ಗಂಡ
ಹಳೆಯ ಪ್ರೇಯಸಿಯ ನೆನಪುಗಳನ್ನು
ಎದೆಗೊತ್ತಿಕೊಂಡು ಸಂತೈಸುತ್ತಿದ್ದಾನೆ.
ಹೆಂಡತಿ-
ಒಂಟಿ ಬಾವಲಿಯ ರೆಕ್ಕೆ ಬಡಿತಗಳನ್ನು
ಎಣಿಸುತ್ತಿದ್ದಾಳೆ.
ಗೋಡೆಗಳು ಪಿಸುಗುಟ್ಟುತ್ತಿವೆ ಗಂಟಲಲ್ಲಿ
ಪ್ರೀತಿ ಸತ್ತಿದೆ ಮನೆಯಲ್ಲಿ.
ಗಂಡ
ಸವೆದ ಕನಸುಗಳನ್ನು ಗುಡ್ಡೆಹಾಕಿ
ಬೆಂಕಿ ಹಚ್ಚುತ್ತಿದ್ದಾನೆ.
ಹೆಂಡತಿ-
ಮೇಣದ ಬತ್ತಿಗಳಾಗಿ ಉರಿದುಹೋಗಿರಿ
ಎಂದು ತಾರೆಯರನ್ನು ಶಪಿಸುತ್ತಿದ್ದಾಳೆ.
ಗೋಡೆಗಳು ಪಿಸುಗುಟ್ಟುತ್ತಿವೆ ಗಂಟಲಲ್ಲಿ
ಪ್ರೀತಿ ಸತ್ತಿದೆ ಮನೆಯಲ್ಲಿ.
ಕೆಂಡ ಹೀರುತ್ತಾ ಗಂಡ
ಬಂಡೆಯಾಗುತ್ತಿದ್ದಾನೆ ಒಳಗೆ
ಚಳಿಗಾಳಿಯ ಸೆರಗಲ್ಲಿ ಸುತ್ತಿಕೊಂಡು
ಹೆಪ್ಪುಗಟ್ಟುತ್ತಿದ್ದಾಳೆ ಹೆಂಡತಿ ಹೊರಗೆ.
ಗೋಡೆಗಳು ಪಿಸುಗುಟ್ಟುತ್ತಿವೆ ಗಂಟಲಲ್ಲಿ
ಪ್ರೀತಿ ಸತ್ತಿದೆ ಮನೆಯಲ್ಲಿ.
‘ಪ್ರೀತಿ’ ಎಲ್ಲಾ ಮೆಟ್ಟಿ ಹುಟ್ಟಿತ್ತು.
ನೀಟಾದ ಕಣ್ಣು, ಮೂಗು, ತುಟಿ
ಶಿಲ್ಪ ಮೈ ಕಟ್ಟು ಹೊತ್ತಿತ್ತು.
ಕದ ತಟ್ಟಬಹುದೆ ಸಾವು?
ಹಣ್ಣಾಯಿತು ಪ್ರೀತಿ.
ಮಣ್ಣಾಯಿತು ಪ್ರೀತಿ.
ಕತ್ತಲು ಕವನಿಸುವ ಹೊತ್ತಿನಲ್ಲಿ
ಗೋಡೆಗಳು ಬಿಕ್ಕುತ್ತಿವೆ ಮೌನದಲ್ಲಿ
ಪ್ರೀತಿ ಸತ್ತ ಮನೆಯಲ್ಲಿ.