ಬೂದು ಬಣ್ಣದ ಚಳಿಗೆ
ಮುಂಜಾವದ ತುಟಿಯೊಡೆದಿದೆ
ಆಕಾಶ ಚಂದಿರನನ್ನು
ಹಣೆಯಲ್ಲಿ ಧರಿಸಿ ನಸುನಗುತಿದೆ
ಮಿಲ್ಲುಗಳಿಂದ ಹೊಗೆಯನ್ನೂ
ಹುಣ್ಣುಗಳನ್ನೂ
ಬಳುವಳಿಯಾಗಿ ಪಡೆದಿರುವ ಭದ್ರೆ
ಮುದಿಸೂಳೆಯ ಹಾಗೆ ನಡುಗುತ್ತಿದ್ದಾಳೆ
ಜಿಪುಣಶೆಟ್ಟಿ ಸೂರ್ಯನದು
ತೂಕದ ವ್ಯವಹಾರ
ಒಂದೊಂದೆ ಕಿರಣ ಚೆಲ್ಲುತ್ತಿದ್ದಾನೆ
ನೆಲದ ಕೊರಳಿಗೆ ಹಾರ.
ಅಂದವಾಗಿ ಅಲಂಕರಿಸಿಕೊಂಡು
ಅಚ್ಚುಕಟ್ಟಾಗಿ ಕುಳಿತುಕೊಂಡಿರುವ
ಹಾಲಿನ ಬಾಟಲಿಗಳಿಗೆ
ಮೈತುಂಬಾ ನಿರೀಕ್ಷೆ
ಯಾರೋ ಮಡಿವಂತರು
ಸಾರಿಸಿ ಗುಡಿಸಿದ ಅಂಗಳ
ಗುಬ್ಬಚ್ಚಿಗಳಿಗೆ ರಂಗಸಜ್ಜಿಕೆ.
ಕೈಗಾಡಿಯ ಬೈಟೂ ಕಾಫಿಯಲ್ಲಿ
ಬೋನಸ್ಸು ಮುಷ್ಕರ ಹಬೆಯಾಡುತ್ತಿದೆ
ದೂರದ ಚರ್ಚಿನ ಗಂಟೆ
ಎಂಟು ಹೊಡೆದಿದೆ.
ಪುಸ್ತಕದ ಬೆಟ್ಟ ಹೊತ್ತ
ಪುಟಾಣಿಗಳಿಂದ ಪ್ರಾರ್ಥನಾಗೀತೆ
ಕಾಡಿನ ಕಡವೆಯ ಮರಿಗಳು
ಊರ ಉದ್ಯಾನವನದ
ಕಬ್ಬಿಣದ ಕಂಬಗಳಿಗೆ
ಹತಾಶೆಯಿಂದ ಕೊರಳು ಉಜ್ಜುತ್ತಿವೆ
ಬತ್ತಲಾದ ಪುಟ್ಟ ಗಿಡಗಳು
ವನಮಹೋತ್ಸವದ ದಿನ ಎಣಿಸುತ್ತಿವೆ.
ಚಪ್ಪಲಿ, ಚೀಲ, ಕೊಡೆ
ಚದುರಿ ಚೆಲ್ಲಾಪಿಲ್ಲಿಯಾಗಿವೆ.
ವರದಕ್ಷಿಣೆ ತರದ ಹುಡುಗಿಯ ಹಾಗೆ
ಇಡಿಯಾಗಿ ಮೈಸುಟ್ಟುಕೊಂಡಿರುವ
ಕಾರು ಮುಖ ಮಾತ್ರ ಉಳಿಸಿಕೊಂಡಿದೆ.
ಕೈಗಾಡಿಗೆ ಕಾಲಿಲ್ಲ
ಶನಿದೇವರ ರಥ ಕಾಣೆಯಾಗಿದೆ.
ಚುರುಮುರಿ ಉಂಡೆಯನ್ನು
ಸುತ್ತಿರುವ ಮಾಸಲು ಹಾಳೆಯಲ್ಲಿ
ಉಲ್ಲಾಸಭರಿತ ಕವಿತೆ.
ಒಂದಿಷ್ಟು ಕದನ-ಕುತೂಹಲ
ಆಮೇಲೆ-
ಲಾಠಿ ಬೂಟುಗಳ ಟಪ ಟಪ
ಸದ್ದಿನ ಹಿನ್ನೆಲೆಯಲ್ಲಿ
ಟೋಪಿಗಳ ಶಾಂತಿಸಭೆ.
ಭಜನೆ, ತಾಳ, ಬೆಂಕಿ
ಸಣ್ಣಗೆ ಉಸಿರು ಕಟ್ಟಿಸುವ ಹೊಗೆ.
ಯಾರದ್ದೊ….
ಕೊನೆಯ ಮೆರವಣಿಗೆ.
ಸೀಳಿಹೋದ ಅಭಯಹಸ್ತದ ಮಗ್ಗುಲಲ್ಲಿ
ಚಿಂದಿಚಿಂದಿಯಾದ
ನೇಗಿಲು ಹೊತ್ತ ರೈತನ ಚಿತ್ರ.
ಕಣ್ಣರಳಿಸಿ ನೋಡುತ್ತಿದ್ದಾನೆ
ಹಸಿರು ರುಮಾಲಿನ ಹುಡುಗ
ಮಾಕ್ಸ್, ಬುದ್ಧ, ಗಾಂಧಿ
ಚಿಂತನೆಯಲ್ಲಿ ಗಡ್ಡ ಹಣ್ಣಾಗುತ್ತಿದೆ
ಮೈಮರೆತು ನಿಂತಿದ್ದಾನೆ ಹುಡುಗ!
ಗಾಳಿಯೊಳಗೆ ತೇಲಿದಂತೆ
ಚೆಲುವಾಗಿ ಹೂವಿನ ಹಾಗೆ
ಪರಿಮಳಿಸುತ್ತ ನಡೆದು ಬರುತ್ತಿದ್ದಾಳೆ
ಸೇಬು ಕೆನ್ನೆಯ ಹುಡುಗಿ
ಉತ್ಸವದ ಮೂರುತಿಯ ಹಾಗೆ ಶಿಸ್ತಾಗಿ
ಉತ್ಸಾಹ ಉಕ್ಕುಕ್ಕಿ ಚೆಲ್ಲುವ ಹಾಗೆ
ಹರಿದು ಬರುತ್ತಿದ್ದಾಳೆ ಹುಡುಗಿ
ಮೊಟ್ಟ ಮೊದಲ ಹೆಜ್ಜೆ ಇಟ್ಟ
ಮಗುವಿನ ಸಂಭ್ರಮದಲ್ಲಿ
ಅವರಿವರನ್ನು ಕೇಳುತ್ತಿದ್ದಾಳೆ….
ಈ ರಸ್ತೆ ಹೋಗುವುದೆಲ್ಲಿಗೆ?