ವೇದಾಂತ ಹೇಳಬಹುದು
ಎಲ್ಲರೂ ಕೇಳಬಹುದು
ಶಾಲನ್ನು ಸುತ್ತಿಕೊಂಡು
ಬಿರುದನ್ನು ಧರಿಸಿಕೊಂಡು
ವ್ಯಾಖ್ಯಾನ ಮಾಡಬಹುದು
ಪುಸ್ತಕವ ಬರೆಯಬಹುದು
ವೇದಾಂತ ಸಮಯಕ್ಕೆ ಬರುವುದೇನು ?
ಕರುಳನ್ನು ಸಂತವಿಡಲಪ್ಪುದೇನು ?
ಕಷ್ಟಗಳು ಬಂದು ಮುತ್ತಿ
ದುಃಖಗಳು ಬಂದು ಒತ್ತಿ
ರೋಗಗಳು ಬಂದು ಹತ್ತಿ
ಸಾಲಗಳು ಬಂದು ಸುತ್ತಿ
ಕಣ್ಕಣು ಬಿಡುತಲಾಗ
ಮತಿಗೆಟ್ಟು ಹೋಗುವಾಗ
ವೇದಾಂತ ಬರುವುದನ್ನು ನೋಡಬೇಕು
ವೇದಾಂತ ನುಡಿವುದನು ಕೇಳಬೇಕು.
ತಾನಿದ್ದು ಮುದುಕನಾಗಿ
ಬೆಳೆದ ಮಗ ತೀರಿಹೋಗಿ
ಮೊಮ್ಮಗನು ಬಳಿಗೆ ಬಂದು
ಬೆಪ್ಪಾಗಿಯಳುತ ನಿಂದು
ಬಸಿರೆಲ್ಲ ಕುದಿಯುವಾಗ
ಕೊರಳ ಸೆರೆ ಬಿಗಿಯುವಾಗ
ಹೆಣವನ್ನು ಸುಡುಗಾಡಿಗೊಯ್ಯುವಾಗ
ಚಿಕ್ಕ ಸೊಸೆ ಮುಸುಕಿಟ್ಟು ಕೊರಗುವಾಗ;
ಮುಡುಪನ್ನು ಕಟ್ಟಿ ತಂದು
ಮುದ್ದು ಮಗಳಳುತ ನಿಂದು
ಪತಿಭಿಕ್ಷೆ ಬೇಡಲಾಗಿ
ಕಡೆಗೆಲ್ಲ ತೀರಲಾಗಿ
ತನ್ನ ಪತಿ ಹೋದನೆಂದು
ತನ್ನ ಬಾಳ್ ಮುಗಿಯಿತೆಂದು
ನೆಲದಲ್ಲಿ ಮೈಮರೆದು ಬೀಳುವಾಗ
ಕಣ್ಣೊಡೆದು ಎದೆಬಿಚ್ಚಿ ನೋಡುವಾಗ;
ಮುದ್ದಾಡಿ ಬೆಳಸಿದಂಥ
ಮನೆಯೆಲ್ಲ ಬೆಳಗಿದಂಥ
ಮಗುವನ್ನು ಮೃತ್ಯು ಹಿಡಿದು
ಹೆತ್ತವಳು ಬಸಿರು ಹಿಡಿದು
“ಎನ್ನ ಕಂದನ್ನ ಕೊಡಿರಿ
ಎನ್ನ ರತ್ನನ್ನ ಕೊಡಿರಿ”
ಎಂದಂದು ಬಿಕ್ಕುತ್ತ ಕೇಳುವಾಗ
ತೊಡೆ ಮೇಲೆ ಜೀವವದು ನಂದುವಾಗ;
ಊರಾಚೆ ಗುಣಿಯ ತೊಡಿ
ಇಡಲಲ್ಲಿ ಅಣಿಯ ಮಾಡಿ
‘ಬದುಕಿದೆಯೊ ಏನೋ!’ ಎಂದು
ಭ್ರಮೆಯಿಂದ ಆಸೆ ಬಂದು
ಮತ್ತೊಮ್ಮೆ ಮುಟ್ಟಿ ನೋಡಿ
ಕಡೆಗೊಮ್ಮೆ ಮುಖವ ನೋಡಿ
ಮಣ್ಣಿಂದ ಕಂದನ್ನ ಮುಚ್ಚುವಾಗ
ಜಗವೆಲ್ಲ ಕಣ್ಗಂದು ಸುತ್ತುವಾಗ;
ಇವರಾರ ಮಕ್ಕಳೆಂದು
ಅವರಾರ ನೆಂಟರೆಂದು
ಋಣ ಶೇಷ ತೀರಿತೆಂದು
ಸಾಲಿಗರು ಹೋದರೆಂದು
ಕಣ್ಣೀರು ಬತ್ತಿಸುತ್ತ
ಎದೆ ಕಲ್ಲು ಮಾಡಿಸುತ್ತ
ವೇದಾಂತ ! ವೇದಾಂತ ! ಇರುವುದೇನು
ಇದ್ದರೂ ಅದರಿಂದ ಬಂದುದೇನು ?
ಕಲ್ಲೆದೆಯ ನೀರುಮಾಡಿ
ಕಣ್ಣೀರು ಹರಿದು ಕೋಡಿ
ಮಾಲಿನ್ಯ ಹೋಗುತಿರಲು
ಕರುಣ ರಸ ತುಂಬುತಿರಲು
ಆರ್ತರಿಗೆ ಮರುಗುವಂತೆ
ಕೈನೀಡಿ ಸಲಹುವಂತೆ
ವೇದಾಂತ ನಮಗೆಲ್ಲ ತಿಳಿವ ತರಲಿ
ಶುದ್ಧಾತ್ಮ ಮಾನವರ ಮಾಡುತಿರಲಿ.
*****