ಹಾರುತಿದೆ ನೋಡಿಲ್ಲಿ ” ಸೌಂದರ್ಯಸ್ವರ್ಗ ! ”
ಹುಲ್ಲ ಮರೆಯಲ್ಲಿ, ಬೇಲಿ ಬದಿಯಲ್ಲಿ; ಮಿಣುಕುತಿದೆ
ಆಕಾರ ಬಲು ಕಿರಿದು, ಜೀವ ಸ್ವರ್ಗ !
ನಲಿಯುತಾ ನೆಗೆಯುತಾ ಚಲುವು ಹಾರುತಿದೆ
ಕಣವಿಲ್ಲಿ ಕ್ಷಣವಲ್ಲಿ; ಮಿಂಚುವೇಗ !
ಮುಳ್ಳು ರಾಶಿಯಲಿ, ಕಳ್ಳಿ ಕಂಟೆಯಲಿ ಕಿಲು- ಕುಲು
ಪುಟು ಪುಟನೆ ನೆಗೆಯುತಿದೆ ಬೇಗ
ಕಿರಿಯ ಪಕ್ಕಕೆ ಹೊಚ್ಚಿಹುದು ಚಲ್ಪ ವರ್ಣ ಶಾಲು
ಎಳೆ ಕರುಳಿನೀಂ ಮನ ಸೆಳೆಯುತಿದೆ
ಕಿರಿ ಚಂಚು ಮುಂಬದಿಗೆ; ಗರಿಬಾಲ ಹಿಂಬದಿಗೆ
ಪಂಚಬಾಣನ ಬಿಲ್ ಮಣಿಯುತಿದೆ
ಕಂಠದಿಂಚರವ ತುಂಬುತಿದೆ ಪೊದೆಯ ಬದಿಗೆ
ಉಲಿಯುತಿದೆ ಆ ರಸ ಜೀವನವು
ಲತೆಯ ಮಂಟಪವೇರಿ ಉಯ್ಯಾಲೆಯಾಡುತಿದೆ
ನಿಲ್ಲದೆಯೆ ಆಡುತಿದೆ ಸರಸ ಚಲವು
ಕಮಲದೇಟಿಗೆ ಹಾರಿ ಹೂವ ಪುಳುಕಿಸುತಿದೆ
ಹಿಡಿಯಲಸದಳವು ಕಿರಿಯ ಹೃದಯ
ನಯನ ಓಟಕೂ ಮಿಗಿಲಾದ ಓಟವಿದಕೇನು ?
ಸರ್ಗವನು ಕಂಟೆಗೆಳೆದ ಲಲಿತ ಮಾಯ
ಓಲಾಡುತಿದೆ, ಚಲ್ಲಾಡುತಿದೆ ಜೀವ “ಸೌಂದರ್ಯ ಸ್ವರ್ಗ”ವೇನು?
*****