ಹಿತ್ತಲ ಬದಿಯಲಿ ಬೆಳೆದ ಮೂಲಿಕೆಗಳನ್ನು ಆಯ್ದು
ತಂದು ಜೀರಿಗೆ ಬೆರೆಸಿ ಕುದಿಸಿ ಇಡುತ್ತಾಳೆ ಆಕೆ
ತನ್ನ ಕಾಡಿದ ಅದೇ ಬಾಲ್ಯದ ನೋವು
ಇವರ ಕಾಡದಿರಲಿ ಎಂದು.
ಕಾಡುತ್ತವೆ ನೆನಪು
ನಿನ್ನೆ ನೆನೆಯಿಟ್ಟ ಕಾಳುಗಳು ಇಂದು
ಮೊಳಕೆಯೊಡೆದಿವೆ
ಜೋಪಾನವಾಗಿ ತೆಗೆದಿಡುವ ಕೆಲಸವಾಗಬೇಕು.
ಮೊಳಕೆ ಮುರಿಯದಂತೆ ಜಾಗೃತಿಯಲ್ಲಿ,
ದಷ್ಟಪುಷ್ಟ ಸಸಿಗಳು ಧೃಢಮೊಳಕೆಯಿಂದ
ಮಾತ್ರ ಸಾಧ್ಯ-ಎನ್ನುತ್ತಿರುತ್ತಾಳೆ.
ಅದು ಆಕೆಗೆ ಗೊತ್ತು.
ಕಾಡುತ್ತವೆ ನೆನಪು
ನೂಲಿನಂತೆ ಸೀರೆ ಆಗಬೇಕೆಂದು
ಚೆಂದದ ಗಟ್ಟಿನೂಲಲ್ಲೇ ನೇಯ್ದರೂ ಈಗೀಗ
ಸೀರೆಗಿಲ್ಲ ಅದೇ ಆಕಾರ ಬಣ್ಣ ಧಾಡಸಿತನ
ಎತ್ತೆತ್ತಿ ಒಗೆದರೂ ಹರಿಯದ ಆ ಕಾಲದ
ಸೀರೆ ಇವಲ್ಲ ಕಸಿವಿಸಿಯಾಗುತ್ತಾಳೆ ಆಕೆ
ಬರಿ ಚೆಂದ ಅಲ್ಲ ಬದುಕು ಆತ್ಮಬಲ ಬೇಕು
ಸ್ಥೈರ್ಯಕ್ಕೆ ಇಂಬು ಆಕೆ
ಕಾಡುತ್ತವೆ ನೆನಪು
ಎಂದೋ ಎಡವಿಕೊಂಡ ಕಾಲು
ನೋವು ಮರುಕಳಿಸಿ ಘಾಸಿ ಮಾಡುತ್ತವೆ.
ತಣ್ನೀರನ್ನಾದರೂ ತಣಿಸಿ ಕುಡಿಯಲು ಹೇಳು
ಹೇಳುತ್ತಾನೆ ಆಕೆಗೆ
ಕೇಳಲೆಂದೆ – ಎತ್ತರಿಸಿದ ದನಿಯಲ್ಲಿ
ಬೇಡಿದ್ದನ್ನು ಕೊಡಿಸಬೇಡ
ತಾಕೀತು ಮಾಡುತ್ತಾನೆ ಆಗಾಗ
ಚಟವಾದೀತು, ಹಟವಾದೀತು ಬಯಕೆಗಳು
ಬೆಳೆದಂತೆ – ಎನ್ನುತ್ತಾನೆ
ರಾಗಕ್ಕೆ ತೆರನಾದ ತಾಳ ಆಕೆಯದು.
ಕಾಡುತ್ತವೆ ನೆನಪು
ಬಿರುಸಾದ ಗಾಳಿಗೂ ಕೂಡ ಗಿಡಗಳು
ಬಗ್ಗಿಲ್ಲ. ಸ್ವಲ್ಪ ಸೊಟ್ಟಗಾದರೂ ಅರೆಗಳಿಗೆ
ನೆಟ್ಟಗೆ ನಿಲ್ಲುತ್ತವೆ ಮರುಗಳಿಗೆ
ಬಯಲ ಗಿಡಗಳಿಗೆ ಗಾಳಿ ಎದುರಿಸಿ ಗೊತ್ತು.
ಬೆಳೆಯಬೇಕು, ಕಲಿಯಲಿ ಇವರೂ ಅವರಂತೆ
ಎನ್ನುತ್ತಾನೆ ಆತ
ಕಾಡುತ್ತವೆ ನೆನಪು
ತೊಗಲ ಹೊದಿಕೆಯ ಹೊದಿಸಿ
ರಕ್ತಕ್ಕೆ ಕೆಂಪು ಸುರಿದವರು ಅವರು
ಕಾಡುತ್ತವೆ ನೆನಪು
ಕಾಡುತ್ತಲೇ ಇರುತ್ತವೆ ನೆನಪು.
*****