ಅವೊತ್ತು ಆಗಸದ ತುಂಬ
ಮೋಡಗಳು ನೇತಾಡುತ್ತಿದ್ದವು.
ಕಪ್ಪು ಹೊದ್ದು ಮಲಗಿದ್ದ ರಸ್ತೆಗಳಷ್ಟೇ
ಕೈ ಬೀಸುತ್ತಿದ್ದವು.
ನಿನ್ನ ಹೆಜ್ಜೆ ಹಾರಿಸಿದ ಧೂಳೊಂದಿಗೆ
ಮಸುಕಾಗಿ ಮರೆಯಾದ ಬೆನ್ನ
ಕಣ್ತುಂಬಿಕೊಂಡು ನಿಂತಿದ್ದೆ,
ಮಾತು ಮರೆತವಳಂತೆ.
ಇವೊತ್ತು ಮೈ ತುಂಬ ಕಣ್ಣುಕಿವಿ
ಬರೆದುಕೊಂಡು ನಿಂತಿದ್ದೇನೆ,
ಬೀಸಿ ಕರೆಯಬಹುದಾಗಿದ್ದ ಕೈಗಳಿಂದ
ನೆನಪ ತಬ್ಬುತ್ತಿರುವ ಹುತ್ತ
ಕೆಡುವುತ್ತಾ ಕಾದಿದ್ದೇನೆ.
ಮರೆತ ಮಾತ ದಿಕ್ಕು ದಿಕ್ಕಿಗೆ ತೂರುತ್ತಾ
ಇನ್ನೂ… ಕಾಯಲೆ ಸಖ?
ಮತ್ತೆ ನೀ ಮರಳಿ ಬಂದೆಯಾದರೆ
ನೆನಪಿನ ಬಳ್ಳಿಗಳು ಜಗ್ಗಿ
ನಿನ್ನನ್ನು ಬಂಧಿಸಲಿ.
ಮಣ್ಣೊಳಗೆ ಮಣ್ಣಾದ ಕಣ್ಣ ಕೊನೆಗಳು
ಸ್ವಾಗತಿಸಲಿ, ಕಿವಿಗಳು ಆಲಿಸಲಿ.
ತುಟಿಗಳು ಬಿಚ್ಚಿ ಮಾತನಾಡಲಿ.
ಹೃದಯ ಸಂತೈಸಲಿ.