೧
ಸರಿರಾತ್ರಿಯಲ್ಲಿ ಹುಡುಗಿ
ಕನಸು ಕಾಣುತ್ತಿದ್ದಾಳೆ.
ಅವಳ ಕನಸು ಹೀಗಿದೆ:
ಪೇಪರಿನವನ ಚರಪರ
ಚಪ್ಪಲಿ ಸದ್ದಿನಲ್ಲಿ
ಹಾಲಿನವನ ಅವಸರದ ಗುದ್ದಿನಲ್ಲಿ
ಇಬ್ಬನಿಯಲ್ಲಿ ತೊಯ್ದ
ಹೂವಿನೊಡತಿಯ ದನಿಯಲ್ಲಿ
ಬೆಳಗಾಗಿದೆ
ಮುಲ್ಲ ಅಲ್ಲಾನಿಗಾಗಿ
ತುಟಿ ಬಿಚ್ಚಿದ್ದಾನೆ
ಮೈಕಾಸುರ ಮಂಜುನಾಥ
ಎಂದು ಕಿವಿ ಕಚ್ಚುತ್ತಿದ್ದಾನೆ.
ಬಂಗಾರದ ರಥ
ರಿಪೇರಿಗೆ ಹೋಗಿದೆ
ಬರಿಗಾಲಲ್ಲೆ ನಡೆದು ಬಂದ
ಸೂರ್ಯನ ಮುಖ ಕೆಂಪಾಗಿದೆ.
ಗಿಡಗಂಟೆಗಳ ಕೊರಳೊಳಗಿಂದ
ಹೊಮ್ಮಿದ ಹಕ್ಕಿಗಳ ಹಾಡನ್ನು
ಆಕಾಶವಾಣಿ ಮರುಪ್ರಸಾರ
ಮಾಡುತ್ತಿದೆ, ಕೇಳಲು
ತುಂಬಾ ಹಿತವಾಗಿದೆ.
೨
‘ಬೆಳಗಾಯ್ತು’ ಎಂದರಚುತ್ತಾ
ಹುಡುಗಿಯ ಅಮ್ಮ
ತಟ್ಟಿ ಎಬ್ಬಿಸುತ್ತಿದ್ದಾಳೆ.
ಹುಡುಗಿ ಕಿವುಡಿ-
ಅವಳಿಗೆ ಸದ್ದುಗದ್ದಲದಲ್ಲಿ
ಬೆಳಗಾಗುವುದಿಲ್ಲ.
ಹುಡುಗಿ ಕುರುಡಿ-
ಅವಳಿಗೆ ವರ್ಣರಂಜಿತ
ಬೆಳಗು ಕಾಣಲಾಗುವುದಿಲ್ಲ.
ಹುಡುಗಿ ಮೂಗಿ-
ಕನಸನ್ನೇಕೆ ಕಸಿದುಕೊಂಡೆ?
ಎಂದವಳು ಅಮ್ಮನನ್ನು
ಕೇಳುವುದಿಲ್ಲ.
ಸದ್ಯಕ್ಕವಳು ಇರುಳಿನಲ್ಲಿ
ಬೆಳಗಿನ ಕನಸು ಕಂಡ
ಖುಷಿಯಲ್ಲಿದ್ದಾಳೆ.