ಇದ್ದರು ಒಂದೇ ಇಲ್ಲದಿದ್ದರು ಒಂದೇ||
ಮುದಿ ತಂದೆ-ತಾಯಿ ಏಳಲು ಬಾರದೆ
ಹಾಸಿಗೆ ಹಿಡಿದು ನರಳಾಡುತಿರಲು
ಬಂದು ನೋಡದೆ ತಂದು ಉಣಿಸದೆ
ದೂರವಾದ ಈ ಮಕ್ಕಳೆಲ್ಲರು || ಇದ್ದರು ||
ಮಕ್ಕಳಿಲ್ಲವೆಂದನೇಕ ದೇವರ
ಹರಕೆ ಹೊತ್ತು ಪಡೆದವರಿಗೆ ಉಣಿಸಿ
ಬೆಳೆಸಿ ದೊಡ್ಡವರ ಮಾಡಿ ಓದಿಸಿ
ಬಾಳಿಗೆ ಮಾರ್ಗವ ಹಿಡಿಸಿ ದುಡಿದವರ
ಕಾಲಲ್ಲಿ ಒದ್ದು ಬಯ್ಯುವ ಸಂತಾನ
ಓದಲು ಕಲಿಸಲು ದಾರಿಯು ತಪ್ಪಿ
ಅಡ್ಡದಾರಿಗಳ ಹಿಡಿದು ಓಡುವ
ಕಳ್ಳರ ಸುಳ್ಳರ ಪುಂಡುತನದಲಿ
ಮನೆಗೂ ಊರಿಗೂ ಭಾರವಾದವರು
ಬದುಕಿನ ಬಂಡಿಯನೆಳೆದೂ ಎಳೆದು
ಕೀಲು ಕೀಲುಗಳು ಕಿರ್‌ರೆನುತಿರಲು
ಮಾಸಿದ ಬಟ್ಟೆಯ ಮಾಸಿದ ಮುಖಗಳ
ಹೇವರಿಸುತ ಕಡೆಗಣ್ಣಲಿ ನೋಡುವವರು
ದೇವರು ಜಾತಿಗಳನ್ನವ ಹಾಕವು
ಜನತೆ ಬದುಕುವುದು ದುಡಿಮೆಯನ್ನದಲಿ
ಕೋಮುವಾದದಲಿ ಜನಗಳ ಛಿದ್ರಿಸಿ
ದೇಶ ದೇಶಗಳ ಬೆಂಕಿ ಹಚ್ಚುವಾ
ದೇಶ ದ್ರೋಹಿಗಳು ಜನರ ದ್ರೋಹಿಗಳು
ಕಣ್ಣಲಿ ಕುಣಿಯುವ ಕನಸುಗಳಾಸೆಗೆ
ಮಣ್ಣಿನ ಸಿರಿಯನು ಕಾಲಲಿ ತುಳಿಯುವ
ಬೇರನು ಮರತೇ ಚಿಗುರು ಹೂಗಳಿಗೆ
ಜೋತಾಡುವ ಈ ಜೋಲ್ಬಾವಲಿಗಳು
ಕಷ್ಟ ನಷ್ಟ ಬಾಳುವೆಯ ದೂರುವ
ಬಾಳ ಸಾಗರದ ಬುರುಗು ಜೀವಿಗಳು
ದುಡಿವ ಕೈಗಳನು ಮರೆತ ದರಿದ್ರರು
ತಗಣಿ ಸೊಳ್ಳೆಗಳು ಕಿಲುಬು ಹುಳುಗಳು
ಬಿಸಿಲಿಗೆ ಬಾಡುವ ಜಳಕ್ಕೆ ಮುರುಟುವ
ಚಳಿಗೆ ಸೆಟೆದು ನಿರ್ಜೀವವಾಗುವ
ಗುಡ್ಡವನೇರದೆ ಕೆಳಕ್ಕೆ ಜಾರುವ
ಮೈಗಳ್ಳರು ಈ ಹೇಡಿ ಜೀವಿಗಳು
ಏಣಿಯ ಸೇರುತ ಮೇಲಕ್ಕೆ ಹತ್ತಿ
ಏಣಿಯ ಕಾಲಲ್ಲಿ ಒದೆಯುವ ಖೂಳರು
ತಿಳಿವಿನ ಹೊಳೆಯಲಿ ಹೊಲಸು ರಾಡಿಯ
ಕಲೆಸಿ ಮಲೆತು ವಿಷ ಬೀಜವಾದವರು
*****