ಶರಣಾದೆ ತಾಯೆ ಶರಣಾದೆ ಕಾಯೆ,
ನೆಲ ಕಾಡು ತೊರೆಯೆ, ಹಿರಿಸಾಲು ಗಿರಿಯೆ
ಒಡಲಾದ ಸಿರಿಯೆ.
ನೀ ತೆರೆದ ಕಣ್ಣುಗಳ ಕಾಂತಿಯೇ ಹಗಲು,
ಬೆಳಗೀತು ಭುವನವೇ ನೀನೊಮ್ಮೆ ನಗಲು;
ಕೋಪಿಸಲು ಆಕಾಶ ಕಾರುವುದು ಸಿಡಿಲು,
ಇರುಳೊಂದು ಎಲ್ಲಿದೆಯೆ ನಿನ್ನದೇ ನೆರಳು!
ಹೊಲದಲ್ಲಿ ತೂಗುವ ತೆನೆಗಳೇ ಸೆರಗು,
ಮರಬಳ್ಳಿ ಓಲಾಡಿ ಮೈತುಂಬ ಬೆರಗು,
ದೇಗುಲದ ಗಂಟೆಯಲಿ ದನಿತೆರೆದು ಕೊರಳು
ಶತ್ರುಗಳ ಎದೆಯಲ್ಲಿ ಬಿಚ್ಚುತಿದೆ ದಿಗಿಲು.
ಅಮ್ಮ ನಮ್ಮನು ನಿನ್ನ ಪ್ರೀತಿಯಲಿ ಮೆರೆಸೆ
ಪ್ರೀತಿ ಶಾಂತಿಯ ಅಮೃತ ಎದೆತುಂಬ ಸುರಿಸೆ;
ತಂದೆನಿದೂ ನಿನಗಾಗಿ ಕವಿತೆಗಳ ಮಾಲೆ
ಶೋಭಿಸಲಿ ನಿತ್ಯವೂ ನಿನ್ನದೆಯ ಮೇಲೆ.
*****