೧
ಅವನ ಕಣ್ಣಲ್ಲಿ…
ಬೆಟ್ಟಗಳು ಬೆಳೆಯುತ್ತಿದ್ದವು
ತಾರೆಯರು ಹೊಳೆಯುತ್ತಿದ್ದವು.
ಬಣ್ಣಗಳು ಅರಳುತ್ತಿದ್ದವು.
ಮೋಡಗಳು ಹೊರಳುತ್ತಿದ್ದವು.
ಮಳೆ ಸುರಿಯುತ್ತಿತ್ತು.
ಹೊಳೆ ಹರಿಯುತ್ತಿತ್ತು.
ಹಗಲು ಉರಿಯುತ್ತಿತ್ತು.
ಇರುಳು ತಂಪೆರೆಯುತ್ತಿತ್ತು.
ನನಗೊ… ಅಚ್ಚರಿ!
೨
ನಾನು ಬೆಟ್ಟವನ್ನೇರಿ
ಮೋಡಗಳೊಂದಿಗೆ ಮಾತಾಡುತ್ತಿದ್ದೆ.
ಬಣ್ಣಗಳನ್ನು ಬಳಿದುಕೊಂಡು
ಮಳೆಯಲ್ಲಿ ಮೀಯುತ್ತಿದ್ದೆ.
ಹೊಳೆಯಲ್ಲಿ ಮುಳುಗಿ
ತಾರೆಯರನ್ನು ಆರಿಸುತ್ತಿದ್ದೆ.
ನನಗೆ ಖುಷಿ.
೩
ಈಗ
ನಾನೆ ಮೋಡವಾಗಿದ್ದೇನೆ.
ನಾನೆ ಬೆಟ್ಟವಾಗಿದ್ದೇನೆ.
ನಾನೆ ಬಣ್ಣವಾಗಿದ್ದೇನೆ.
ಈಗ
ನಾನು ಮಳೆಯಾಗಿದ್ದೇನೆ.
ನಾನು ಹೊಳೆಯಾಗಿದ್ದೇನೆ.
ನಾನು ಇರುಳಾಗಿದ್ದೇನೆ.
ಅವನ ಕಣ್ಣಲ್ಲೆ ಕರಗುತ್ತ
ಅವನೊಳಗೆ ಇಳಿದಿದ್ದೇನೆ.
ಲಯವಾಗಿದ್ದೇನೆ.