ಮರಗಳು ಪಾಪ ಎಲ್ಲಿಗೂ ಹೋಗುವುದಿಲ್ಲ
ಅವು ಹುಟ್ಟಿದಲ್ಲೇ ಬೆಳೆಯುತ್ತವೆ
ಯಾವ ದೇಶವನ್ನೂ ಸುತ್ತುವುದಿಲ್ಲ
ಯಾವ ನದಿಗಳನ್ನೂ ದಾಟುವುದಿಲ್ಲ
ಅವು ಇದ್ದಲ್ಲೆ ಇರುತ್ತವೆ
ಮೌನವಾಗಿರುತ್ತವೆ
ಅವಕ್ಕೆ ಸುದ್ದಿಗಳು ತಿಳಿಯುವ ಬಗೆ ಹೇಗೆ ?
ಬಳಲಿದ ಯಾತ್ರಿಕರು
ನೆರಳನ್ನು ಹುಡುಕಿಕೊಂಡು ಬರುವರು
ಬಿಸಿಲಾರುವ ತನಕವೂ
ಕೆಳಗೆ ಕುಳಿತಿರುವರ
ಚಳಿಗಾಲದಲ್ಲಿ ಹಾರಿಹೋದ ಹಕ್ಕಿಗಳು
ವಸಂತದಲ್ಲಿ ಮರಳುವುವು
ಅವು ದೂರ ದೇಶದ ಸುದ್ದಿಗಳನ್ನು ತರುವುವು
ಅವು ಕುದುರೆಮುಖದ ಮೇಲಿಂದ
ಹಾದು ಬಂದಿರುವುವು
ಸಮುದ್ರದ ಗಾಳಿಯನು
ರೆಕ್ಕೆಗಳಲ್ಲಿ ಹಿಡಿದಿರುವುವು
ಆಗ ಮರಗಳು ಇಷ್ಟು ಕಾಲದ
ಮೌನ ಮುರಿಯುವುವು
*****