೧
ನೀವು ಕೇಳಿದ್ದು ಒಳ್ಳೆಯದೆ ಆಯಿತು.
ನನಗೀಗ ಎಲ್ಲವೂ ಅರ್ಥವಾಯಿತು.
ನೋಡಿ –
ಹಿಂಡುಹಿಂಡಾಗಿ ಅಲೆಯುವ
ಮೋಡಗಳಲ್ಲೊಂದು ತುಣುಕೆಂದೊ…
ಆಕಾಶದ ಕ್ಯಾನ್‌ವಾಸಿನಲ್ಲಿ
ಬಳಿದ ಬಣ್ಣಗಳಲ್ಲೊಂದು ಎಳೆಯೆಂದೊ…
ಕಣ್ಣಾಮುಚ್ಚಾಲೆಯಾಡುವ
ಮಿಂಚಿನೊಳಗೊಂದು ಕಿಡಿಯೆಂದೊ…
ಒರಟಾಗಿ ಬೀಸುವ
ಗಾಳಿಯಲ್ಲೊಂದು ಗೆರೆಯೆಂದೊ…
ಈಗವನನ್ನು ವರ್ಣಿಸುವುದಿಲ್ಲ.
೨
ರಕ್ತ-ಮಾಂಸ-ಮೂಳೆ ವಿರಚಿತ
ನನ್ನೆದೆಯ ಮೇಲೆ ಮಲಗಿದ್ದ.
ಯಾರು ಕರೆದರೊ ಗೊತ್ತಿಲ್ಲ.
ಯಾಕೆ ಕರೆದರೊ ಗೊತ್ತಿಲ್ಲ.
ಯಾವಾಗ ಕರೆದರೊ ಗೊತ್ತಿಲ್ಲ.
ಪ್ರೀತಿಯನ್ನು ಒದ್ದು ಹೊರಟು ಹೋದ.
ನನಗನಿಸುತ್ತದೆ
ಮಣ್ಣಿನೊಳಗೆ ಹಿಡಿಯಾಗಿ ಮಲಗಿದ್ದಾನೆ,
ನಾನವನ ಮುಟ್ಟಲಾರೆ.
ಮಣ್ಣಿನೊಳಗೆ ಮೈ ಮರೆತು ಮಲಗಿದ್ದಾನೆ,
ನಾನವನ ಎಬ್ಬಿಸಲಾರೆ.
೩
ನಿಮ್ಮದು ಪ್ರೀತಿಯಾದರೂ ಸರಿಯೆ
ನಿಮ್ಮದು ಕರುಣೆಯಾದರೂ ಸರಿಯೆ
ಬದಲಾಯಿಸಲಾರವು ನನ್ನನ್ನು.
ನಿಮ್ಮದು ಮಾಟವಾದರೂ ಸರಿಯೆ
ನಿಮ್ಮದು ಮಾಯೆಯಾದರೂ ಸರಿಯೆ
ಒಳಗಾಗಲಾರೆ ನಾನು.
ನಾನೀಗ ಕವಯತ್ರಿ ಅಲ್ಲ
ನನ್ನಲ್ಲಿ ಕಲ್ಪನೆಗಳಿಲ್ಲ
ನನ್ನಲ್ಲಿ ಕನಸುಗಳಿಲ್ಲ
ನನ್ನಲ್ಲಿ ಕವಿತೆಗಳಿಲ್ಲ.
ಈ ಬಣ್ಣ-ಬೆಡಗು ಯಾವುದೂ
ಬದುಕ ಬೆಳಗಿಸುವುದಿಲ್ಲ.
ಅವನ ನೆನಪನ್ನು ಉಸಿರಾಡುತ್ತೇನೆ,
ಬಿಡಿ ನನ್ನ ಪಾಡಿಗೆ ನನ್ನನ್ನು.