ಪ್ರೀತಿ ಬಳ್ಳಿಯು ಹಬ್ಬಿದೆ
ಧರಣಿಯೆದೆಯ ಹಾಸಿನಲ್ಲಿ,
ನೀಲ ಮುಗಿಲ ಲೋಕದಲ್ಲಿ
ಗಾನ ಸುಧೆಯು ಸಾಗಿದೆ…
ನಾನೇ – ನೀನು, ನೀನೆ – ನಾನು,
ಬುವಿಯೆ – ಬಾನು, ಬಾನೇ ಬುವಿಯು,
ಸೇತುವಾಗಿ ಬೆಸೆದಿದೆ…
ಮೊದಲು ಕೊನೆಗಳಿಲ್ಲವಿಲ್ಲಿ
ಪ್ರೀತಿ – ಚೈತ್ರ ಸರಣಿಯಲ್ಲಿ,
ಕಾಲ ಯಾತ್ರೆಯು ನಡೆದಿದೆ…
ಮೋಡಗಟ್ಟಿ ಮಳೆಯ ಸುರಿಸಿ,
ಹರವದಾರಿಲಿ ಹಸಿರಗಟ್ಟಿಸಿ,
ಕಡಲಾಗಿ ಪ್ರೀತಿಯು ನುಡಿದಿದೆ…
ಉದಯೋದಯಕು ಶುಭದ ಹಕ್ಕಿ,
ಶಕುನ ಸ್ವರದಲಿ ಉಲಿದಿದೆ,
ಮಧುರ ಭಾವಗೀತೆಯ ಹಾಡಿದೆ…
ನನ್ನ – ನಿನ್ನಯ, ನಿನ್ನ – ನನ್ನಯ,
ಬಳಸಿನಿಂತ ಚೆಲ್ವ ಬಾಳ್ವೆಯ,
ಸಾಲು ತೋಪಲಿ ಹಸಿರ್‍ಹುಸಿರಾಗಿದೆ…
ಬಳ್ಳಿಗಾಸರೆಯಾದ ಮರದಲಿ
ಪ್ರೀತಿ ಚಂದನ ಹರಡಿದೆ
ಜಗದ ಬದುಕನು ಹಿಡಿದಿದೆ…
*****