ಯಾವುದೋ ಉಪನಿಷತ್ತು ಅಥವಾ ಭಗವದ್ಗೀತೆ ಹೇಳ್ತದಲ್ಲಾ ಹುಡುಕಿದರೆ ಸಿಗದ್ದು ಮರೆತಾಗ ಅಡ್ಡಬಂತು ಅಂತ. ಹಾಗೇ ಆಯಿತು. ಮರೆಯದಿದ್ದರೂ ಮರೆತ ಹಾಗೆ ನಟಿಸುತ್ತಿರುವಾಗಲೆ ಒಂದು ದಿನ ವಿನಯಚಂದ್ರ ಮನೆಬಾಗಿಲು ತೆರೆಯುತ್ತಿದ್ದಂತೆ ರೇಶ್ಮ ಕಾಲಿಂಗ್ ಬೆಲ್ ನ ಮೇಲೆ ಬೆರಳಿಟ್ಟು ನಿಂತಿದ್ದಳು! ತಿಳಿಹಳದಿ ಬಣ್ಣದ ಸೀರೆಯಲ್ಲಿ ಪೀತಾಂಬರಧಾರಿಣಿಯಾಗಿ ಮೇಲಿನ ಲೋಕದಿಂದ ಅವತರಿಸಿದ ಹಾಗೆ!
ಒಂದು ಕ್ಷಣ ಇಬ್ಬರ ಬಾಯಿಂದಲೂ ಮಾತು ಹೊರಡಲಿಲ್ಲ.
“ಓ! ರೇಶ್ಮ!” ಎಂದ ವಿನಯಚಂದ್ರ ಅಚ್ಚರಿಯಿಂದ.
“ವಿನ್! ವಿನ್! ತಾನೆ ನೀವು? ಅಬ್ಬಾ ಎಷ್ಟು ಬದಲಾಗಿಬಿಟ್ಟಿದ್ದೀರಿ! ತಲೆಗೊದಲು, ಗಡ್ಡ! ಬಾರ್ಬರ್ಸ್ ಡಿಲೈಟ್! ಯಾಕೆ ಮೈಯಲ್ಲಿ ಆರಾಮಿಲ್ವೇನು?”
“ಆರಾಮಿಲ್ದೇನು? ತೆಗಿದೇ ಇದ್ದರೆ ಕೂದಲು ಬೆಳೆಯುತ್ತೆ. ನಿಸರ್ಗದ ಕ್ರೂರ ವಿದ್ಯಮಾನಗಳಲ್ಲಿ ಇದೂ ಒಂದು.”
“ಆಹಾ! ನೀವು ನನ್ಮೇಲೆ ಸಿಟ್ಟಾದಂತಿದೆ.”
“ಛೀ ಛೀ ಸಿಟ್ಟೇ? ಯಾತಕೆ? ಬಡವನ ಸಿಟ್ಟು ದವಡೆಗೆ ಪೆಟ್ಟು ಅಂತ ಇದೆ. ಅಲ್ದೆ ನಾನು ಬುದ್ಧನ ಅವತಾರ ಗೊತ್ತಾಯ್ತೆ? ಬುದ್ಧನ ಅವತಾರ ಯಾರಲ್ಲೂ ಸಿಟ್ಟು ಮಾಡಲ್ಲ.”
“ಆದರೆ ಬುದ್ಧ ಮಾತ್ರ ಕ್ಲೀನ್ ಶೇವನ್. ಯಾವ ಮ್ಯುಸಿಯಮಿಗೆ ಬೇಕಾದರೆ ಹೋಗಿ ನೋಡಿ.”
“ಹೌದೌದು. ಕ್ಲೀನ್ ಶೇವನ್. ಯೂ ಡಿ ಕೊಲೋನ್. ಈಗ ಫ಼್ಯಾಶನ್ ಬದಲಾಗಿ ಬಿಟ್ಟಿದೆ, ರೇಶ್ಮಾದೇವಿ!”
“ಜಿಂದಲ್”
“ಗೊತ್ತು ಗೊತ್ತು. ಅಪ್ಪ, ಅಮ್ಮ, ತಂಗಿ, ಆಲ್ ದ ವೇ! ”
“ಕರೆಕ್ಟ್! ಈಗೇನು ನಾ ಒಳಕ್ಕೆ ಬರಲೋ ಅಥವಾ ಇಲ್ಲಿಂದ್ಲೆ ಮಾತಾಡಿ ಕಳಿಸಿಬಿಡ್ತೀರೋ?”
“ಬರಬೇಕು, ಖಂಡಿತ ಬರಬೇಕು. ನಿಮ್ಮ ಪಾದ ಧೂಳಿ ನಮ್ಮ ಮನೆ ನೆಲವನ್ನ ಅಲಂಕರಿಸಬೇಕು.”
“ಹಾಗಿದ್ರೆ ಇನ್ನೊಮ್ಮೆ ಬರ್ತೀನಿ. ಯಾಕಂದ್ರೆ ಈಗ ನನ್ನ ಪಾದದಲ್ಲಿ ರವಷ್ಟೂ ಧೂಳಿಯಿಲ್ಲ. ”
“ಅಮ್ಮಾ! ಯಾರು ಬಂದಿದ್ದಾರೆ ನೋಡು!”
“ಎಂದು ವಿನಯಚಂದ್ರ ತಾಯಿಯನ್ನು ಕರೆದು ರೇಶ್ಮಳ ಪರಿಚಯ ಮಾಡಿಸಿದ. “ಇಲ್ಲೆ ನಮ್ಮ ಬಿಲ್ಡಿಂಗ್ ನಲ್ಲಿ ಇದ್ದಾರೆ. ಹತ್ತನೇ ಫ್ಲೋರಿನಲ್ಲಿ ರೇಶ್ಮಾ. ಅಂತ ನನ್ನ ಫ಼್ರೆಂಡು.”
“ನಿನ್ನ ಫ಼್ರೆಂಡೆ . ನೀ ಇದುವರೆಗೂ ಹೇಳಿರ್ಲಿಲ್ಲಾ!”
“ರೇಶ್ಮ, ದಿಸ್ ಈಸ್ ಮೈ ಮದರ್. ನಿಜವಾಗಿ ಮದರ್, ಮದರಿನ್ಲಾ ಅಲ್ಲ.”
“ನಮಸ್ತೆ!”
“ನಮಸ್ತೆ!”
“ಅಮ್ಮ, ಪ್ಲೀಸ್ ಸ್ವಲ್ಪ ಟೀ ಮಾಡಿ ಕೊಡ್ತೀಯಾ! ಆಥ್ವ ನಾನೇ ಮಾಡ್ಲೆ?”
“ನೀವಿಬ್ರೂ ಮಾತಾಡ್ತಿರಿ, ನಾನೇ ಮಾಡಿ ತರ್ತೇನೆ.”
“ಯಾಕೆ ನಿಮಗೆ ತೊಂದ್ರೆ. ನನಗೇನೂ ಬೇಡ.” ಎಂದಳು ರೇಶ್ಮ. ಆದರೆ ಅಷ್ಟರಲ್ಲೆ ವಿನಯನ ತಾಯಿ ಕಿಚನ್ ಸೇರಿಯಾಗಿತ್ತು.
“ನನ್ನ ಕೋಣೇಗೆ ಹೋಗೋಣ, ಬನ್ನಿ.” ಎಂದು ವಿನಯಚಂದ್ರ ಅವಳನ್ನ ಕರೆದೊಯ್ದ. ದೃಶ್ಯ ಅದೇ. ಅಸ್ತವ್ಯಸ್ತ ಮೇಜು, ಅದೇ ರೀತಿ ಹಾಸಿಗೆ. “ಪೆಂಟ್ ಹೌಸ್! ಪ್ಲೀಸ್ ಸಿಟ್ ಡೌನ್!” ಎಂದು ಕುರ್ಚಿಯ ಮೇಲೊಗೆದಿದ್ದ ಬಟ್ಟೆ ಬರೆಗಳನ್ನ್ ತೆಗೆದು ಮೂಲೆಯಲ್ಲಿಟ್ಟೆ. ರೇಶ್ಮ ಕುಳಿತು ಸುತ್ತಲೂ ಕಣ್ಣಾಡಿಸಿದಳು. “ಹೌ ಲವ್ಲಿ!” ಎಂದಳು.
“ಲವ್ಲೀನೆ? ಲವ್ಲಿ ಆಗಿರೋದು ಏನಿದೆ ಇಲ್ಲಿ?”
“ಏನಂತ ಹೇಳ್ಳಿ? ದಿ ಥಿಂಗಿನೆಸ್!”
“ಥಿಂಗಿನೆಸ್?”
“ದಿ ಥಿಂಗ್ ನೆಸ್. ಆಫ಼್ ಥಿಂಗ್ಸ್ ಅಂತಾರಲ್ಲ, ಅದು. ವಸ್ತುಗಳ ವಸ್ತುತ್ವ. ಹಾಗೆ ನಮ್ಮ ಪ್ರೊಫ಼ೆಸರ್ ಒಬ್ರು ಹೇಳ್ತ ಇದ್ರು.”
ಓಹೋ! ದಿ ಥಿಂಗಿನೆಸ್ ಆಫ಼್ ಥಿಂಗ್ಸ್!”
ಹೌದು. ಅಂಥಾದ್ದೇನೋ ಒಂದು. ಅದಕ್ಕಿಂತ ಹೆಚ್ಚು ನನ್ನ ಕೇಳ್ಬೇಡಿ. ಯಾಕಂದ್ರೆ ಅವರು ಪಾಠಮಾಡುತ್ತಿರಬೇಕಾದ್ರೆ ನಾನು ಕಾಮಿಕ್ಸ್ ಓದ್ತ ಇದ್ದೆ! ಈಗ ನೆನಸಿಕೊಂಡ್ರೆ ಬೇಸರ ಆಗತ್ತೆ. ಈಗ ನಾನೂ ಒಬ್ಬ ಟೀಚರು.”
ರೇಶ್ಮ ಕನ್ ಫ಼ೆಶನ್ ಮೂಡಿನಲ್ಲಿದ್ದಳು. ಟೀಚಿಂಗ್ ತನಗೆ ಇಷ್ಟ. ಅದೂ ಸ್ಕೂಲ್ ಹುಡುಗರಿಗೆ ಕಲಿಸೋದು, ಅವೂ ತನ್ನನ್ನು ತುಂಬಾ ಹಚ್ಚಿಕೊಳ್ತವೆ, ಹೂ ತಂದುಕೊಡುತ್ತವೆ, ವಿನಾ ಕಾರಣ ಹೂಗಳುತ್ತವೆ, ತಲೆ ಸವರಿದರೆ ಪುಳಕಗೊಳ್ಳುತ್ತವೆ ಎಂದೆಲ್ಲ ಹೇಳಿದಳು. ಈ ಮಾತಿಗೆ ಒಳ ಅರ್ಥವೇನಾದರೂ ಇದೆಯೇ ಎಂಬ ವಿಚಾರ ವಿನಯಚಂದ್ರನ ತಲೆಯೊಳಗೆ ಮೂಡಿತು. ಸಂಶಯಾತ್ಮಾ ವಿನಶ್ಯತಿ ಎಂದು ತನಗೆ ಗೊತ್ತಿದ್ದ ಒಂದೇ ಒಂದು ಸಂಸ್ಕೃತಗಾದೆಯನ್ನು ಹೇಳಿಕೊಂಡು ಸುಮ್ಮನಾದ.
“ಅವಕ್ಕೂ ತುಂಬಾ ಜಲಸಿ. ಒಂದು ದಿನ ಒಬ್ಬನಿಗೆ ಗುಡ್ ಹೇಳಿದರೆ ಉಳಿದವಕ್ಕೆಲ್ಲಾ ಹೊಟ್ಟೆಯಲ್ಲಿ ಸಂಕಟ. ಆದ್ದರಿಂದ ನನ್ನ ಪ್ರೀತಿಯನ್ನು ಎಲ್ಲರಿಗೂ ಹಂಚಿಹಾಕಬೇಕಾಗತ್ತೆ. ಒಬ್ಬನ ಟೈ ಸರಿಮಾಡ್ತೀನಿ, ಇನ್ನೊಬ್ಬಳ ಕೆನ್ನೆ ಸವರುತ್ತೀನಿ, ಮತ್ತೊಬ್ಬನಿಗೆ ಬೋರ್ಡ್ ಒರೆಸೋದಕ್ಕೆ ಹೇಳ್ತೀನಿ.”
” ನನ್ನನ್ನು? ”
“ನಿಮ್ಮನ್ನೆ! ನಿಮ್ಮನ್ನ ಚೀಸ್ ತರೋದಿಕ್ಕೆ ಕಳಿಸ್ತೀನಿ!”
“ಪ್ರತಿ ರಾತ್ರಿ ನಾನು ಚೀಸಿನ ಹಿಂದೆ ಓಡ್ತಾ ಇದ್ದೀನಿ, ಗೊತ್ತೆ ನಿಮಗೆ?”
“ವಾಡ್ಡೂ ಯು ಮೀನ್?”
“ಪ್ರತಿ ರಾತ್ರಿ ಅದೇ ಕನಸು.”
“ಸಾರಿ ವಿನ್ ತಪ್ಪು ನಂದೇ. ಅವತ್ತು ನಿಮ್ಮನ್ನ ತುಂಬಾ ದಣಿಸ್ದೆ.”
“ಯಾವನೋ ಒಬ್ಬ ಏನು ಹೇಳಿದ್ದಾನೆ ಗೊತ್ತೆ? ಪ್ರತಿ ರಾತ್ರಿ ಒಂದೇ ಕನಸು ಬಿದ್ದರೆ, ಕನಸು ಯಾವುದು, ವಾಸ್ತವ ಯಾವುದು ಅಂತ ಗೊತ್ತಾಗಲ್ಲ ಅಂತ.”
“ಅಂದರೆ ಈಗ ನಡೆಯುತ್ತಿರೋದು ಕನಸೋ ವಾಸ್ತವವೋ ಅಂತ ನಿಮಗೆ ಗೊತ್ತಾಗ್ತಾ ಇಲ್ಲ. ಅಲ್ವೆ?”
“ಗೊತ್ತಾಗ್ತಾ ಇಲ್ಲ”
“ಚೆನ್ನಾಗಿ ಚಿವಿಟಿದರೆ ಗೊತ್ತಾಗತ್ತೆ, ಅಥವಾ ತಣ್ಣೀರಿನಲ್ಲಿ ಸ್ನಾನ ಮಾಡಿದ್ರೆ.”
“ಸಾವುದಿ ಅರೇಬಿಯಾದಲ್ಲಿ ತಣ್ಣೀರಲ್ಲಿ ಸ್ನಾನ ಮಾಡಿದ್ರ ಅಥವಾ….”
“ಸಾವುದಿ ಅರೇಬಿಯ! ನಿಮಗೆ ಯಾರಂದ್ರು?”
“ಯಾರೇ ಅನ್ಲಿ. ನಾ ಮಾತ್ರ ನೀವು ಹೇಳಿದಂತೆ ನಾನಾಗಿ ನಿಮ್ಮನ್ನ ಕಾಂಟೇಕ್ಟ್ ಮಾಡೋಕೆ ಪ್ರಯತ್ನಿಸಿಲ್ಲ, ಅದಂತೂ ಖರೆ.”
“ವಿನ್, ನಾನು ಫ಼ಕ್ಕನೇ ಹೋಗಬೇಕಾಯಿತು.”
ರೇಶ್ಮ ಮೌನವಾದಳು. ವಿನಯಚಂದ್ರ ಅವಳ ಮುಖದ ಭಾವನೆಗಳನ್ನು ಹಿಡಿಯಲು ಪ್ರಯತ್ನಿಸುತ್ತ ಕುಳಿತ.
“ವೆಕೇಶನಿಗೆ ಹೋಗಿರಬಹುದು, ಅಲ್ವೆ?”
“ಅದೊಂದು ದೊಡ್ಡ ಕತೆ.”
“ಎಷ್ಟು ದೊಡ್ಡದಾದರೂ ಸಂಕ್ಷಿಪ್ತವಾಗಿ ಹೇಳೋದು ಸಾಧ್ಯವಿಲ್ವೆ? ಸಮ್ಮರಿ, ಸಾರಾಂಶ, ಅಬ್ರಿಜ್ ಮೆಂಟ್ ಇಂಥ ಶಬ್ದಗಳಿರೋದು ಯಾತಕ್ಕೆ?”
“ನೋಡಿ! ನಿಮ್ಮಮ್ಮ ಬರ್ತಾ ಇದಾರೆ! ಎಲ್ಲ ಆಮೇಲೆ ಹೇಳ್ತೀನಿ.” ಎಂದು ಸುಮ್ಮನಾದಳು. ಕನ್ ಸ್ಪಿರಸಿಯನ್ನು ಯಾರು ಇಷ್ಟಪಡುವುದಿಲ್ಲ? ವಿನಯಚಂದ್ರ ತಟ್ಟನೆ ವಿಷಯ ಬದಲಿಸಿ ಹವಾಮಾನದ ಬಗ್ಗೆ ಮಾತಾಡತೊಡಗಿದ. ಮಾತುಕತೆಯಲ್ಲಿ ಅವನ ಅಮ್ಮನೂ ಭಾಗಿಯಾದಳು. ಚಹಾ ಮುಗಿದರೂ ಆಕೆಯ ಆಸಕ್ತಿ ಕಡಿಮೆಯಾಗುವಂತೆ ತೋರಲಿಲ್ಲ. ತಂದೆತಾಯಿ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆಯಿಂದ, ಎಲ್ಲಿ ದಿನಸಿ ಕೊಳ್ಳುತ್ತೀರಿ ಅನ್ನೋತನಕ. ಕೆಲಸದವಳು ಇದ್ದಾಳೆಯೆ, ಡೋಬಿ ಬರುತ್ತಿದ್ದಾನೆಯೆ, ನಳದಲ್ಲಿ ನೀರು ಎಷ್ಟು ಗಂಟೆ ಬರತ್ತೆ, ಮಹಾಭಾರತದ ದ್ರೌಪದಿ ಎಷ್ಟು ಛಂದಿದ್ದಾಳೆ ಅಲ್ಲವೆ ಇತ್ಯಾದಿ ಇತ್ಯಾದಿ. ವಿನಯಚಂದ್ರ ಏನೂ ಮಾಡಲಾರದೆ ಚಡಪಡಿಸತೊಡಗಿದ. ರೇಶ್ಮಾಳ ಜತೆ ಏಕಾಂತಕ್ಕಿಂತ ಅವನ ಕಣ್ಣಿಗೆ ಇನ್ನೇನೂ ಮಹತ್ವದ್ದಾಗಿ ಕಾಣಿಸಲಿಲ್ಲ. ಮಹಾಭಾರತದ ದ್ರೌಪದಿ ಹೇಗಿದ್ದರೆ ಯಾರಿಗೇನು, ಸದ್ಯದ ಭಾರತದ ಅಪ್ರತಿಮ ಸುಂದರಿಯೇ ಮನೆಗೆ ಬಂದಿರೋವಾಗ! ಕೊನೆಗೂ ತಾಯಿ, ಇಲ್ಲೇ ಊಟಕ್ಕೇಳಿ ಎಂದಾಗ ರೇಶ್ಮಾ “ಓ! ನೋ! ನಾಟ್ಪುಡೇ. ನಾನೆಲ್ಲೋ ಹೊರಕ್ಕೆ ಹೋಗಬೇಕಾಗಿದೆ” ಎಂದು ಎದ್ದುಬಿಟ್ಟಳು. ಎಂದರೆ, ಈ ಸೀರೆಯುಟ್ಟುದು, ಈ ಹೆರಳು ಹಾಕಿದ್ದು, ಈ ಕೆನ್ನೆ ಮೇಲಿನ ರೂಜ್ ತನಗೋಸ್ಕರ ಅಲ್ವೆ ಎಂದು ವಿನಯಚಂದ್ರ ಕೇಳಿಕೊಂಡ. ಈಕೆ ಎತ್ತ ಹೊರಟಿರಬಹುದು? ಪ್ರೇಮಿಯನ್ನು ಭೇಟಿ ಮಾಡೋದಕ್ಕೆ? ಯಾವುದೋ ಪಾರ್ಟಿಗೆ?”
ಅಂತೂ ಆಕೇನ ಎಬ್ಬಿಸಿ ತಾಯಿ ಒಳಕ್ಕೆ ನಿಷ್ಕ್ರಮಿಸಿದ ನಂತರ ವಿನಯಚಂದ್ರ ಹೇಳಿದ : ಸ್ವಲ್ಪ ಹೊತ್ತು ಕೊಡಿ. ಅದೇನೋ ಸಂಕ್ಷಿಪ್ತವಾಗಿ ಹೇಳ್ತೀನಿ ಅಂದ್ರಲ್ಲ?”
“ಓ! ಅದೇ? ಎಲ್ಲಾ ಇನ್ನೊಮ್ಮೆ ಹೇಳ್ತೀನಿ. ತಾಳ್ಮೆಯಿಂದಿರಿ! ಈಗ, ಒಂದು ವಿಷ್ಯ. ನೀವಾವತ್ತು ಮನೆಗೆ ಬಂದಿದ್ದಾಗ ಅಂದಿದ್ದಿರಿ, ಏನಾದರೂ ಇಲೆಕ್ಟ್ರಾನಿಕ್ ತೊಂದರೆಯಿದ್ದರೆ ಹೇಳಿ ಅಂತ. ನೆನಪಿದ್ಯೆ?”
“ಇದೆ.”
“ಈಗ ನೋಡಿ, ಈ ರಿಮೋಟ್ ಕಂಟ್ರೋಲರ್ ಹಾಳಾಗಿಬಿಟ್ಟಿದೆ. ಏನಾದ್ರೂ ಮಾಡಕ್ಕಾಗತ್ತೊ ಪ್ರಯತ್ನಿಸುತ್ತೀರಾ?” ಎಂದು ರೇಶ್ಮ ತನ್ನ ಕೈಚೀಲದಿಂದ ಅದನ್ನ ತೆಗೆದು ವಿನಯಚಂದ್ರನ ಕೈಗೆ ರವಾನಿಸಿದಳು. ಆತ ಅದನ್ನು ಆಚೀಚಿ ತಿರುಗಿಸಿ ನೋಡಿದ. ಏನಾಗಿದೆ ಎಂದು ಕೇಳಿದ. ಡೆಡ್ ಅಂದಳು. ಟೀವಿ ಹೆಸರು ಕೇಳಿದ. ಹೇಳಿದಳು.
“ನನ್ನ ತಂಗಿ ಸುನಯನಗೆ ಸಂಗೀತದ ಹುಚ್ಚು. ಕೆಸೆಟ್ ಪ್ಲೇಯರ್, ಟ್ರಾನ್ಸಿಸ್ಟರ್, ವಾಕಿ ಟಾಕಿ ಏನಾದರೊಂದು ಪಕ್ಕದಲ್ಲಿರಲೇಬೇಕು. ಬೆಳಗ್ಗೆ ಸ್ನಾನದ ಮನೆಗೆ ಟ್ರಾನ್ಸಿಸ್ಟರ್ ತಗೊಂಡು ಹೊಗ್ತಾಳೆ. ನಿನ್ನೇನೂ ಹಾಗೇ ಮಾಡಿದ್ಲು. ಆದರೆ ಟ್ರಾನ್ಸಿಸ್ಟರ್ ಅಂತ ತಗೊಂಡು ಹೋದ್ದು ಇದನ್ನ. ತೀರಾ ಮರಗುಳಿ ಹುಡುಗಿ. ಅಲ್ಲಿಗೆ ಮುಗೀಲಿಲ್ಲ. ಎಲ್ಲಿದೆ ಟ್ರಾನ್ಸಿಸ್ಟರ್ ನ್ ನಾಬ್ ಅಂತ ಹುಡುಕುತ್ತ ಇದನ್ನ ಬಿಸಿನೀರಿನ ಬಕೆಟ್ ಗೆ ಹಾಕಿಬಿಟ್ಟಳು! ಒಳಗೇನಾಗಿದ್ಯೋ ದೇವರಿಗೇ ಗೊತ್ತು.” ಎಂದು ರಿಮೋಟ್ ನ ಕೇಸ್ ಹಿಸ್ಟರಿ ಹೇಳಿದಳು ರೇಶ್ಮಾ.
ಏನೂ ಭಯಪಡೋ ಅಗತ್ಯ ಇಲ್ಲ. ಇದರ ರಿಪೇರಿ ಕೇವಲ ಇಪ್ಪತ್ತ ನಾಲ್ಕು ಗಂಟೇ ಕೆಲಸ, ನಮ್ಮ ಲೆಬೋರೇಟರೀನಲ್ಲಿ ಸಕಲ ಅನುಕೂಲವೂ ಇದೆ ಅಂತ ವಿನಯಚಂದ್ರ ಆಕೆಗೆ ಆಶ್ವಾಸನೆಯಿತ್ತ. ರಿಪೇರಿಗೇನಾದರೂ ಖರ್ಚಾಗೋದಾದರೆ ಅದರ ಬಿಲ್ ತಾನು ಪಾವತಿಮಾಡುತ್ತೇನೆ ಎಂದು ಅವಳಂದದ್ದಕ್ಕೆ ವಿನಯಚಂದ್ರ ಖಡಾಖಂಡಿತವಾಗಿ ನಿರಾಕರಿಸಿಬಿಟ್ಟ. ನಿಮಗೆ ಸುಮ್ಮಗೇ ತೊಂದರೆ ಕೊಡುತ್ತಿದ್ದೇನೆ ಎಂದು ಕಳವಳ ವ್ಯಕ್ತಪಡಿಸಿದಳು. ಯಾವುದೇ ತೊಂದರೆಯಿಲ್ಲ, ತನ್ನಿಂದಾದ ಸಹಾಯವನ್ನು ಮಾಡೋದು ಆನಂದದ ಕೆಲಸ ಎಂದ ವಿನಯಚಂದ್ರ.
ಮೇಜಿನ ಮೇಲೆ ಬೋರಲು ಬಿದ್ದಿದ್ದ ಹೆರಾಕ್ಲಿಟಸ್ ಪುಸ್ತಕ ನೋಡಿ, “ಅಂದು ಬೇಸ್ ಮೆಂಟ್ ನಲ್ಲಿ ನೀವು ಓದ್ತ ಇದ್ದುದು ಇದೇ ಪುಸ್ತಕವಲ್ವೆ?” ಎಂದು ಕೇಳಿದಾಗ ಅವನಿಗೆ ಆಶ್ಚರ್ಯವಾಯಿತು.
“ಹೌದು, ಇದೇ! ಆದರೆ ನಿಮಗೆ ಹೇಗೆ ಗೊತ್ತು” ಎಂದು ಕೇಳಿದ.
“ಇದರ ಕೆಂಪು ಬೈಂಡಿಂಗ್ ನೋಡಿದ್ದು ನನ್ನ ನೆನಪಲ್ಲಿ ಇನ್ನೂ ಇದೆ.”
“ಅವತ್ತು ನೀವು ಉಟ್ಟಿದ್ದ ಸೀರೆ ಬಣ್ಣ ನನಗೂ ನೆನಪಲ್ಲಿದೆ!”
“ಹೇಳಿ ನೋಡೋಣ!”
“ನೀಲಿ! ಅಲ್ವೆ?”
“ಗೊತ್ತಿಲ್ಲ. ನಿಮ್ಮ ಪುಸ್ತಕದ ಬಣ್ಣ ನೆನಪಿನಲ್ಲಿದೆ, ಆದರೆ ಆ ದಿನ ನಾನು ಏನು ಉಟ್ಟಿದ್ದೇನೋ ನೆನಪಿಲ್ಲ. ಭಾಳ ವಿಚಿತ್ರ ಅಲ್ಲವೇ?”
“ರೇಶ್ಮ! ನೀವೀ ಪುಸ್ತಕಾನ ತಗೊಂಡು ಹೋಗ್ಬೇಕು. ಓದಿ ನೋಡಿ, ಬಹಳ ಸೊಗಸಾಗಿದೆ. ಹೆರಾಕ್ಲಿಟಸ್ ಅಂತ ಒಬ್ಬ ಗ್ರೀಕ್ ತತ್ವಜ್ಞಾನಿಯ ಮಾತುಗಳು. ಒಂದು ಮಾತು ಹೇಳ್ತಾನೆ : ಬಂದ ದಾರಿಯೇ ಹೋಗೋದಕ್ಕೂ.”
“ಬಂದ ದಾರಿಗೆ ಸುಂಕವಿಲ್ಲ!”
“ಅದು ಬೇರೆ ಮಾತು. ಅಲ್ದೆ ಒಂದೇ ನದಿಯಲ್ಲಿ ಎರಡು ಬಾರಿ ಸ್ನಾನಮಾಡೋಕೆ ಬರೋದಿಲ್ಲ ಅಂತಲೂ ಹೇಳುತ್ತಾನೆ. ಯಾಕಂದ್ರೆ ನದಿ ಯಾವಾಗ್ಲೂ ಹರೀತಾನೇ ಇರ್ತದೆ. ಅನಂತ ಚಲನೆ! ಈ ಪುಸ್ತಕ ನಿಮಗೇ, ನನ್ನ ಗಿಫ಼್ಟು!”
“ಗಿಫ್ಟಿತ್ತು ನನ್ನ ಮರೀಬೇಕೆಂತಲೆ?”
“ನಿಮ್ಮನ್ನ ಮರೆಯೋದೇ! ಅಂಥಾ ಪ್ರಶ್ನೇನೇ ಇಲ್ಲ. ನಾಳೆ ಸಂಜೆ ಇದನ್ನ ರಿಪೇರಿ ಮಾಡಿ ತಂದ್ಬಿಡ್ತೀನಿ. ಮನೆಯಲ್ಲೆ ಇರ್ತೀರಿ ತಾನೆ-ಅಥವಾ ಸಾವುದಿ ಅರೇಬಿಯಾ, ಸುಡಾನ್, ಮೊರಕ್ಕೂ….?”
“ಇರ್ತೀನಪ್ಪಾ ಇರ್ತೀನಿ. ಇನ್ಮುಂದೆ ಎಲ್ಲೂ ಹೋಗಲ್ಲ. ಆಯ್ತೆ ಸಮಾಧಾನ? ಬೈ!” ಎಂದಳು ರೇಶ್ಮ.
ವಿನಯಚಂದ್ರ ಕೈಯಾಡಿಸಿದ. ಅವನ ಭಾವನೆಗಳು ಮಾತಿಗೆ ಮೀರಿದ್ದವು.
*****