ಮೊಟ್ಚೆಗಳಿವೆ ಉಪಮೆಗಳಂತೆ
ಪ್ರತಿಮೆಗಳಂತಿವೆ ಹೊಟ್ಟೆಗಳು
ಅರ್ಥವಿಸ್ತಾರ ಹೆಚ್ಚಿಸುವುದಕ್ಕೆ
ವಿಸ್ತೃತ ಕುಂಡೆಯ ಹೆಣ್ಣುಗಳು
(ಎಲ್ಲವನ್ನೂ ನೋಡುವುವು
ಕವಿಯ ಜಾಗೃತ ಕಣ್ಣುಗಳು)
ಗುಂಪಿನ ನಡುವೆ ಬೇಕೆಂತಲೆ ಸಿಕ್ಕು
ಮೈಯೊರಸುವ ಮೈಗಳು
ನುಡಿದರೆ ಮುತ್ತಿನ ಹರಳಿನಂತಿರಬೇಕು
ಅ ರೀತಿಯ ಬೈಗಳು
(ಎಲ್ಲರನ್ನೂ ಮುನ್ನಡೆಸುವುವು
ಯಾರಿಗೂ ಕಾಣಿಸದ ಕೈಗಳು)
ಶ್ರೇಷ್ಠ ಲೇಖಕ ಕಾಫ್ಕ ಹೇಳಿದ-
“ಕೇಳಿದರೆ ಯಾರಿಗೂ ಬೇಡ
ಈ ನಿತ್ಯದ ಬದುಕು
ಆದರೆ ನೆನಪಿರಲಿ! ಮನುಷ್ಯರಿಗಿರೋದು ಮಾತ್ರ
ಇದೊಂದೇ ಸರಕು!’
ಇರಲಿ ನೆನಪಿರಲಿ
ಕೊಂಡ ಸಾಮಾನುಗಳ ಲೆಕ್ಕ
ಕೊಳ್ಳಬೇಕಾದ ಮಲಬಾರ್ ಪಪ್ಟಡಂ ಹಾಗೂ
ಕೈಲಿ ಉಳಿದಿರೋ ರೊಕ್ಕ
ನೆನಪಿರಲಿ ಸವೆದ ಚಪ್ಪಲಿಗಳಿಗೆ
ಮೆಟ್ಟದಿರಲು ಹಣ್ಣಿನ ಸಿಪ್ಪೆ
ಸುಂದರ ನಿಮಿಷಗಳಲ್ಲಿ ಕಣ್ಣುಗಳಿಗೆ
ಮುಚ್ಚದಿರಲು ರೆಪ್ಪೆ
*****