ನೆತ್ತಿಯಲ್ಲಿ ಗಿರಿಛತ್ರಿಯ ಎತ್ತಿದ
ಶಕ್ತಿಗಿದೋ ನಮನ,
ಸುತ್ತಲು ಸಾಗರವಸ್ತ್ರವ ಧರಿಸಿದ
ಭರ್ತೆಗಿದೋ ನಮನ;
ಕೋಟಿ ಕೋಟಿ ಕಣ್, ಕೋಟಿ ಕೋಟಿ ಕೈ
ತಾಳಿ ನಿಂತರೂನು
ಸಾಟಿಯಿಲ್ಲದಾ ಏಕರೂಪಾದ
ತಾಯಿಗಿದೋ ನಮನ.
ಮರಗಿಡ ಆಡಿ ತೀಡುವ ಗಾಳಿಯ
ಪರಿಮಳ ನಿನ್ನುಸಿರು,
ನೀ ಧರಿಸಿರುವ ಪೀತಾಂಬರಗಳು
ಶಾಲಿವನದ ಹಸಿರು;
ಹಗಲಲಿ ಸೂರ್ಯ ಇರುಳಲಿ ಚಂದ್ರ
ನಿನ್ನ ಹಣೆಯ ತಿಲಕ,
ಎಂಥ ಶ್ರೀಮಂತ ರೂಪ ನಿನ್ನದೇ
ನೋಡಿ ನನಗೆ ಪುಲಕ!
ಸಾವಿರ ಧಾರೆಗಳಾದರು ಒಂದೇ
ಸಾಗರ ನಮ್ಮ ಗುರಿ,
ಸಾವಿರ ರೇಶಿಮೆ ಎಳೆಗಳು ಸೇರಿದ
ಪತ್ತಲ ನಮ್ಮ ಸಿರಿ;
ನೂರು ಶಕ್ತಿಗಳ ಸುಂದರ ಸಂಗಮ-
ಸಂಸ್ಕೃತಿ ಈ ನಾಡು,
ಒಟ್ಟುಗೂಡಲು ನಾಡಿನ ದುಡಿಮೆಗೆ
ನಮಗೆ ಯಾರು ಈಡು?
ಕೈ ಕೈ ಸೇರಿಸಿ ನಗುತ ನಿಲ್ಲೋಣ
ತಾಯ ಸುತ್ತ ನಾವು,
ಅವಳ ಪಾಲನೆ ರಕ್ಷಣೆಗಾಗಿ
ಎದುರಿಸೋಣ ಸಾವು;
ಎಲ್ಲ ದೇವರಿಗು ಹಿರಿಯದೇವಿ ಈ
ತಾಯಿಯ ವೈಭವಕೆ
ಎಲ್ಲ ಭೇದಗಳ ಚೆಲ್ಲಿ ಬಾಳೋಣ
ಬೇರ ಪೂಜೆ ಯಾಕೆ?
*****