ಹೆಮ್ಮೆ ನನಗೆ ಅಮ್ಮ ನಿನ್ನ
ತಾಯಿಯೆಂದು ಕರೆಯಲು
ಕಂದನೆಂಬ ನಿನ್ನ ಪ್ರೀತಿ
ಸವಿಯು ಜೇನಿಗಿಂತಲು
ಏನು ತಾನೆ ಇದ್ದರೂ
ನಿನಗೂ ಸಿರಿವಂತರು?
ಬಲ್ಲೆ ನಾನೆ ಇರುವರೆಷ್ಟೋ
ನಿನಗೂ ಧೀಮಂತರು;
ಬಾಳಿಬಂದ ಗರಿಮೆಯಲ್ಲಿ
ಯಾರು ಸಮಕೆ ಬರುವರು?
ತಾಳಿ ನಿಂತ ಸಹನೆಯಲ್ಲಿ
ನಿನ್ನ ಯಾರು ಗೆಲುವರು?
ಪ್ರಾಚೀನ ಎನಿಸಿದರೂ
ಚಿರನೂತನೆ ನೀನು
ವೇದಮೂಲವಾದ ಜ್ಞಾನ-
ಸುಧೆಗೆ ನೀನು ಧೇನು;
ಕೋಟಿ ಕೋಟಿ ಬೆಳಗು ಅರಳಿ
ನಿನ್ನ ಪಾದ ತೊಳೆದಿವೆ
ನಿನ್ನ ಕಾಣಲೆಂದೆ ಚಂದ್ರ
ತಾರೆ ನಭದಿ ನೆರೆದಿವೆ.
ತಂಪು ಆಲದಡಿಗೆ ಬಂದು
ನಿಂತ ಭಕ್ತ ನಾನು
ಮೇಲಿನಿಂದ ಕೆಳಗುರುಳಿದ
ಬಿತ್ತವಾದರೇನು?
ನನ್ನ ಮನದಿ ಅರಳುತ್ತಿದೆ
ತಾಯೆ ನಿನ್ನ ರೂಪ
ಕಂಪು ಬೀರಿ ಸುತ್ತಲೆಲ್ಲ
ಹರಡಿ ನಿಲುವ ಧೂಪ.
*****