲಿ ವಿನಯಚಂದ್ರ ಮನೆಗೆ ಬಂದ. ಭೀಮ ಅದೇನೋ ಹೂವನ್ನು ತಂದ ಕತೆ ಚಿಕ್ಕಂದಿನಲ್ಲಿ ಕೇಳಿದ್ದ – ದ್ರೌಪದಿಗೆ ಮುಡಿಸೋದಕ್ಕೆ. ಅಷ್ಟೇ ಸುಸ್ತಾಗಿತ್ತು. ಮಾನಸಿಕವಾಗಿ ಒಂದು ಯುಗವೇ ಕಳೆದಂಥ ಅನುಭವ. ಆದರೇನು, ರೇಶ್ಮಳಿಗೋಸ್ಕರ ಒಂದು ಕೆಲಸ ಸಾಧಿಸಿದಂತಾಯ್ತು. ಹಳೇ ರಿಮೋಟನ್ನ ಅಲ್ಲೆ ಮರೆತುಬಂದದ್ದೆ ಒಳ್ಳೇದಾಯಿತು ಅಂದುಕೊಂಡ. ತಂದಿದ್ದರೆ, ಅದನ್ನ ಎಸೆದುಬಿಡುವಂತೆಯೂ ಇಲ್ಲ, ಕಾಣಿಸುವಲ್ಲಿ ಇರಿಸುವಂತೆಯೂ ಇಲ್ಲ. ಕಾರಣ, ಹೊಸತಾಗಿ ಕೊಂಡು ತಂದೆ, ಎಂದು ಅವಳಲ್ಲಿ ಹೇಳುವ ವಿಚಾರ ಅವನಿಗಿರಲಿಲ್ಲ. ಹೇಳಿದರೆ ಹಣ ಎಷ್ಟಾಯಿತು ಇತ್ಯಾದಿಯಾಗಿ ವ್ಯಾವಹಾರಿಕ ಪ್ರಶ್ನೆಗಳನ್ನು ಕೇಳುತ್ತಾಳೆ. ಹೀಗೆ ಅತಿ ತೀವ್ರವಾಗಿ ಚಿಂತನೆಯಲ್ಲಿ ತೊಡಗಿ ಬಿಸಿಯಾಗಿದ್ದ ತಲೆಯ ಸಮೇತ ಬಾತ್ ರೂಮಿಗೆ ಹೋಗಿ ತಣ್ಣೀರಿನಲ್ಲಿ ಸ್ನಾನಮಾಡಿದ. ಇಡೀ ದಿನದ ಆಯಾಸವನ್ನು ಪರಿಹರಿಸಿಕೊಂಡು ರೂಮಿಗೆ ಮರಳಿದವನಿಗೆ ರಿಮೋಟ್ ನ ಪ್ಯಾಕನ್ನು ಬಿಚ್ಚಿ ಒಮ್ಮೆ ನೋಡಬೇಕನ್ನಿಸಿತು. ಅಪಾರದರ್ಶಕ ಎಣ್ಣೆ ಕಾಗದದಲ್ಲಿ ಮಾಡಿದ್ದ ಪ್ಯಾಕಿಗೆ ಸೆಲೋಫೇನಿನ ಕಟ್ಟು ಹಾಕಿತ್ತು. ಹಳೆ ಬ್ಲೇಡೊಂದನ್ನು ಹುಡುಕಿ ಹಿಡಿದು ಕಾಗದ ಹರಿದಂತೆ ಟೇಪನ್ನು ಕತ್ತರಿಸಿದರೆ ಒಳಗೆ ರಿಮೋಟ್ ನ ಸ್ವಂತದ ಆವರಣ ಬೇರೆ ಇತ್ತು. ಅದರ ಮುಚ್ಚಳವನ್ನು ತೆಗೆದು ನೋಡಿದಾಗ ಕಾಣಿಸಿದುದು ಹೊಸ ರಿಮೋಟ್ ಕಂಟ್ರೋಲರಲ್ಲ. ಯಾವುದನ್ನ ಮೊಹಿಯುದ್ದೀನ್ ಸರೋವರದಲ್ಲಿ ಎಸೆದುಬಿಡಬಹುದಾಗಿತ್ತು ಎಂದಿದ್ದನೋ ಅದು! ವಿನಯಚಂದ್ರ ಮೂರ್ಛೆತಪ್ಪುವುದೊಂದು ಬಾಕಿ ಉಳಿದಿತ್ತು!
*****