ಮೂಲ ಪರಿಕಲ್ಪನೆಗಳು ಮತ್ತು ಹಣದ ಕಾರ್ಯಗಳು
೧.೧. ವಸ್ತು ವಿನಿಮಯ ವ್ಯವಸ್ಥೆ : ಹಣದ ಉಗಮ
ಬಹಳ ಹಿಂದಿನ ಕಾಲದಲ್ಲಿ ಹಣ ಬಳಕೆಯಲ್ಲಿರಲಿಲ್ಲ. ನಮ್ಮ ಅನೇಕ ಪೂರ್ವಿಕರು ಹಣ ಇಲ್ಲದೆ, ಹಣವನ್ನು ನೋಡದೆ ಬದುಕಿದ್ದರು. ಆಸೆಗಳು ಬಹಳ ಮಿತವಾಗಿದ್ದ ಕಾಲದಲ್ಲಿ ಹಣದ ಅಗತ್ಯವೇ ಇರಲಿಲ್ಲ. ಪುರಾತನ ಮಾನವ ಬೇಟೆಯಾಡಿ, ಹಣ್ಣು ಹಂಪಲು ತಿಂದು ಬದುಕುತ್ತಿದ್ದ. ಸ್ವಾವಲಂಬಿ ಮಾನವ ಬೇರೆಯವರನ್ನು ಯಾವುದಕ್ಕೂ ಅವಲಂಬಿಸಬೇಕಾಗಿರಲಿಲ್ಲ. ಹಾಗಾಗಿ ವಿನಿಮಯ ಕ್ರಿಯೆಯ ಅಗತ್ಯವೇ ಇರಲಿಲ್ಲ.
ಮಾನವ ಕೃಷಿಯುಗಕ್ಕೆ ಕಾಲಿಟ್ಟಾಗ ಪರಿಸ್ಥಿತಿ ಬದಲಾಯಿತು. ಕೆಲವರು ಕೃಷಿ ಉಪಕರಣಗಳನ್ನು ಉತ್ಪಾದಿಸುವುದರಲ್ಲಿ ಪರಿಣತರಾದರು. ಕೆಲವರು ಕೃಷಿ ಉತ್ಪನ್ನಗಳನ್ನು ಮಾತ್ರವೇ ಉತ್ಪಾದಿಸತೊಡಗಿದರು. ಆಗ ಇವೆರಡು ವರ್ಗಗಳ ನಡುವೆ ವಿನಿಮಯ ನಡೆಯುವುದು ಅನಿವಾರ್ಯವಾಯಿತು. ಇದುವೇ ಮುಂದೆ ಹಣದ ಶೋಧನೆಗೆ ವ್ಯಾಪಾರ-ವಹಿವಾಟಿಗೆ ಕಾರಣವಾಯಿತು.
ಕೃಷಿಯುಗದಲ್ಲೇ ವಿನಿಮಯ (exchange) ಆರಂಭಗೊಂಡರೂ ಆಗ ಹಣದ ಶೋಧವಾಗಿರಲಿಲ್ಲ. ರೈತರು ತಮ್ಮ ದವಸಧಾನ್ಯಗಳನ್ನು ಉಪಕರಣ ತಯಾರಕರಿಗೆ ನೀಡಿ ಬದಲಿಯಾಗಿ ಉಳುಮೆಗೆ ಅಗತ್ಯವಾದ ಉಪಕರಣಗಳನ್ನು ಪಡೆಯುತ್ತಿದ್ದರು. ಈ ರೀತಿಯ ವಿನಿಮಯ ಕ್ರಮಕ್ಕೆ ವಸ್ತು ವಿನಿಮಯ ಅಥವಾ ಸಾಟಿ ವಿನಿಮಯ ಪದ್ಧತಿ ಎಂದು ಹೆಸರು. ವಸ್ತು ವಿನಿಮಯ ಪದ್ಧತಿಯಿಂದಾಗಿ ಅವರಿಗೆ ಅತ್ಯಂತ ಸರಳವಾಗಿದ್ದ ಆರ್ಥಿಕ ಜೀವನ ಸ್ವಲ್ಪ ಸಂಕೀರ್ಣತೆಯೊಂದಿಗೆ ಹೊಸ ಆಯಾಮವನ್ನು ಪಡೆಯಿತು.
ವಸ್ತು ವಿನಿಮಯ ವ್ಯವಸ್ಥೆಯಲ್ಲಿ ಹಣದ ಬಳಕೆ ಇರಲಿಲ್ಲ. ವಸ್ತುಗಳಿಗೆ ಬದಲಾಗಿ ವಸ್ತುಗಳನ್ನು ಅಥವಾ ಸೇವೆಗಳಿಗೆ ಬದಲಾಗಿ ಸೇವೆಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದೇ ವಸ್ತು ವಿನಿಮಯ ವ್ಯವಸ್ಥೆ, ಇದಕ್ಕೆ ಅದಲುಬದಲು ವ್ಯವಸ್ಥೆ, ಸರಕು ವಿನಿಮಯ ವ್ಯವಸ್ಥೆ, ಸಾಟಿ ವಿನಿಮಯ ಕ್ರಮ ಎಂಬಿತ್ಯಾದಿ ಹೆಸರುಗಳಿವೆ. ಹಣವೆಂಬ ವಿನಿಮಯ ಮಾಧ್ಯಮದ ಶೋಧ ಪೂರ್ವದಲ್ಲಿ ಬಳಕೆಯಲ್ಲಿದ್ದ ವಿನಿಮಯ ಕ್ರಮ ಇದು.
ವಸ್ತು ವಿನಿಮಯ ವ್ಯವಸ್ಥೆಯ ಶರತ್ತುಗಳು
ವಸ್ತು ವಿನಿಮಯ ವ್ಯವಸ್ಥೆಯ ಯಶಸ್ಸು ನಾಲ್ಕು ಶರತ್ತುಗಳನ್ನು (conditions) ಅವಲಂಬಿಸಿದೆ.
೧. ಹಿಂದುಳಿಕ : ವಸ್ತು ವಿನಿಮಯ ವ್ಯವಸ್ಥೆ ಹಿಂದುಳಿದ ಮತ್ತು ನಾಗರಿಕತೆಯ ಸೋಂಕಿಲ್ಲದ ಸಮಾಜದಲ್ಲಿ ಹೆಚ್ಚು ಯಶಸ್ವಿಯಾಗುತ್ತದೆ. ಅಂತಹ ಸಮಾಜದಲ್ಲಿ ಮಾನವನ ಆಸೆಗಳು ಮಿತವಾಗಿರುತ್ತವೆ. ಉತ್ಪಾದನೆ ಕೂಡ ಒಂದು ಮಿತಿಯೊಳಗೆ ನಡೆಯುತ್ತದೆ. ಆದುದರಿಂದ ವಿನಿಮಯ ತುಂಬಾ ಸರಳ ಮತ್ತು ಸುಲಭ ಸಾಧ್ಯವಾಗುತ್ತದೆ.
೨. ಕೃಷಿ ವ್ಯವಸ್ಥೆ: ಕೃಷಿ ಪ್ರಧಾನವಾಗುಳ್ಳ ಒಂದು ಸಮಾಜದಲ್ಲಿ ಅನುಭೋಗಿಗಳೆಲ್ಲರೂ ಉತ್ಪಾದಕರಾಗಿರುತ್ತಾರೆ. ಅಂತಹ ವ್ಯವಸ್ಥೆಯಲ್ಲಿ ಆಸೆಗಳ ಹೊಂದಾಣಿಕೆ ಸುಲಭವಾಗುತ್ತದೆ. ಇದು ವಸ್ತು ವಿನಿಮಯ ವ್ಯವಸ್ಥೆಯ ಯಶಸ್ಸಿಗೆ ಅತ್ಯಂತ ಮುಖ್ಯವಾದ ಶರತ್ತಾಗಿದೆ.
೩. ಕಡಿಮೆ ಸರಕುಗಳು: ಸಮಾಜದಲ್ಲಿ ಕಡಿಮೆ ಸರಕುಗಳ ಉತ್ಪಾದನೆ ಇದ್ದಾಗ ಮಾತ್ರ ವಸ್ತು ವಿನಿಮಯ ವ್ಯವಸ್ಥೆ ಯಶಸ್ಸನ್ನು ಗಳಿಸುತ್ತದೆ. ಬೃಹತ್ ಪ್ರಮಾಣದ ಉತ್ಪಾದನೆ ವಿನಿಮಯ ಮಾಧ್ಯಮವೊಂದರ ಶೋಧನೆಯನ್ನು ಅನಿವಾರ್ಯವನ್ನಾಗಿಸುತ್ತದೆ. ಅಲ್ಪತೃಪ್ತ ಸಮಾಜವೊಂದರಲ್ಲಿ ವಸ್ತು ವಿನಿಮಯ ಕ್ರಮ ಜನಪ್ರಿಯವಾಗುತ್ತದೆ.
೪. ಕೆಲಸದ ಸ್ವರೂಪ: ಕಲವು ಕೆಲಸಗಳಿಗೆ ಪ್ರತಿಫಲವಾಗಿ ಸರಕುಗಳನ್ನೇ ಕೊಡಲಾಗುತ್ತದೆ. ಮುಖ್ಯವಾಗಿ ಗ್ರಾಮೀಣ ಭಾರತದಲ್ಲಿ ಕೃಷಿ ಕ್ಷೇತ್ರದಲ್ಲಿ ಕೂಲಿಗೆ ಪ್ರತಿಯಾಗಿ ಸರಕುಗಳನ್ನು ನೀಡುವ ಕ್ರಮವಿದೆ. ತೆಂಗಿನಕಾಯಿ ಕೀಳುವುದು, ನೇಜಿನಾಟಿ, ಮುಳಿ ಹುಲ್ಲು ಕತ್ತರಿಸುವುದು, ಛಾವಣಿಗೆ ಮುಳಿಹುಲ್ಲು ಹೊದಿಸುವುದು, ಬತ್ತದ ಕೊಯಿಲು ಮುಂತಾದ ಕೆಲಸಗಳಿಗೆ ಪ್ರತಿಯಾಗಿ ಸರಕುಗಳನ್ನೇ ಕೊಡಲಾಗುತ್ತದೆ. ಕೊಟ್ಟೂರಪ್ಪನ ಹೊಲದಲ್ಲಿ ಭೀಮಪ್ಪ ಉಳುಮೆ ಮಾಡುವುದು. ಭೀಮಪ್ಪನ ಹೊಲ ಉಳುಮೆಗೆ ಕೊಟ್ಟೂರಪ್ಪ ಬಂದು ಸಹಕರಿಸುವುದು ಇನ್ನೊಂದು ಉದಾಹರಣೆ. ಇಲ್ಲಿ ಸೇವೆಗೆ ಸೇವೆ ವಿನಿಮಯಗೊಳ್ಳುತ್ತದೆ. ಇಂತಹ ಸಂದರ್ಭಗಳು ವಸ್ತು ವಿನಿಮಯ ವ್ಯವಸ್ಥೆಯನ್ನು ಜಯಪ್ರದಗೊಳಿಸುತ್ತವೆ.
ವಸ್ತು ವಿನಿಮಯ ವ್ಯವಸ್ಥೆಯ ಪ್ರಯೋಜನಗಳು (ಒಳಿತುಗಳು)
ವಸ್ತು ವಿನಿಮಯ ವ್ಯವಸ್ಥೆ ಒಂದು ಪುರಾತನ ಕ್ರಮವಾದರೂ ಅದು ಕೆಲವು ಒಳ್ಳೆಯ ಗುಣಗಳನ್ನು ಹೊಂದಿದೆ. ಅದರ ಮುಖ್ಯ ಪ್ರಯೋಜನಗಳು ಹೀಗಿವೆ.
೧. ಪೂರ್ಣತೃಪ್ತಿ: ವಸ್ತು ವಿನಿಮಯ ಕ್ರಮದಲ್ಲಿ ಯಾವುದೇ ಮೋಸಕ್ಕೆ ಆಸ್ಪದವಿಲ್ಲ. ಇಬ್ಬರು ವ್ಯಕ್ತಿಗಳು ಪರಸ್ಪರರ ವಸ್ತುಗಳನ್ನು ವಿನಿಮಯ ಮಾಡಿಕೊಳ್ಳುವಾಗ ಪೂರ್ಣ ತೃಪ್ತಿಯನ್ನು ಪಡೆಯುತ್ತಾರೆ. ಸರಕುಗಳಿಗೆ ನಿಗದಿತ ಬೆಲೆ ಇಲ್ಲದ ಕಾರಣ ವಿನಿಮಯಕಾರರು ತೃಪ್ತಿಗೊಳ್ಳುತ್ತಾರೆ.
೨. ಕಾಯಕಕ್ಕೆ ಮಹತ್ತ್ವ: ವಸ್ತು ವಿನಿಮಯ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಮೂಲತಃ ಉತ್ಪಾದಕರು. ಆಗ ಮಾತ್ರ ಅವರಿಗೆ ಅನುಭೋಗಕ್ಕೆ ಅರ್ಹತೆ ದೊರೆಯುತ್ತದೆ. ಅಂದರೆ ದೈಹಿಕ ಶ್ರಮದಿಂದ ವಸ್ತುಗಳನ್ನು ಉತ್ಪಾದಿಸಿದ ಬಳಿಕವಷ್ಟೇ ಏನನ್ನಾದರೂ ವಿನಿಮಯ ಮೂಲಕ ಪಡೆಯಲು ಸಾಧ್ಯ. ಆದುದರಿಂದ ವಸ್ತು ವಿನಿಮಯ ವ್ಯವಸ್ಥೆಯಲ್ಲಿ ಕಾಯಕ ಅಥವಾ ದೈಹಿಕ ಶ್ರಮಕ್ಕೆ ಮಹತ್ವ ದೊರೆಯುತ್ತದೆ.
೩. ಉತ್ಪಾದನೆಯ ಅಧಿಕ್ಯ : ಈ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಉತ್ಪಾದಕರಾದುದರಿಂದ ಸಹಜವಾಗಿ ಉತ್ಪಾದನೆ ಅಧಿಕವಾಗುತ್ತದೆ ಮತ್ತು ವಿನಿಮಯ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ತಮ್ಮ ಪೂರ್ವಿಕರ ವೃತ್ತಿಯನ್ನು (Occupation) ಅನುಸರಿಸುತ್ತಾರೆ. ಇದರಿಂದ ಅವರು ತಮ್ಮ ಕಸುಬಿನಲ್ಲಿ ನೈಪುಣ್ಯವನ್ನು ಗಳಿಸುತ್ತಾರೆ ಇದು ಉತ್ಪಾದನೆಯ ಇನ್ನಷ್ಟು ಅಧಿಕ್ಕಕ್ಕೆ ಕಾರಣವಾಗುತ್ತದೆ. ಉತ್ಪಾದನೆಯಲ್ಲವೂ ಅನುಭೋಗವಾಗುವುದರಿಂದ ಉತ್ಪಾದನೆಯ ಹೆಚ್ಚಳಕ್ಕೆ ಪ್ರೇರಣೆ ಕೂಡ ದೊರೆಯುತ್ತದೆ.
೪. ಶಾಂತಿಯುತ ಸಹಬಾಳ್ವೆ: ವಸ್ತು ವಿನಿಮಯ ವ್ಯವಸ್ಥೆ ವ್ಯಕ್ತಿಗಳ ಪರಸ್ಪರಾವಲಂಬನೆಯನ್ನು ಅನಿವಾರ್ಯವಾಗಿಸುತ್ತದೆ. ಒಬ್ಬ ವ್ಯಕ್ತಿ ತನಗೆ ಬೇಕಾದುದೆಲ್ಲವನ್ನೂ ತಾನೇ ಉತ್ಪಾದಿಸಿ ಕೊಳ್ಳಲಾರ ಇದುವೇ ಪರಸ್ಪರಾವಲಂಬನೆಗೆ ಕಾರಣ. ಪರಸ್ಪರಾವಲಂಬನೆ ಶಾಂತಿಯುತ ಸಹಬಾಳ್ವೆಗೆ ಕಾರಣ ಮತ್ತು ಪ್ರೇರಣೆಯಾಗುತ್ತದೆ.
೫. ಅರ್ಥವ್ಯವಸ್ಥೆಯ ಸ್ಥಿರತೆ: ವಸ್ತು ವಿನಿಮಯ ವ್ಯವಸ್ಥೆಯಲ್ಲಿ ಅನುಭೋಗಿಗಳೆಲ್ಲರೂ ಉತ್ಪಾದಕರಾಗಿರುತ್ತಾರೆ. ಆದುದರಿಂದ ಉತ್ಪಾದನೆ ತನ್ನ ಬೇಡಿಕೆಯನ್ನು ತಾನೇ ಕಂಡುಕೊಳ್ಳುತ್ತದೆ ಅಂದರೆ ಪೂರೈಕೆಯು ಬೇಡಿಕೆಗೆ ಸಮವಾಗಿರುತ್ತದೆ ಹಾಗಾಗಿ ಈ ವ್ಯವಸ್ಥೆಯಲ್ಲಿ ಪೂರ್ಣೋದ್ಯೋಗ ಮತ್ತು ಪೂರ್ಣೋತ್ಪಾದನೆ ಇರುತ್ತದೆ. ಸಾಂಪ್ರದಾಯಿಕ ಅರ್ಥಶಾಸ್ತ್ರಜ್ಞರು ಸರಕಾರದ ಆರ್ಥಿಕ ತಟಸ್ಥ ನೀತಿಯನ್ನು (Laissez faire policy) ಸಮರ್ಥಿಸಿರುವುದು ವಸ್ತು ವಿನಿಮಯ ವ್ಯವಸ್ಥೆಯು ಅನುಷ್ಠಾನದಲ್ಲಿರುತ್ತದೆಂಬ ಕಲ್ಪನೆಯ ಹಿನ್ನಲೆಯಲ್ಲಿ ಎನ್ನುವುದನ್ನಿಲ್ಲಿ ಜ್ಞಾಪಿಸಿಕೊಳ್ಳಬಹುದು. ಜಗತ್ಪ್ರಸಿದ್ಧವಾದ ಸೇಯ ಮಾರುಕಟ್ಟೆ ನಿಯಮ (Say’s Law of Market) ವಸ್ತು ವಿನಿಮಯ ವ್ಯವಸ್ಥೆಯಲ್ಲಿ ಅನುಷ್ಠಾನಗೊಳ್ಳುತ್ತದೆ. ಆದುದರಿಂದ ಆರ್ಥಿಕ ಸ್ಥಿರತೆ ಈ ವ್ಯವಸ್ಥೆಯಲ್ಲಿ ಮಾತ್ರ ಸಾಧ್ಯ.
ಸಮಸ್ಯೆಗಳು : ಹಣದ ಉಗಮಕ್ಕೆ ಕಾರಣಗಳು
ವಸ್ತು ವಿನಿಮಯ ವ್ಯವಸ್ಥೆ ಒಂದು ಕಾಲದಲ್ಲಿ ತುಂಬಾ ಜನಪ್ರಿಯವಾಗಿತ್ತು. ಆದರೆ ಜನರ ಆಸೆಗಳ ಅಧಿಕ್ಯ ಮತ್ತು ನಾಗರಿಕತೆಯ ವಿಕಸನದೊಡನೆ ವಸ್ತು ವಿನಿಮಯ ಪದ್ಧತಿ ಕಾಲದ ಅವಶ್ಯಕತೆಗೆ ತಕ್ಕಂತೆ ಸ್ಪಂದಿಸಲಿಲ್ಲ. ಬೃಹತ್ಪ್ರಮಾಣದ ಬೇಡಿಕೆ ಮತ್ತು ಪೂರೈಕೆ ವಸ್ತುವಿನಿಮಯ ವ್ಯವಸ್ಥೆಯನ್ನು ದೋಷಪೂರ್ಣವಾಗಿಸಿತು. ವಸ್ತು ವಿನಿಮಯ ವ್ಯವಸ್ಥೆಯ ಪ್ರಮುಖ ಕೊರತೆಗಳು ಹಣದ ಉಗಮಕ್ಕೆ ಕಾರಣಗಳಾದವು.
ಹಣದ ಉಗಮಕ್ಕೆ ಕಾರಣವಾದ ಅಂಶಗಳಿವು :
೧. ಆಸೆಗಳ ದ್ವಿಮುಖ ಹೊಂದಾಣಿಕೆಯ ಕೊರತೆ : ಈ ವ್ಯವಸ್ಥೆಯಲ್ಲಿ ವಿನಿಮಯ ನಡೆಯಬೇಕಾದರೆ ಜನರ ಬೇಡಿಕೆಗಳಲ್ಲಿ ಪರಸ್ಪರ ಹೊಂದಾಣಿಕೆ ಇರಬೇಕಾಗುತ್ತದೆ. ಅಂದರೆ ಓರ್ವ ವ್ಯಕ್ತಿಯು ಇನ್ನೋರ್ವ ವ್ಯಕ್ತಿಯಲ್ಲಿರುವ ವಸ್ತುವನ್ನು ಬಯಸಿದಾಗ, ಆ ಇನ್ನೋರ್ವ ವ್ಯಕ್ತಿಯೂ ಮೊದಲಿನ ವ್ಯಕ್ತಿಯ ವಸ್ತುವನ್ನು ಬಯಸಿದರೆ ಮಾತ್ರ ವಿನಿಮಯ ನಡೆಸಲು ಸಾಧ್ಯ. ಒಂದು ಉದಾಹರಣೆಯ ಮೂಲಕ ಇದನ್ನು ಸ್ಪಷ್ಟಪಡಿಸಬಹುದು. ಬಸಪ್ಪನು ಬದನೆ ಬೆಳೆಯುವವನಾದರೆ, ನಿಂಗವ್ವ ಸೌತೆಕಾಯಿ ಬೆಳೆಸುವವಳೆಂದು ಭಾವಿಸುವಾ, ಇವರಿಬ್ಬರ ನಡುವೆ ವಿನಿಮಯ ನಡೆಯ ಬೇಕಾದರೆ ಬಸಪ್ಪ ಸೌತೆಕಾಯಿಯನ್ನು ಬಯಸುವಂತಿರಬೇಕು ಮತ್ತು ನಿಂಗವ್ವನ ಸೌತೆಕಾಯಿಗೆ ಬದಲಾಗಿ ಬದನೆಕಾಯಿ ಕೊಳ್ಳುವಂತಿರಬೇಕು. ನಿಂಗವ್ವಳು ಬಸಪ್ಪನ ಬದನೆಕಾಯಿ ಕೊಳ್ಳಲು ಸಿದ್ಧವಿಲ್ಲದಿದ್ದರೆ ವಿನಿಮಯ ನಡೆಯದು. ಇದನ್ನೇ ಆಸೆಗಳ ದ್ವಿಮುಖ ಹೊಂದಾಣಿಕೆಯ ಅಭಾವ ಎಂದು ಕರೆಯುವುದು.
೨. ಸಾಮಾನ್ಯ ಮೌಲ್ಯಮಾಪನದ ಕೊರತೆ: ವಿನಿಮಯಗೊಳ್ಳುವ ಸರಕುಗಳ ಮೌಲ್ಯವನ್ನು ಸರಿಯಾಗಿ ನಿರ್ಧರಿಸಲು ಸಾಧ್ಯವಾಗದಿರುವುದು ಈ ವ್ಯವಸ್ಥೆಯ ಇನ್ನೊಂದು ದೋಷ. ಮೇಲಿನ ಉದಾಹರಣೆಯನ್ನೇ ಮುಂದುವರಿಸಿ ಈ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬಹುದು. ಮೇಲಿನ ಉದಾಹರಣೆಯಲ್ಲಿ ಬರುವ ನಿಂಗವ್ವಳಿಗೆ ಬಸಪ್ಪನ ಬದನೆಕಾಯಿ ಬೇಕು ಎಂದು ಭಾವಿಸುವಾ. ಈಗ ವಿನಿಮಯಮೌಲ್ಯ ನಿರ್ಧಾರದ ಸಮಸ್ಯೆ ಎದುರಾಗುತ್ತದೆ. ಉದಾಹರಣೆಗೆ ನಿಂಗವ್ವ ಎಷ್ಟು ಸೌತೆಕಾಯಿ ಕೂಟ್ಟು ಎಷ್ಟು ಬದನೆ ತೆಗೆದುಕೊಳ್ಳಬೇಕು? ಅಂದರೆ ಒಂದು ಬದನೆಯ ಮೌಲ್ಯ ಎಷ್ಟು ಸೌತ ಕಾಯಿಗಳು? ಇದೊಂದು ಖಚಿತವಾಗಿ ಉತ್ತರಿಸಲಾಗದ ಪ್ರಶ್ನೆ. ಹೀಗಾಗಿ ಸಾಮಾನ್ಯ ಮೌಲ್ಯ ಮಾಪನದ ಕೊರತೆಯಿಂದಾಗಿ ವಸ್ತು ವಿನಿಮಯ ವ್ಯವಸ್ಥೆಯಲ್ಲಿ ಜನರು ಸಂಕಷ್ಟಕ್ಕೊಳಗಾದರು.
೩. ವಿಭಜನೆಯ ಅಸಾಧ್ಯತ : ಬೃಹತ್ ಗಾತ್ರದ ವಸ್ತುಗಳನ್ನು ಮತ್ತು ಪ್ರಾಣಿಗಳನ್ನು ವಿಭಜಿಸಲು ಸಾಧ್ಯವಾಗುವುದಿಲ್ಲ. ಅವಿಭಾಜ್ಯತೆಯ ಗುಣದಿಂದಾಗಿ ಅಂತಹ ಸರಕುಗಳ ಮತ್ತು ಪ್ರಾಣಿಗಳ ವಿನಿಮಯ ಅಸಾಧ್ಯವಾಗಿತ್ತು. ಇದನ್ನೊಂದು ಉದಾಹರಣೆಯ ಮೂಲಕ ಅರ್ಥೈಸಿಕೊಳ್ಳಬಹುದು. ಹನುಮಂತುವಿನಲ್ಲಿ ಒಂದು ಎಮ್ಮೆ ಇದೆ ಎಂದು ಭಾವಿಸುವ, ಅವನಿಗೆ ಒಂದು ಕೋಳಿ ಬೇಕಾಗಿದೆ. ಜೋಗವ್ವಳಲ್ಲಿ ಒಂದು ಕೋಳಿ ಇದೆ. ಇಂತಹ ಸಂದರ್ಭದಲ್ಲಿ ವಿನಿಮಯ ಹೇಗೆ ನಡೆಯಬೇಕು? ಒಂದು ಕೋಳಿಗೆ ಬದಲಾಗಿ ತನ್ನ ಎಮ್ಮೆಯನ್ನು ಕೊಟ್ಟರೆ ಹನುಮಂತುವಿಗೆ ಅಪಾರ ನಷ್ಟ, ಎಮ್ಮೆಯನ್ನು ತುಂಡು ಮಾಡುವಂತೆಯೂ ಇಲ್ಲ. ಇಂತಹ ಸಮಸ್ಯೆಗಳಿಂದಾಗಿ ಜನರು ತುಂಬಾ ತೊಂದರೆಗೊಳಗಾದರು.
೪. ಮೌಲ್ಯ ಸಂಚಯನದ ಕೊರತೆ : ತಮ್ಮ ಸಂಕಷ್ಟ ಕಾಲಕ್ಕೆಂದು ಸಂಪತ್ತನ್ನು ಯಾವ ರೂಪದಲ್ಲಿ ಶೇಖರಿಸಿಡಬೇಕನ್ನುವುದು ಹಿಂದಿನ ಕಾಲದ ಜನರ ಅತಿದೊಡ್ಡ ಸಮಸ್ಯೆಯಾಗಿತ್ತು. ತರಕಾರಿ, ಹಣ್ಣು ಹಂಪಲುಗಳ ರೂಪದಲ್ಲಿ, ಸಂಪತ್ತನ್ನು ಭವಿಷ್ಯತ್ತಿಗಾಗಿ ಶೇಖರಿಸಿಡುವಂತಿರಲಿಲ್ಲ. ದವಸ ಧಾನ್ಯಗಳು, ಸಾಕು ಪ್ರಾಣಿಗಳು ಕೂಡಾ ಬಹುಕಾಲ ಬಾಳುತ್ತಿರಲಿಲ್ಲ. ಆದುದರಿಂದ ಸಾಮಾನ್ಯ ಸಂಚಯ ಸಾಧನವೊಂದರ ಕೊರತೆಯಿಂದಾಗಿ ಜನರಿಗೆ ತುಂಬಾ ತೊಂದರೆಯಾಗುತ್ತಿತ್ತು.
೫. ಉದರಿ ವ್ಯವಹಾರಕ್ಕೆ ತೊಂದರೆ : ವಸ್ತು ವಿನಿಮಯ ವ್ಯವಸ್ಥೆಯಲ್ಲಿ ಸಾಲ ಅಥವಾ ಉದರಿ ವ್ಯವಹಾರಕ್ಕೆ ಆಸ್ಪದವಿರಲಿಲ್ಲ. ಯಾರಿಗಾದರೂ ಏನಾದರೂ ಬೇಕಿದ್ದರೆ ಪ್ರತಿಯಾಗಿ ಕೊಡಲು ಅವರು ಏನಾದರೂ ಉತ್ಪಾದಿಸುವುದು ಅನಿವಾರ್ಯವಾಗಿತ್ತು. ಇದರಿಂದಾಗಿ ನಿಶಕ್ತರಿಗೆ, ದುಡಿಯಲಾಗದವರಿಗೆ, ಭೂರಹಿತರಿಗೆ ಅನೇಕ ಸಮಸ್ಯೆಗಳುಂಟಾಗುತ್ತಿದ್ದವು, ವಸ್ತುಗಳನ್ನು ಸಾಲಕ್ಕೆ ನೀಡುವಂತೆಯೂ ಇರಲಿಲ್ಲ. ಏಕೆಂದರೆ ಸಾಲದ ವಸ್ತು ವಾಪಾಸಾದಾಗ ಅದರ ಉಪಯುಕ್ತತೆ ನಷ್ಟವಾಗುವ ಸಾಧ್ಯತೆ ಅಧಿಕವಾಗಿತ್ತು. ಉದಾಹರಣೆಗೆ ಹಾಲಪ್ಪನು ಸುಭದ್ರಮ್ಮನಿಂದ ಎಮ್ಮೆ ಯೊಂದನ್ನು ಸಾಲವಾಗಿ ಪಡೆದುಕೊಂಡನು ಎಂದು ಭಾವಿಸುವಾ, ಎಮ್ಮೆಯನ್ನು ಆತ ಹತ್ತು ವರ್ಷಗಳ ಬಳಿಕ ಮರಳಿಸಿದ ಎಂದಿಟ್ಟುಕೊಳ್ಳೋಣ. ಆಗ ಎಮ್ಮೆ ಮುದಿಯಾಗಿ ತನ್ನ ಉಪಯುಕ್ತತೆಯನ್ನು ಕಳೆದುಕೊಂಡಿರುತ್ತದೆ. ಇಂತಹ ತೊಂದರೆಗಳು ವಸ್ತು ವಿನಿಮಯ ವ್ಯವಸ್ಥೆಯನ್ನು ಜನರು ದೂಷಿಸುವಂತೆ ಮಾಡಿದವು.
೬. ಸಾಗಾಟದ ಸಮಸ್ಯೆ : ವಸ್ತುಗಳ ಸಾಗಾಟ ಇನ್ನೊಂದು ದೊಡ್ಡ ಸಮಸ್ಯೆಯಾಗಿತ್ತು. ಹಿಂದಿನ ಕಾಲದಲ್ಲಿ ಯಾರಾದರೂ ಕಾಶೀಯಾತ್ರೆಗೆ ಹೊರಟರೆ ದಾರಿಯುದ್ದಕ್ಕೂ ಖರ್ಚಿಗೆ ಸಂಪತ್ತನ್ನು ಯಾವ ರೂಪದಲ್ಲಿ ಒಯ್ಯುವುದು ಎನ್ನುವ ಸಮಸ್ಯೆ ಕಾಡುತ್ತಿತ್ತು. ಉದಾಹರಣೆಗೆ ತನ್ನ ತೋಟದಲ್ಲಿ ಹಲಸಿನ ಕಾಯಿಯನ್ನು ಮಾತ್ರವೇ ಕೆಂಡಗಣ್ಣಪ್ಪನು ಬೆಳೆಸುತ್ತಾನೆ ಎಂದು ಭಾವಿಸುವಾ. ಆತನಿಗೆ ಕಾಶೀಯಾತ್ರಯ ಮನಸ್ಸಾದರೆ ಅವನು ಪ್ರಯಾಣದ ಖರ್ಚಿಗೆಂದು ಎಷ್ಟು ಹಲಸಿನಕಾಯಿಗಳನ್ನು ಹೊತ್ತುಕೊಂಡು ಹೋಗಲು ಸಾಧ್ಯ? ಅಲ್ಲದೆ ಅವನ ಹಲಸಿನ ಕಾಯಿಗೆ ಬದಲಾಗಿ ಅವನಿಗೆ ಬೇಕಾದ ವಸ್ತುಗಳು ಸುಲಭದಲ್ಲಿ ಸಿಗುವುದಾದರೂ ಹೇಗೆ ಸಾಧ್ಯ? ಸಂಚಾರ ಸಾಧನಗಳ ಕೊರತೆಯಿದ್ದುದರಿಂದ ಅತಿ ಭಾರದ ಮತ್ತು ಅತಿ ಗಾತ್ರದ ವಸ್ತುಗಳನ್ನು ದೂರದ ಊರಿನ ವಸ್ತುಗಳಿಗೆ ಬದಲಾಗಿ ವಿನಿಮಯ ಮಾಡುವುದು ಆಗ ಸಾಧ್ಯವೇ ಇಲ್ಲದ ಮಾತಾಗಿತ್ತು.
ಹೀಗೆ ವಸ್ತು ವಿನಿಮಯ ವ್ಯವಸ್ಥೆ ಜನರಿಗೆ ಪ್ರಯೋಜನಕ್ಕಿಂತಲೂ ಹೆಚ್ಚು ತೊಂದರೆಗಳನ್ನೇ ಉಂಟುಮಾಡಿತು. ಆಸೆಗಳ ಹೆಚ್ಚಳದಿಂದಾಗಿ ಸಾರ್ವತ್ರಿಕ ವಿನಿಮಯ ಮಾಧ್ಯಮವೊಂದರ ಆವಿಷ್ಕಾರ ಅತ್ಯಂತ ಅಗತ್ಯವಾಯಿತು. ಹಾಗಾಗಿ ವಸ್ತು ವಿನಿಮಯ ವ್ಯವಸ್ಥೆಗೆ ಬದಲಾಗಿ ಹಣದ ಶೋಧವಾಯಿತು.
ವಸ್ತು ವಿನಿಮಯ ವ್ಯವಸ್ಥೆ ಮತ್ತು ಆಧುನಿಕ ಆರ್ಥಿಕ ವ್ಯವಸ್ಥೆ
ಆಧುನಿಕ ಆರ್ಥಿಕ ವ್ಯವಸ್ಥೆ ಹಣ ಮೂಲವಾದುದು. ಹಣ ಇಲ್ಲದಿದ್ದರೆ ಆರ್ಥಿಕ ಚಟುವಟಿಕೆಗಳು ನಡೆಯಲು ಸಾಧ್ಯವೇ ಇಲ್ಲ ಎನ್ನುವ ಹಂತಕ್ಕೆ ವಿಶ್ವ ಮುಟ್ಟಿದೆ.
ಆದರೆ ಹಣದ ಬಳಕೆಗೆ ಹೆಚ್ಚು ಮಹತ್ವ ನೀಡದ ವಲಯ ಇಂದಿನ ಆಧುನಿಕ ವ್ಯವಸ್ಥೆ ಯಲ್ಲೂ ಇದೆ ಎಂದರೆ ಆಶ್ಚರ್ಯವಾಗುತ್ತದಲ್ಲವೆ? ಆಶ್ಚರ್ಯವಾದರೂ ಹಣಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡದ ವಲಯವನ್ನು ಹಿಂದುಳಿದ ಅರ್ಥವ್ಯವಸ್ಥೆಗಳಲ್ಲಿ ನಾವು ಕಾಣಬಹುದು. ಭಾರತದ ಕೃಷಿ ವಲಯವನ್ನು ಇಲ್ಲಿ ಉದಾಹರಣೆಯಾಗಿ ನೀಡಬಹುದು. ಹಣ ರಹಿತ ಕ್ಷೇತ್ರ (non-monetised sector) ಎಂದು ಹಿಂದುಳಿದ ದೇಶಗಳ ಕೃಷಿ ವಲಯವನ್ನು ಕರೆಯಲಾಗುತ್ತದೆ. ಗ್ರಾಮೀಣ ಭಾರತದಲ್ಲಿ ಹಣ ಇಲ್ಲದೆ ಅನೇಕ ವ್ಯವಹಾರಗಳು ನಡೆಯುತ್ತವೆ ಅನ್ನುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.
ಕೃಷಿ ವಲಯದಲ್ಲಿ ಕೂಲಿಯನ್ನು ಧಾನ್ಯದ ರೂಪದಲ್ಲಿ ನೀಡುವ ಪರಿಪಾಠ ಅನೇಕ ಹಳ್ಳಿಗಳಲ್ಲಿ ಇಂದಿಗೂ ಇದೆ. ಹಳೆ ಬಟ್ಟೆ ತೆಗೆದುಕೊಂಡು ಬದಲಿಗೆ ಪಾತ್ರ ಕೊಡುವ ವ್ಯಾಪಾರಿಗಳು ನಿಮ್ಮ ಮನೆಗೂ ಬಂದಿರಬಹುದು. ಭಾರತ ಸರಕಾರ ೧೯೭೭ ರಲ್ಲಿ ಕೂಲಿಗಾಗಿ ಕಾಳು ಕಾರ್ಯಕ್ರಮ ವನ್ನು (Food for Work) ಹಾಕಿಕೊಂಡಿತ್ತು. ಇವೆಲ್ಲಾ ವಸ್ತು ವಿನಿಮಯದ ವಿವಿಧ ರೂಪಗಳು.
ಇಂದಿನ ಅರ್ಥವ್ಯವಸ್ಥೆಗಳಲ್ಲಿ ಹಣದ ಮಹತ್ವ ಮತ್ತು ಹಣ ಉಂಟು ಮಾಡಿರುವ ಅನಾಹುತಗಳು ವಸ್ತುವಿನಿಮಯ ವ್ಯವಸ್ಥೆಯೇ ಉತ್ತಮವೆಂಬ ತೀರ್ಮಾನಕ್ಕೆ ಹಲವು ಅರ್ಥಶಾಸ್ತ್ರಜ್ಞರನ್ನು ತಂದು ನಿಲ್ಲಿಸಿವೆ. ಸಂಪ್ರದಾಯ ಪಂಥೀಯರು ಹಣಕ್ಕೆ ಪ್ರಾಧಾನ್ಯ ಕೊಡಬಾರದು. ಕೃಷಿ ಪ್ರಧಾನ ಅರ್ಥವ್ಯವಸ್ಥೆಯೇ ಅತ್ಯುತ್ತಮವಾದುದು ಎಂಬ ತೀರ್ಮಾನಕ್ಕೆ ಬಂದಿರುವುದು ವಸ್ತುಶಃ ವಸ್ತು ವಿನಿಮಯ ವ್ಯವಸ್ಥೆ ಈಗಿನ ಹಣ ಪ್ರಾಧಾನ್ಯ ವ್ಯವಸ್ಥೆಗಿಂತ ಉತ್ತಮ ಎಂಬ ತೀರ್ಮಾನಕ್ಕೆ ಬಂದಿರುವುದರ ದ್ಯೋತಕವಾಗಿದೆ.
ಹಾಗಾದರೆ ಈಗ ನಾವು ಮತ್ತೆ ವಸ್ತು ವಿನಿಮಯ ವ್ಯವಸ್ಥೆಗೆ ಮರಳಲು ಸಾಧ್ಯವೆ? ಈಗಿನ ಬೆಳವಣಿಗೆ ನೋಡಿದರೆ ಸಾಧ್ಯವಿಲ್ಲವೆನಿಸುತ್ತದೆ. ಆದರೆ ಜನಸಂಖ್ಯೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಿ ಭೂಮಿಯನ್ನು ಎಲ್ಲರಿಗೂ ಸಮವಾಗಿ ಹಂಚಲು ಸಾಧ್ಯವಾದರೆ ವಸ್ತು ವಿನಿಮಯ ವ್ಯವಸ್ಥೆಗೆ ನಾವು ಮರಳಬಹುದು. ಆದುದರಿಂದ ವಸ್ತು ವಿನಿಮಯ ವ್ಯವಸ್ಥೆಯ ಪುನರುತ್ಥಾನವೆಂದರೆ ಅದು ವಿತರಣಾ ನ್ಯಾಯದ (distributive justice) ಪ್ರಶ್ನೆಯಾಗಿ ಬಿಡುತ್ತದೆ.
Thumba help.aythu thank you so much