(ಪೂರ್ವಾರ್ಧ)
ಯಾರಲ್ಲಿ? ಯಾರಿದ್ದೀರಿ?
ಬಂದಿದ್ದೇನೆ. ಬಾಗಿಲು ತೆಗೆಯಿರಿ.
ಈತನಕ ಇದ್ದಳು, ಈಗಿಲ್ಲ
ಎಂದರೆ ಹೇಗೆ ನಂಬಲಿ?
ಕಿಟಕಿಗಳ ತೆರೆದುಕೊಳ್ಳಿ
ಬಾಗಿಲುಗಳ ತೆರೆದುಕೊಳ್ಳಿ
ಬಂದಿದ್ದೇನೆ, ಕರೆದುಕೊಳ್ಳಿ.
ಹೌದು, ಇಲ್ಲೆ ಈ ಕಿಟಕಿಯ ಬಳಿ ಕುಳಿತು
ತಾರೆಯರನ್ನು ಎಣಿಸುತ್ತಿದ್ದಳು.
ಈಗ ಆಕಾಶ ಬಟಾಬಯಲು
ಸುರಿಯುತ್ತಿದೆ ಕತ್ತಲು.
ಹೌದು. ಇಲ್ಲೆ ಈ ಮೇಜಿನ ಮೇಲೆ
ತಲೆಯಿಟ್ಟು ಕವಿತೆ ಬರೆಯುತ್ತಿದ್ದಳು.
ಈಗ ಮೌನದ ಕಾವಲು
ನೆನಪುಗಳ ನೆರಳು.
(ಉತ್ತರಾರ್ಧ)
ಗೆಳೆಯಾ…
ನಿನ್ನನ್ನು ಹೇಗೆ ಸಂತೈಸಲಿ?
ಅದೋ… ಈ ಮೂಲೆಯಲ್ಲಿ
‘ಬೆಂದು ಬೂದಿಯಾದ ಕವಿತೆಗಳ
ತುಣುಕುಗಳಿವೆ ಆಯ್ದುಕೊ…
ಹಠಮಾರಿ ಗಾಳಿ ಇಡಿಯಾಗಿ
ಹಂಚಿಕೊಳ್ಳುತ್ತಿದೆ
ತಡಮಾಡದೆ ಕಸಿದುಕೊ…
ದಯವಿಟ್ಟು ಹೋಗು
ಯಾವತ್ತಿಗೂ ಇಲ್ಲ ನಿನ್ನ ಹುಡುಗಿ
ಕದ ಮುಚ್ಚಿಕೊ…
ನೋಡಬೇಡ ತಿರುಗಿ.