Home / ಕಥೆ / ಕಿರು ಕಥೆ / ನಾನು ನಿನ್ನನ್ನು ಪ್ರೀತಿಸುತ್ತೇನೆ

ನಾನು ನಿನ್ನನ್ನು ಪ್ರೀತಿಸುತ್ತೇನೆ

ಮೊದಲ ಬಾರಿಗೆ ಕಲೇಜಿನಲ್ಲಿ ಕಾಣಿಸಿಕೊಂಡ ಅವಳ ಕಣ್ಣುಗಳ ಬೆಡಗಿಗೆ ಎಲ್ಲ ಹುಡುಗರು ಮಾರುಹೋದರು. ಸದಾ ಹಸನ್ಮುಖಿ, ಹಿತಮಿತ ಮಾತಿನ ಆ ಹುಡುಗಿ ಸ್ವಲ್ಪ ದಿನಗಳಲ್ಲೆ ಚಿರಪರಿಚಿತಳಾದಳು. ರೂಪ, ಬುದ್ಧವಂತಿಕೆ, ಅಂತಸ್ತಿನ ದೃಷ್ಟಿಯಲ್ಲಿ ಮೇಲುಸ್ತರದಲ್ಲಿದ್ದ ಆಕೆಗೆ ಅಹಂ ಎಳ್ಳಷ್ಟು ಇರದಿರುವುದು ಅಚ್ಚರಿಯ ಸಂಗತಿಯಾಗಿತ್ತು. ಹುಡುಗಿಯರಿಗಂತೂ ಸರಿ, ಹುಡುಗರೆದುರಾದರೂ ಅವಳು ಯಾವ ಸಂಕೋಚವಿಲ್ಲದೆ ಮಾತನಾಡಿಸುವಳು. ಯಾವಾಗಲೂ ತರಗತಿಯ ಕಡೆಗೆ ಆಲಕ್ಷಿಸಿ ಲೇಡೀಸ್ ರೂಮಿನೆದುರು ಅಣಕು, ತಮಾಷೆ, ಪೊಗರಿನ ಮಾತುಗಳಿಂದ ಸಿನಿಮಾ ಹಿರೋಗಳ ಸ್ಟೈಲ್‌ನಲ್ಲಿ ಕಣ್ಣುಗಳಿಂದಲೇ ಹುಡುಗಿಯರ ಬೇಟೆಯಾಡುತ್ತಿದ್ದ ಹುಡುಗರು ಅವಳ ದೆಸೆಯಿಂದಾಗಿ ತರಗತಿಗಳಿಗೆ ಚಕ್ಕರೆ ಹೊಡೆಯುವುದನ್ನು ನಿಲ್ಲಿಸಿದ್ದರು. ಒಂದೊಂದು ಸಲ ಅವಳ ಸಲಿಗೆಯ ಮಾತುಗಳಿಂದ ಹುಡುಗರೆ ಮುಜುಗರಕ್ಕೊಳಪಡುವ ಪರಿಸ್ಥಿತಿ ನಿರ್ಮಾಣವಾಯಿತು.

ಚೆಲ್ಲು ಚೆಲ್ಲಾಗಿದ್ದ ಹುಡುಗಿ ಸಹಜವಾಗಿಯೇ ಆ ಶ್ರೀಮಂತ ಹುಡುಗನೊಂದಿಗೆ ಮಾತಾಡಿದ್ದಳು. ಸ್ಫುರದ್ರೂಪಿಯಾಗಿದ್ದ ಅವನು ಹಿಂಡುಗಟ್ಟಲೆ ಗೆಳೆಯರನ್ನು ಬೆನ್ನಿಗೆ ಕಟ್ಟಿಕೊಂಡು ಉಡಾಫೆಯಿಂದಲೇ ವತಿðಸುತ್ತಿದ್ದ. ಕ್ಲಾಸಿನಲ್ಲೂ ಅದೇ ಚಾಳಿ, ಅವನಿಂದ ಪ್ರಧ್ಯಾಪಕರಿಗೂ ತಲೆನೋವು. ಅವನ ಕೀಟಲೆ, ಪೊಗರಿನ ವರ್ತನೆ, ಲೇವಡಿ ಮಾತುಗಳಿಂದ ಹುಡುಗಿಯರು ಕಪ್ಪೆಚಿಪ್ಪಿನೊಳಗೆ ಮುದುಡಿಕೊಂಡಂತಿರುತ್ತಿದ್ದರು.

ಇಡೀ ಕ್ಯಾಂಪಸ್ಸು ಅವನನ್ನು ಸಹಿಸಿಕೊಂಡಿತ್ತು.

ಆ ಹುಡುಗಿಯ ಬಗ್ಗೆ ಅವನಿಗೆ ಮೊದಲ ನೋಟದಲ್ಲೆ ಪ್ರೀತಿ ಹುಟ್ಟಿಕೊಂಡಿತ್ತು. ಆದರೆ ಅದನ್ನು ಅವಳೆದುರು ಪ್ರಸ್ತಾಪಿಸುವ ಧಾರ್ಷ್ಟ್ಯವನ್ನು ತೋರಿಸಲಿಲ್ಲ. ಗೆಳೆಯರೊಂದಿಗೆ ಹೇಳಿಕೊಂಡಿದ್ದ. ಅವರು ಅವಳ ಮೇಲಿನ ಅವನ ಹುಚ್ಚಿನ ಕಿಚ್ಚಿಗೆ ಗಾಳಿಯೂದಿದ್ದರು. ಅವನು ಚಿತ್ತಾರದ ಕನಸುಗಳಲ್ಲಿ ಮೀಯುತ್ತ ಪೂರ್ತಿ ಅವಳ ಹಂಬಲದಲ್ಲಿ ಚಡಪಡಿಸುತ್ತಿದ್ದ. ಆಸೆ ಉಕ್ಕೇರುತ್ತಿದ್ದಂತೆ “ನಾನು ನಿನ್ನನ್ನು ಪ್ರೀತಿಸುತ್ತೇನೆ” ಎಂದು ಒಂದು ಸಾಲಿನ ಒಕ್ಕಣಿಕೆಯ ಕಾಗದವನ್ನು ಅವಳಿಗೆ ತಲುಪಿಸಿದ.

ಆ ಹುಡುಗಿ ಮಾತ್ರ ಸಹಜವಾಗಿದ್ದಳು.

ಅವನು ಆಕಾಶಕ್ಕೆ ನೆಗೆದಿದ್ದ. ಅಂತ ಚೆಂದದ ಚೆಲುವೆಯನ್ನು ದಕ್ಕಿಸಿಕೊಂಡ ಸಂಭ್ರಮದಲ್ಲಿ ಗೆಳೆಯರು ಅವನಿಂದ ಜಬರದಸ್ತಾದ ಪಾರ್ಟಿ ಮಾಡಿಸಿದ್ದರು. ಅವರಿಬ್ಬರ ಪ್ರಣಯದ ವಿಷಯವನ್ನು ಅವರೇ ಹರಡಿ ವರ್ಣರಂಜಿತಗೊಳಿಸಿದ್ದರು. ಹುಡುಗನಿಗೆ ದಿನದ ಇಪ್ಪತ್ನಾಲ್ಕು ಗಂಟೆ ಅವಳದೇ ಧ್ಯಾನವಾಯಿತು.

ಪ್ರೀತಿಯೆಂದರೆ ಏನು? ಹೆಣ್ಣು-ಗಂಡು ತೀರ ಹತ್ತಿರ ಹತ್ತಿರ ಬರಬೇಕು. ಮನಸ್ಸು ಮನಸ್ಸು ಕೂಡಬೇಕು. ಭಾವನೆಗಳು ಎರಕಗೊಳ್ಳಬೇಕು. ಹೃದಯಗಳು ಮಾತಾಡಬೇಕು. ಜೊತೆ ಜೊತೆಯಾಗಿ ಹೋಟ್ಲು ಸಿನಿಮಾ, ಪಿಕ್‌ನಿಕ್ಕು ಪಾರ್ಕು ಒತ್ತಾಯಿಸಿದರೂ ಅವಳು ಹೊಟೇಲಿಗೆ ಬರಲಿಲ್ಲ. ಏಕಾಂತದಲ್ಲಿ ಮಾತಾಡಬೇಕೆಂದರೆ ಪಾರ್ಕಿಗೂ ಬರಲಿಲ್ಲ. ಎದುರಾದರೆ ಮಾತಾಡುವಳು. ನಗುವಳು, ಬರೆದುಕೊಳ್ಳಲು ನೋಟ್ಸ್ ಕೊಡುವಳು. ಪ್ರೀತಿಯ ವಿಷಯ ಮಾತಾಡಬೇಕೆನ್ನುವಷ್ಟರಲ್ಲಿ ಮಾಯೆಯಾಗಿ ಬಿಡುವಳು. ಅಂತರಂಗದ ವಿಚಾರವಾದರೂ ಏನು!

ಒಂದಿನ ಅವನು ಅವಳನ್ನು ಹಿಡಿದು ನಿಲ್ಲಿಸಿಯೇ ಬಿಟ್ಟ. ಎದೆ ಒಡೆದು ಕೊಳ್ಳುತ್ತಿದ್ದರೂ, ಮೈ ಬೆವರುತ್ತಿದ್ದರೂ ಧೈರ್ಯದಿಂದ “ಐ ಲವ್ ಯು” ಎಂದುಬಿಟ್ಟ. ಆಕೆ ಪಕಪಕನೆ ನಕ್ಕು ಬಿಟ್ಟಳು. “ಪ್ಲೀಸ್ ನೀವು ನಗಬೇಡಿ, ನಿಮ್ಮ ಅಭಿಪ್ರಾಯ ಹೇಳಿರಿ” ಗೋಗರೆದ ಅವನು.

“ನಾನೇಕೆ ಹೇಳಬೇಕು?”
“ನಾನು ನಿಮ್ಮನ್ನು ಪ್ರೀತಿಸುತ್ತೇನೆ.”
“ಪ್ರೀತಿಸು ಅಂತ ಯಾರು ಹೇಳಿದರು?”

ವಿಚಲಿತನಾದರೂ ಹುಡುಗ ಸಾವರಿಸಿಕೊಂಡ: “ಹೇಳಿಕೆಯಿಂದ ಪ್ರೀತಿ ಹುಟ್ಟುವುದಿಲ್ಲ. ಅದು ಹೃದಯದ ಸೆಲೆ, ನಾನು ಮನಸಾರೆ ಪ್ರೀತಿಸುತ್ತೇನೆ ಮದುವೆ ಮಾಡಿಕೊಳ್ಳುತ್ತೇನೆ” ಎಂದ.

“ಅಂದರೆ ನನ್ನ ಜೀವನವನ್ನು ಹಾಳು ಮಾಡುವ ವಿಚಾರವೋ?” ಅವನ ಮೇಲಿನ ದೃಷ್ಟಿ ಹೊರಳಿಸದೆ ಕೇಳಿದಳು ಹುಡುಗಿ.

“ನೀವು ನನ್ನನ್ನು ಪ್ರೀತಿಸುವುದಿಲ್ಲವೆ?” ಗಲಿಬಿಲಿಗೊಳಗಾದ ಹುಡುಗ.

“ಹುಡುಗಿ ಸ್ಪಷ್ಟವಾಗಿ ಹೇಳಿದಳು” “ರೀ ಮಿಸ್ಟರ್‍, ನಾನು ಕಾಲೇಜಿಗೆ ಬಂದದ್ದು ಕಲಿಯಲಿಕ್ಕೆ, ಭವಿಷ್ಯ ರೂಪಿಸಿಕೊಳ್ಳುವುದಕ್ಕೆ – ಪ್ರೀತಿ, ಪ್ರೇಮದ ಹುಡುಗಾಟಕ್ಕಲ್ಲ.”

ಹುಡುಗನ ಮುಖದಲ್ಲಿ ಭ್ರಮೆಗಳ ಗುರುತು ಒಂದೂ ಕಾಣಿಸಲಿಲ್ಲ.

*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...