ನನ್ನ ಸಂಕಲನವೆಂದರೆ ನದಿ
ಅದರ ಕವಿತೆಗಳೆಂದರೆ ಉಪನದಿಗಳು
ಅವು ಎಲ್ಲಿಂದಲೊ ಯಾವ ಮೂಲದಿಂದಲೊ
ಹುಟ್ಟಿ ಬಂದಿವೆ-ಎಷ್ಟೊ ನೆಲದಲ್ಲಿ
ಎಷ್ಟೊ ಹೊಲದಲ್ಲಿ ಹರಿದು ಬಂದಿವೆ
ನನ್ನ ಸಂಕಲನವೆಂದರೆ ವೃಕ್ಷ
ಅದರ ಕವಿತೆಗಳೆಂದರೆ ಕೊಂಬೆ ರೆಂಬೆಗಳು
ಅವು ವಿವಿಧ ದಿಕ್ಕುಗಳಲ್ಲಿ ಬೆಳೆದಿದೆ
ಎಷ್ಟೊ ಎಲೆಗಳನು ಹೂ ಹಣ್ಣುಗಳನು ಬಿಟ್ಟಿವೆ
ಅಲ್ಲಿ ಎಷ್ಟೊ ಹಕ್ಕಿಗಳು ಕುಳಿತಿವೆ
ನನ್ನ ಸಂಕಲನವೆಂದರೆ ಅರಣ್ಯ
ಅದರ ಕವಿತೆಗಳೆಂದರೆ ಮರ ಗಿಡ ಬಳ್ಳಿಗಳು
ಅವು ಬೇರೆ ಬೇರೆ ಜಾತಿಯವು
ಸಿಕ್ಕಂತೆ ಬೆಳೆದಿವೆ ಬೆಳಕಿನ ಕಡೆಗೆ
ಮೈಚಾಚಿವೆ ನೆರಳನ್ನು ಚೆಲ್ಲಿವೆ
ನನ್ನ ಸಂಕಲನವೆಂದರೆ ಸಂತೆ
ಅದರ ಕವಿತೆಗಳೆಂದರೆ ಅಂಗಡಿಯ ಸಾಲುಗಳು
ಅಲ್ಲಿ ಜನಜಂಗುಳಿ ಜಾತ್ರೆ ಪಾತ್ರೆಪಗಡಿಗಳು
ಮಣಿಸರಕಿನ ಮಾಲೆಗಳು ಬಿದ್ದರೆ ಒಡೆಯುತ್ತವೆ
ಅಲ್ಲಿಯ ತನಕ ಬದುಕಿಕೊಳ್ಳುತ್ತವೆ
*****