ಬಾಯಾರಿ ನಾ ಬಂದೆ ಬತ್ತಿದೆ ಈ ಕೊಳವು
ಕೊಟ್ಟು ಬತ್ತಿದೆ ಈ ಕೊಳವು
ಊರವ್ವ! ಫಕ್ಕನೆ ಮುಳುಗಿಸು ಕೊಡವನು
ಬಾರವ್ವ ಗಂಗೆ!
ಎಲ್ಲೆಲ್ಲು ತುಂಬಿರುವೆ ಇಲ್ಲೇಕೆ ಅಡಗಿರುವೆ
ಅಕ್ಕ ಇಲ್ಲೇಕೆ ಅಡಗಿರುವೆ
ಸಲ್ಲದು ನಿನಗದು ಭುಗ್ಗನೆ ಚಿಮ್ಮುತ
ಏಳವ್ವ ಗಂಗೆ!
ಕರಗಳ ಮುಗಿಯುವೆನೆ ಶಿರಬಾಗಿ ನಮಿಸುವೆನೆ
ಅಮ್ಮ ಶಿರಬಾಗಿ ನಮಿಸುವೆನೆ
ಬಿರಬಿರ ಅಲೆಗಳನೆಬ್ಬಿಸು ತುಂಬೇನು
ಬಾರವ್ವ ಗಂಗೆ!
ಕೊಟ್ಟೇನು ಹಣ್ಣುಕಾಯಿ ಬಿಟ್ಟೇನು ತುಪ್ಪಹಾಲು
ದೇವಿ, ಬಿಟ್ಟೇನು ತುಪ್ಪ ಹಾಲು
ಹಿಟ್ಟಿನಾರತಿ ಎತ್ತಿ ಧೂಪವ ಹಾಕೇನು
ಬಾರವ್ವ ಗಂಗೆ!
ಉರಗನು ನಿನ ಬಿಡನೆ, ಶಂಕರ ತಡೆದಿಹನೆ
ಶಂಭು ಶಂಕರ ತಡೆದಿಹನೆ?
ಗರತಿ ಗೌರಮ್ಮನು ಹೋಗಬೇಡೆಂದಳೆ
ಪೇಳವ್ವ ಗಂಗೆ!
ಜೀವನಿಗಾಧಾರಳೆ, ಪಾವನೆ ಸಂತೃಪ್ತಳೆ
ಪರಮ ಪಾವನೆ ಸಂತೃಪ್ತಳೆ
ಭಾವಕತೀತಳೆ ಓ ಘನ ಮಹಿಮಳೆ
ಬಾರವ್ವ ಗಂಗೆ!
ಗಿರಿಗಳ ಧುಮುಕುವಳೆ, ಧರೆಯನು ಸಲಹುವಳೆ
ನಮ್ಮೀ ಧರೆಯನು ಸಲಹುವಳೆ
ಶರಣೆಂಬೆ ಜನಕಜೆ ಕರುಣಿಸು ಮಂಗಳೆ
ಬಾರವ್ವ ಗಂಗೆ!
*****