ಅಧ್ಯಾಯ ೧೭
ಪ್ರೊಫೆಸರ್ ಖಾಡಿಲ್ಕರ್ ದೇಹವನ್ನು ತಮ್ಮ ಮೋರಿಸ್ ಮೈನರ್ ಕಾರಿನಲ್ಲಿ ತುರುಕಿಕೊಂಡು ಗಂಟೆಗೆ ಹದಿನೈದು ಕಿಲೋಮೀಟರ್ ವೇಗದಲ್ಲಿ ಅಸ್ಪತ್ರೆಯ ಕಡೆ ನಡೆಸಿದರು. ಹನ್ನೆರಡು ವರ್ಷಗಳ ಹಿಂದೆ ಮದರಾಸಿನಿಂದ ಕೊಂಡ ಕಾರು ಅದು. ಮದರಾಸಿನಿಂದ ಹೈದರಾಬಾದು ತನಕ ಡ್ರೈವ್ ಮಾಡಿಕೊಂಡು ಬರಲು ಎರಡು ದಿನಗಳು ತಗಲಿದ್ದವು. ಹೊರಗಿನ ಪೈಂಟಿಂಗ್ ಹೋಗಿ ಅಲ್ಲಲ್ಲಿ ತೇಪೆ ಹಾಗಿದ್ದರೂ ಒಳಗಿನ ಯಂತ್ರ ಇನ್ನೂ ಸಾಕಷ್ಟು ಗಟ್ಟಿಯಾಗಿಯೇ ಇತ್ತು. ಮಕ್ಕಳನ್ನು ಶಾಲೆಗೊಯ್ಯಲೆಂದು ಕೊಂಡುಕೊಂಡ ಕಾರು ಅದು. ಸಾಲಾಗಿ ಮೂರು ಹೆಣ್ಣು ಮಕ್ಕಳು, ನಾಲ್ಕನೆಯದಕ್ಕೆ ಪ್ರಯತ್ನಿಸಲಿಲ್ಲ.
ಕ್ಲಬ್ಬಿನ ಗೆಳೆಯ ಶ್ರೀನಿವಾಸ ರಾವು ಎಂಬಾತ ಆಟೋ-ಬಸ್ ಅಪಘಾತದಲ್ಲಿ ಸಿಕ್ಕಿಹಾಕಿಕೊಂಡು ಆಸ್ಪತ್ರೆ ಸೇರಿದ್ದರು. ರಾವು ಬರೇ ಗೆಳೆಯ ಮಾತ್ರವಲ್ಲ ಹೈದರಾಬಾದಿನ ಎಕಡೆಮಿಕ್’ ವರ್ತುಲದಲ್ಲಿ ಪರಿಚಿತ ವ್ಯಕ್ತಿ. ಹಲವು ಕಾಲ ನಗರದ ಕಾಲೇಜೊಂದರಲ್ಲಿ ಅಧ್ಯಾಪಕನಾಗಿದ್ದು ನಿವೃತ್ತರಾಗಿದ್ದರು. ನಗರದ ಹಿಸ್ಟರಿ ಅಸೋಸಿಯೇಶ್‌ನ ಸ್ಥಾಪಕ ಸದಸ್ಯ. ಒಂದೆರಡು ಪಠ್ಯ ಪುಸ್ತಕಗಳ ಕರ್ತೃ.
ಆಸ್ಪತ್ರೆಯಲ್ಲಿ ರಾವಿನ ಕುಟುಂಬದವರು ಮಿತ್ರರು ಸೇರಿದ್ದರು. ರಾವ್ ಇಂಟೆನ್ಸಿವ್ ಕೇರ್ ಯೂನಿಟ್‌ನಲ್ಲಿ ಸೇರಿಸಲ್ಪಟ್ಟಿದ್ದಾರೆಂದು ತಿಳಿಯಿತು. ಯಾರನ್ನೂ ನೋಡಲು ಬಿಡುತ್ತಿರಲಿಲ್ಲ. ಹೋದ ಪ್ರಜ್ಞೆ ಇನ್ನೂ ಬಂದಿಲ್ಲ; ರಕ್ತವನ್ನು ತರಲು ಬ್ಲಡ್‌ಬ್ಯಾಂಕಿಗೆ ಜನ ಕಳಿಸಿದೆ-ಅದಾವುದೋ ಪ್ರತ್ಯೇಕ ಬ್ಲಡ್ ಗ್ರೂಪಿಗೆ ಸೇರಿದ್ದು ಬೇಕಾಗಿದೆ ಎಂದು ಯಾರೋ ಹೇಳಿದರು. ರಾವ್ ತರಕಾರಿ ತರಲೆಂದು ಮಾರ್ಕೆಟಿಗೆ ಹೋಗಿದ್ದರಂತೆ. ಪ್ರತಿ ಆದಿತ್ಯವಾರ ತರಕಾರಿ ತರುವುದು ಅವರ ರೂಢಿ. ಬರುತ್ತಿರುವಾಗ ಅವರು ಕುಳಿತ ಆಟೋಗೆ ಬಸೊಂದು ಡಿಕ್ಕಿ ಹೊಡೆಯಿತು. ಆಟೋ ಚಾಲಕ ಅಲ್ಲೇ ಮೃತನಾದ. ರಾವ್‌ನ ತಲೆಗೆ, ಕೈಗೆ ಪೆಟ್ಟಾಗಿತ್ತು.
ಬಿಳಿ ಸಮವಸ್ತ್ರ ಧರಿಸಿದ ಎಳೆ ವಯಸ್ಸಿನ ನರ್ಸುಗಳು ಆಚೀಚೆ ಓಡಾಡುತ್ತಿದ್ದರು, ವಿವಿಧ ಮದ್ದುಗಳ ದಟ್ಟವಾಸನೆ, ಆಗಾಗ ಎಲ್ಲಿಂದಲೋ ಆಕ್ರಂದನಗಳು ಕೇಳಿಸುತ್ತಿದ್ದುವು. ಹೊರಗಿನ ಹೂಗಿಡಗಳಿಗೆ ಮಾಲಿಯೊಬ್ಬ ನೀರು ಹಾಕುವುದರಲ್ಲಿ ನಿರತನಾಗಿದ್ದ. ಸ್ವಲ್ಪ ಹೊತ್ತು ಕಾದಿದ್ದು ನಂತರ ಪ್ರೊಫೆಸರರು ಆಸ್ಪತ್ರೆಯಿಂದ ಹೊರಟರು.
ತನ್ನ ಬ್ಲಡ್‍ಗ್ರೂಪ್ ಯಾವುದು? ಗೊತ್ತು ಮಾಡಿಕೊಳ್ಳಬೇಕು. ಕಳೆದ ಹನ್ನೆರಡು ವರ್ಷಗಳಲ್ಲಿ ಒಮ್ಮೆಯೂ ಅಪಘಾತದಲ್ಲಿ ಸಿಲುಕಿರಲಿಲ್ಲ. ಒಮ್ಮೆ ಕಾರಿನ ಕೆಳಗೆ ಸೈಕಲಿನವನೊಬ್ಬ ಬೀಳುತ್ತಿದ್ದ. ಮುಗಿದೇ ಹೋಯಿತು ಎಂದುಕೊಂಡೇ ಬ್ರೇಕು ಹಾಕಿದ್ದರು. ಸೈಕಲ್‌ನವನನ್ನು ಮುಟ್ಟಿ ನಿಂತಿತು ಕಾರು. ಅಂದಿನಿಂದ ಡ್ಯಾಶ್ ಬೋರ್ಡಿನ ಮೇಲ್ಗಡೆ ದೇವರ ಒಂದು ಫೋಟೋವನ್ನು ಹಾಕಿದರು. ಆದರೂ ನಂಬುವುದು ಹೇಗೆ?
ಬೇಸಿಗೆಯ ಸುಡುಬಿಸಿಲು, ಮೈ ಬೆವರುತ್ತಿತ್ತು. ಒಂದು ಡೈರಿ ಪಾರ್ಲರಿನ ಮುಂದೆ ಕಾರು ನಿಲ್ಲಿಸಿ ತಣ್ಣಗಿನ ಮಜ್ಜಿಗೆ ಕುಡಿದರು. ಐಸ್ ಕ್ರೀಮ್ ತಿನ್ನಬೇಕೆನಿಸಿದರೂ ತಿನ್ನುವಂತಿರಲಿಲ್ಲ. ಕಾಲೆಸ್ಟ್ರಾಲ್ ಎಂದಿದ್ದರು ಡಾಕ್ಟರರು. ಆದ್ದರಿಂದ ಬೆಣ್ಣೆ, ಗಿಣ್ಣು, ಮೊಟ್ಟೆ ವಜಾ, ಲಿಕ್ಕರ್ ತೆಗೆದುಕೊಳ್ಳುವುದನ್ನೂ ಬಿಟ್ಟಿದ್ದರು, ಅಪರೂಪಕ್ಕೆ ಒಮ್ಮೊಮ್ಮೆ ಸಿಗರೇಟು ಮಾತ್ರ ಸೇದುವುದಿತ್ತು.
ಕಾರನ್ನು ಸಂಸ್ಥೆಯ ಕಡೆ ತಿರುಗಿಸಿದರು.
ಗೇಟ್‌ನಲ್ಲಿದ್ದ ಕಾವಲಿನವ ಸೆಲ್ಯೂಟ್ ಹೊಡೆದ. ಪ್ರೊಫೆಸರರು ತಲೆ ಹೊರ ಹಾಕಿ ಡೈರೆಕ್ಟರ್ ಸಾಬ್ ಹೆ? ಎಂದು ಕೇಳಿದರು. ಹೆ ಎಂದ ಕಾವಲಿನವ, ಡೈರೆಕ್ಟರರ ಬಂಗಲೆ ಮುಂದೆ ಕಾರು ನಿಲ್ಲಿಸಿದರು.
ಡೈರೆಕ್ಟರ್ ನಿರಂಜನ್ ರೇ ಆಗ ತಾನೆ ಸ್ನಾನ ಉಪಹಾರ ಮುಗಿಸಿ ಬೆಳಗಿನ ಪತ್ರಿಕೆಯನ್ನು ನೋಡುತ್ತಿದ್ದವರು ಖಾಡಿಲ್ಕರರನ್ನು ಕಂಡು “ಮಾರ್ನಿಂಗ್ ಪ್ರೊಫೆಸರ್!” ಎಂದು ಸ್ವಾಗತಿಸಿದರು.
“ಮಾರ್ನಿಂಗ್ ಸರ್ !”
ಏರ್ ಕಂಡಿಶನ್ಡ್ ರೂಮು, ಒಮ್ಮೆಲೆ ತಣ್ಣೀರಿನಲ್ಲಿ ಹಾಕಿದ ತಂಪಾದ ಅನುಭವ. ನೆಲದಲ್ಲಿ ರತ್ನಗಂಬಳಿ, ಚಪ್ಪಲಿ ಕಳಚಿ ಕಾಲನ್ನು ಅದರ ಮೇಲೆ ಇಟ್ಟರು.
“ನ್ಯೂಸ್ ಕೇಳಿದಿರ?”
“ಏನು?”
“ಶ್ರೀನಿವಾಸ ರಾವ್‌ಗೆ ಏಕ್ಸಿಡೆಂಟ್ !”
ರೇ ವಿಸ್ಮಯದಿಂದ ನೋಡಿದರು. ಶ್ರೀನಿವಾಸ ರಾವ್? ಯಾರು ಹಾಗೆಂದರೆ? ಒಂದು ಕ್ಷಣ ಹೊಳೆಯಲಿಲ್ಲ.
“ಹಿಸ್ಟರಿ ಅಸೋಸಿಯೇಶನ್ಸ್…”
“ಐನೋ !”
ಖಾಡಿಲ್ಕರ್ ಅಪಘಾತವನ್ನು ವಿವರಿಸಿದರು. ಬ್ಯಾಡ್ ವೆರಿ ಬ್ಯಾಡ್ ಅಂದರು ರೇ.
“ತಲೆಯೊಳಗೆ ಕಂಕಶನ್ ಆಗಿದ್ದರೆ ಪ್ರಾಣಾಪಾಯ.”
“ನಾನು ಹೋಗಿ ನೋಡಬೇಕು.”
“ಹೈದರಾಬಾದ್ ಹಿಸ್ಟರಿ ಅಸೋಸಿಯೇಶನ್‌ಗೆ ಮಾತ್ರವಲ್ಲ ಹಿಸ್ಟರಿ ಡಿಸಿಪ್ಲಿನ್‌ಗೇ ನಷ್ಟ.”
“ನಿಜ, ಟೀ?”
“ಬೇಡ.”
“ಜ್ಯೂಸ್ ತಗೊಳ್ಳಿ.”
“ಓಕೇ.” ಸ್ವಲ್ಪ ತಡೆದು ಪ್ರೊಫೆಸರರು ಹೇಳಿದರರು :
“ನಾಳೆ ಇಂಟರ್ವ್ಯೂ.’
“ಇಂಟರ್ವ್ಯೂ?”
“ಪಿ ಎಚ್ ಡಿ ಅಡ್ಮಿಶನ್ಸ್.”
“ಹೌದು, ಮರೆತಿದ್ದೆ. ದಿನಾ ಏನಾದರೊಂದು ಇದ್ದೇ ಇದೆ.”
“ಈ ಸಲ ಕೆಲವು ಬ್ರಿಲ್ಲಿಯೆಂಟ್ ಕ್ಯಾಂಡಿಡೇಟುಗಳಿದ್ದಾರೆ.”
“ಹೌದೆ?”
“ಕವಿತಾ ದೇಶಪಾಂಡೆ…”
“ಗೊತ್ತು.”
“ಇನ್ನೊಬ್ಬ ಅರವಿಂದ ಅಂತ. ಸ್ಮಾರ್ಟ್ ಹುಡುಗ, ಈಗಾಗಲೇ ರಿಸರ್ಚ್ ಪೇಪರುಗಳನ್ನು ಬರೆದು ಪ್ರಕಟಿಸಿದ್ದಾನೆ. ಚೆನ್ನಾಗಿ ಬರೆಯುತ್ತಾನೆ.
“ವೆರಿ ಗುಡ್.”
“ನನಗನಿಸ್ತದೆ ಹೊಸ ಪೀಳಿಗೆಯೊಂದು ಡಿಸಿಪ್ಲಿನ್‌ನಲ್ಲಿ ಆಸಕ್ತಿ ಹೊತ್ತು, ಬರ್ತಾ ಇದೆ ಅಂತ. ಅವರ ತಲೆತುಂಬ ಐಡಿಯಾಗಳಿವೆ. ಆದರೆ ಡೈರೆಕ್ಷನ್ ಇಲ್ಲ, ಉತ್ಸಾಹವಿದೆ, ಪ್ರೋತ್ಸಾಹವಿಲ್ಲ. ಉದಾಹರಣೆಗೆ ಈ ಅರವಿಂದ ಅನ್ನೋ
ಹುಡುಗನ್ನ ತಗೊಳ್ಳಿ-ಯಾವುದೋ ಹಳ್ಳಿಯಲ್ಲಿ ಹುಟ್ಟಿ ಬೆಳದವನು, ಇತಿ ಹಾಸದ ಹುಚ್ಚಿನಲ್ಲಿ ಇಷ್ಟು ದೂರ ಬಂದಿದ್ದಾನೆ ಅನ್ನೋದೇ ಮಹತ್ವದ ವಿಷಯ!”
ಅಷ್ಟರಲ್ಲಿ ತಂಪಾದ ಆಪಲ್ ಜ್ಯೂಸ್ ಬಂತು.
*****
ಅಧ್ಯಾಯ ೧೮
ಎರಡೆರಡು ಮನುಕಾರ್ಡುಗಳನ್ನು ತಂದು ಟೇಬಲ್ ಮೇಲಿರಿಸಿದ ಸಮವಸ್ತ್ರ ಧರಿಸಿದ ವೈಟರ್, ಬರೇ ಕಾರ್ಡುಗಳಾಗಿರಲಿಲ್ಲ ಅವು ಪಾರದರ್ಶಕ ಪ್ಲಾಸ್ಟಿಕ್ ಕವರು ಹಾಕಿ ಪುಸ್ತಕಗಳಾಗಿದ್ದುವು. ಅರವಿಂದ ಅವುಗಳ ಹಾಳೆಗಳನ್ನು ತಿರುವಿ ಹಾಕಿದ, ಇಂಡಿಯನ್, ಸೌತ್ ಇಂಡಿಯನ್ ನಾರ್ತ್ ಇಂಡಿಯನ್, ಕಾಂಟಿನೆಂಟಲ್ ತಿಂಡಿ ತೀರ್ಥ ಐಸ್ ಕ್ರೀಮುಗಳೆಂದು ವಿವಿಧ ವಿಭಾಗಗಳ ಕೆಳಗೆ ಪದಾರ್ಥಗಳ ಪಟ್ಟಿಯಿತ್ತು. ಕವಿತಳ ಕಡೆ ನೋಡಿದ.
“ನೀವೇ ಆರ್ಡರ್ ಮಾಡಿ,” ಎಂದ.
“ಇದು ನಿಮ್ಮ ಡಿನ್ನರ್.”
“ನಿಮಗೋಸ್ಕರ.”
“ಆಲ್ ರೈಟ್.”
ಇಂಟರ್ವ್ಯೂ ಕಳೆದ ದಿನವೇ ರಿಸಲ್ಟೂ ಗೊತ್ತಾಗಿತ್ತು. ರಿಸರ್ಚ್ ಫೆಲೋಶಿಪ್ ಸಿಕ್ಕಿದ ಆರೇಳು ಮಂದಿಯಲ್ಲಿ ಕವಿತಳ ಹೆಸರಿತ್ತು. ಅರವಿಂದನದೂ ಇತ್ತು. ಡಿನ್ನರ್ ಕೊಡಿಸಬೇಕು ಅಂದಿದ್ದಳು ಅವಳು ತಮಾಷೆಗೆ, ಆಯಿತು ಎಂದು ಒಪ್ಪಿ ಕೊಂಡಿದ್ದ ತಮಾಷೆಗಲ್ಲ, ನಿಜಕ್ಕೂ. ಅವಳ ಬೆಂಬಲ ಸಹಾಯಗಳಿಲ್ಲದೆ ಫೆಲೋ ಶಿಪ್ ಸಿಗುತ್ತಿರಲಿಲ್ಲ. ಖಾಡಿಲ್ಕರರ ಕೃಪಾದೃಷ್ಟಿ ಅವನ ಮೇಲೆ ಬೀಳುತ್ತಿರಲಿಲ್ಲ. ಸಂಸ್ಥೆಯ ಕ್ಯಾಂಟೀನಿನಲ್ಲಿ ಅವಳ ಭೇಟಿಯಾದುದು ಆಕಸ್ಮಿಕವಾಗಿತ್ತು. ನಂತರದ ಘಟನೆಗಳೆಲ್ಲ ಬಹಳ ಬಿರುಸಾಗಿ ನಡೆದಿದ್ದುವು.
– ವೈಟರ್ ತೊಳೆದು ಒಣಗಿಸಿದ ಚೈನಾ ಪ್ಲೇಟುಗಳನ್ನು, ಚಮಚ ಫೋರ್ಕು ಗಳನ್ನು, ನ್ಯಾಪ್‌ಕಿನ್ನುಗಳನ್ನು ಟೇಬಲಿನ ಮೇಲೆ ಓರಣವಾಗಿ ತಂದಿರಿಸಿದ, ಕವಿತ ಕ್ಯಾರಟ್ ಸೂಪು, ತಂದೂರಿ, ಗ್ರೀನ್‌ಪೀಸ್ಕರಿ, ಮಟರ್ ಪನೀರ್, ಸ್ಯಾಲಡ್ ಹೇಳಿದರು.
ವೈಟರ್ ಆರ್ಡರನ್ನು ಬರೆದು ಕೊಂಡ. “ಒಂದೊಂದು ಪ್ಲೇಟು ಹನಿಕೂಂಚ್ ತರಲೇ ಮ್ಯಾಡಮ್?”
“ನಮ್ಮ ಇತ್ತೀಚಿನ ಸ್ಪೆಷಲ್. ಜೇನಿನಲ್ಲಿ ಅದ್ದಿದ ತಿಂಡಿ.”
“ತಗೊಂಡು ಬನ್ನಿ.”
“ಮೊದಲು ಸೂಪ್ ತರುತ್ತೇನೆ. ತಂದೂರಿಗೆ ಹದಿನೈದು ನಿಮಿಷ ತಗಲುತ್ತೆ.”
ಮಬ್ಬು ಬೆಳಕಿನ ಹಾಲು. ಪ್ಯಾನೆಲ್ ಗೋಡೆಗಳಲ್ಲೆಲ್ಲೋ ಅಡಗಿಸಿಟ್ಟ ಸ್ಪೀಕರುಗಳಿಂದ ಸ್ಟೀರಿಯೋ ಸಂಗೀತ ಪಿಸುದನಿಯಲ್ಲಿ ಬರುತ್ತಿತ್ತು. ಹವಾ ನಿಯಂತ್ರಿತವಾದ್ದರಿಂದ ಹಿತವಾದ ಚಳಿ. ಎಲ್ಲ ಟೇಬಲುಗಳೂ ಭರ್ತಿಯಾಗಿದ್ದುವು.
“ಸ್ವಲ್ಪ ತಡವಾಗಿದ್ದರೂ ಟೇಬಲ್ ದೊರೆಯುತ್ತಿರಲಿಲ್ಲ,” ಎಂದಳು ಕವಿತ.
“ನಿಜ.”
“ಐ ಲೈಕ್ ದಿಸ್ ಪ್ಲೇಸ್.”
“ತುಂಬ ಚೆನ್ನಾಗಿದೆ.”
“ವರಿ ಕ್ಲೀನ್.”
“ಹೌದು.”
“ಈ ಪ್ಲೇಟುಗಳನ್ನು ನೋಡಿ.” ಮುಟ್ಟಿ ತೋರಿಸಿದಳು.
ಮುಟ್ಟಿದ. ಬೆಚ್ಚಗಿದ್ದುವು.
“ಕೆಂಡದಲ್ಲಿ ಬಿಸಿಮಾಡುತ್ತಾರೆ.”
“ಮ್ಮ್?!” ಎಂದ ಮೆಚ್ಚುಗೆಯಿಂದ.
ಕಳೆದೆರಡು ವಾರಗಳಲ್ಲಿ ಅವನು ಬಹಳ ದೂರ ಬಂದಿದ್ದ, ಹೊಸ ನೆಲ, ಹೊಸ ಮಂದಿ, ಹೊಸ ಅನುಭವಗಳು, ನಾಗೂರಿನಿಂದ ಹೈದರಾಬಾದು, ಹೆಬ್ಬಾರರ ಹೋಟೆಲಿನಿಂದ ಹೋಟೆಲ್ ಗ್ರೀನ್ ಲ್ಯಾಂಡ್ ಬಹಳ ಹತ್ತಿರವೇನಲ್ಲ. ಯಾವುದೋ ದುಸ್ವಪ್ನ ಕಾಣುತ್ತಿದ್ದಾಗಲೇ ಮಗ್ಗುಲು ಮಗುಚಿ ಅದ್ಭುತರಮ್ಯವಾದ ಪ್ರಪಂಚದ ಕಡೆ ಹೊರಳಿದಂತೆ, ಇಲ್ಲಿನ ಭಾಷೆ, ಕಟ್ಟುನಿಟ್ಟುಗಳು ಗೊಂದಲಮಯ, ಮೆನು ಕಾರ್ಡಿನಲ್ಲಿರೋ ಆ ಪದಾರ್ಥಗಳ ಹೆಸರುಗಳು ! ಅವೊಂದೂ ಅವನಿಗೆ ಅರ್ಥವಾಗಿರಲಿಲ್ಲ. ಹಾಗೆಂದು ಒಪ್ಪಿಕೊಳ್ಳುವುದಕ್ಕೆ ಅವಮಾನ, ಕವಿತ ಇದನ್ನು ಊಹಿಸಿದಳೋ ಇಲ್ಲವೋ ಅವನಿಗೆ ತಿಳಿಯದು. ಅಂತೂ ಅವಳೇ ಸಹಾಯಕ್ಕೆ ಬಂದಿದ್ದಳು. ಇಲ್ಲದಿದ್ದರೆ ವೈಟರನ ಮೊರೆಹೊಕ್ಕು ತನ್ನ ಅಜ್ಞಾನವನ್ನು ಪ್ರದರ್ಶಿಸಬೇಕಾಗುತ್ತಿತ್ತು. ಮೈಸೂರಲ್ಲಿ ಇಂಥ ಹೋಟೆಲುಗಳಿದ್ದುವೆ? ಇದ್ದರೂ ಅವನಿಗೆ ಗೊತ್ತಿರಲಿಲ್ಲ. ಎಲ್ಲಾದರೂ ಅವನು ಹೋಗಿದ್ದಿದ್ದರೆ ಅದು ಉಡುಪಿ ಹೋಟೆಲುಗಳು ಮಾತ್ರ. ಅಲ್ಲಿಯ ಯಥಾ ಪ್ರಕಾರದ ದೋಸೆ ಅಂಬೊಡೆಗಳ ರುಚಿ ಗೊತ್ತಿತು.
ವೈಟರ್ ಪಿಂಗಾಣಿಗಳಲ್ಲಿ ಸೂಪು ತಂದಿಟ್ಟ.
“ನೀವು ಲಕ್ಕಿ,” ಎಂದಳು ಕವಿತ.
“ನಿಜ,”
“ಡಬ್ಲಿ ಲಕ್ಕಿ”
ಅರವಿಂದ ಅವಳ ಮುಖ ನೋಡಿದ. ಸ್ವಲ್ಪ ಹೆಚ್ಚಾಗಿಯೇ ಕೆಂಪು ಬಳಸಿದ್ದಳು, ತೋಳಿಲ್ಲದ ರವಿಕೆ, ಮಿರಿ ಮಿರಿ ಮಿರುಗುವ ಸಿಲ್ಕ್ ಸೀರೆ. ಕಿವಿಗೆ ರಿಂಗು, ಮೂಗಿಗೆ ನತ್ತು ಫಿಕ್ಸ್ ಮಾಡಿಕೊಂಡಿದ್ದಳು. ವೈಟರ್ ಏನಂದು ಕೊಳ್ಳುತ್ತಾನೆ? ಹೊಸತಾಗಿ ಮದುವೆಯಾದವರು ಅಂದುಕೊಳ್ಳಬಹುದು.
“ನಿಮ್ಮ ಸೂಪರ್‌ವೈಸರ್ ಡಾಕ್ಟರ್ ವೈಶಾಖಿಯಲ್ಲವೆ?”
“ಹೌದು.”
“ಅವರಿಗೆ ಒಳ್ಳೆ ಹೆಸರಿದೆ. ಸಂಸ್ಥೆಯಲ್ಲಿ ಮಾತ್ರವಲ್ಲ. ಹೊರಗೆ ಕೂಡ. ಅನೇಕ ಪೇಪರುಗಳನ್ನು ಬರೆದಿದ್ದಾರೆ. ತಮ್ಮ ರಿಸರ್ಚ್ ಸ್ಟೂಡೆಂಟುಗಳಿಗೆ ತುಂಬಾ ಸಹಾಯ ಮಾಡುತ್ತಾರೆ.”
ಇಂಟರ್ವ್ಯೂ ಕಳೆದ ಮೇಲೆ ಅರವಿಂದ ಡಾಕ್ಟರ್ ವೈಶಾಖಿಯನ್ನು ಎರುಡ ಬಾರಿ ಭೇಟಿಯಾಗಿದ್ದ. ಒಮ್ಮೆ ಕ್ಲಾಸಿನಲ್ಲಿ, ಇನ್ನೊಮ್ಮೆ ಅವರ ಛೇಂಬರಿನಲ್ಲಿ ಇಂಟರ್ವ್ಯೂ ಕಳೆದು ಐದಾರು ದಿನಗಳಲ್ಲಿ ಕ್ಲಾಸುಗಳೂ ಆರಂಭವಾಗಿದ್ದುವು. ಡಾಕ್ಟರ್ ವೈಶಾಖಿ ದಿ ಸ್ಟಡಿ ಆಫ್ ಹಿಸ್ಟರಿ ಎಂಬ ಕೋರ್ಸು ಕೊಡುತ್ತಿದ್ದರು. ಕ್ಲಾಸು ಮುಗಿದ ಮೇಲೆ ಸಂಜೆ ಬಂದು ಕಾಣುವಂತೆ ಹೇಳಿದರು. ಹೋಗಿ ಭೇಟಿಯಾದ. ಒಂದು ರೀಡಿಂಗ್ ಲಿಸ್ಟ್ ಕೊಟ್ಟು ಮತ್ತೆರಡು ದಿನಗಳ ನಂತರ ಸಿಗು ವಂತೆ ಹೇಳಿದರು. ಅದು ಅವರು ತಮ್ಮ ಕೈಕೆಳಗೆ ಸಂಶೋಧನೆ ನಡೆಸುವ ವಿದ್ಯಾರ್ಥಿಗಳನ್ನು ನಡೆಸಿಕೊಳ್ಳುವ ರೀತಿ, ಅಷ್ಟು ಕಟ್ಟು ನಿಟ್ಟಿನ ಕಾರ್ಯತತ್ಪರತೆ ಸಂಸ್ಥೆಯಲ್ಲಿ ಇನ್ನಾರಲ್ಲೂ ಇರಲಿಲ್ಲ.
“ನಿಮ್ಮ ಸೂಪರ್‌ವೈಸರ್ ಯಾರೆಂದು ಗೊತ್ತಾಯಿತೆ?” ಅರವಿಂದ ಕೇಳಿದ.
“ಪ್ರೊಫೆಸರ್ ಖಾಡಿಲ್ಕರ್.”
“ಒಳ್ಳೆಯದೇ ಆಯಿತು.”
“ಆದರೆ ಒಂದು ತೊಂದರೆಯಿದೆ.”
“ಏನು?”
“ಆವರು ಮುಂದಿನ ವರ್ಷ ರಿಟಯರಾಗುತ್ತಾರೆ.”
“ರಿಟಯರಾದವರು ಸೂಪರ್‌ವೈಸರಾಗಿರಬಾರದೆ?”
“ಇರಬಾರದೆಂದೇನಿಲ್ಲ…. ಒಂದು ವೇಳೆ ಅವರಿಗೆ ಎಕ್ಸ್ಟೆನ್ಶನ್ ಸಿಕ್ಕರೂ ಸಿಗಬಹುದು,” ಎಂದಳು ಕವಿತ.
ಹದವಾಗಿ ಸುಟ್ಟ ತಂದೂರಿ ರೊಟ್ಟಿ, ಪಲ್ಯ, ಸಾಲಡುಗಳು ಬಂದುವು. ಇಬ್ಬರೂ ಊಟಕ್ಕೆ ಸುರುಮಾಡಿದರು. ರುಚಿರುಚಿಯಾದ ಅಡುಗೆ ! ಅರವಿಂದ ಇನ್ನಷ್ಟು ರೊಟ್ಟಿ ಪಲ್ಯ ಹಾಕಿಸಿಕೊಂಡ ಕವಿತ ಡಯಟ್ ಎಂದು ಹೆಚ್ಚು ತಿನ್ನಲು ನಿರಾಕರಿಸಿದಳು.
“ಐಸ್ ಕ್ರೀಮ್, ಕಾಫಿ?” ವೈಟರ್ ಕೇಳಿದ.
ಕವಿತ ಅರವಿಂದನ ಮುಖ ನೋಡಿದಳು.
“ನನಗೆ ಕಾಫಿ ನಡೆಯುತ್ತದೆ,” ಎಂದ ಅರವಿಂದ.
“ಎರಡು ಲೈಟ್ ಕಾಫಿ, ನಿದ್ದೆಗೆ ಕಂಟಕವಾಗಬಾರದು.”
“ಯಸ್ ಮ್ಯಾಡಮ್,” ಎಂದ ವೈಟರ್.
ಪಕ್ಕದ ಟೇಬಲ್‌ನಲ್ಲಿ ಒಬ್ಬಳು ಪಾಶ್ಚಾತ್ಯ ತರುಣಿ ಯಾಂಗೋ ಹೇಳು ತಿದ್ದಳು-ನೀವು ಯುರೋಪಿಗೆ ಹೋಗಬೇಕೆನ್ನುತ್ತಿದ್ದೀರೇನೋ ಸರಿ, ಆದರೆ ತುಂಬಾ ಆಸೆ ಇಟ್ಟುಕೊಂಡು ಹೋಗಬೇಡಿ. ನಿರಾಶರಾಗಿಬಿಡುತ್ತೀರ ! ಒಂದು ರೀತಿಯಿಂದ ನಿಮ್ಮ ದೇಶವೇ ಸರಿ, ಇದೊಂದು ಬರೇ ದೇಶವಲ್ಲ. ಒಂದು ಭೂಖಂಡ ! ಇಲ್ಲಿ ಒಮ್ಮೆ ಸಂಚರಿಸಿದರೆ ಇನ್ನೆಲ್ಲೂ ಸಂಚರಿಸುವ ಅಗತ್ಯವಿಲ್ಲ ಅನ್ನಿಸಿಬಿಡುತ್ತೆ. ಹಿಮಾಲಯದಲ್ಲಿ ನಾನು ಸಾಧುಗಳನ್ನೂ ಕೇರಳದಲ್ಲಿ ಕಮ್ಯೂನಿಸ್ಟರನೂ ನಾನು ನೋಡಿದೆ.
“ನಿಮ್ಮ ಕ್ಲಾಸು ಹೇಗೆ ನಡೆಯುತ್ತಿದೆ?” ಕವಿತ ತಟ್ಟನೆ ಕೇಳಿದಳು. “ಯಾವ ಕ್ಲಾಸು?” ಎಂದ ಅರವಿಂದ.
“ಖಾಡಿಲ್ಕರರ ಮನೆಯಲ್ಲಿ.”
“ಚೆನ್ನಾಗಿ ನಡೆಯುತ್ತಿದೆ. ಐ….ಐ ಲೈಕ್ ಇಟ್.”
“ಪೊಫೆಸರರು ಹೇಳ್ತಾ ಇದ್ರು”
“ಏನು ಹೇಳ್ತಾ ಇದ್ರು?”
“ಆ ಹುಡುಗರಿಗೆ ನಿಮ್ಮ ಪಾಠ ಅಂದ್ರೆ ಖುಷಿಯಂತೆ.”
ಅರವಿಂದ ಅವರ ಮುಖಗಳನ್ನು ನೆನಪಿಸಿಕೊಂಡ.
“ಕೀಫ್ ಇಟ್ ಅಪ್” ಎಂದಳು.
“ಪ್ರಯತ್ನಿಸುತ್ತೇನೆ”
ಕವಿತ ಮಾತಾಡುತ್ತಲೇ ಇದ್ದಳು.
ಕೊನೆಗೆ ವೈಟರ್ ಬಿಲ್ ತಂದಿತ್ತ, ದೊಡ್ಡ ಮೊತ್ತದ ಬಿಲ್ಲು. ಅರವಿಂದ ಬಿಲ್ಲಿನ ಹಣ ಅದರ ಮೇಲೆ ಎರಡು ರೂಪಾಯಿ ಭಕ್ಷೀಸು ಕೊಟ್ಟು ಕವಿತಳೊಂದಿಗೆ ಹೊರಬಂದ. ಈ ಹಿಂದೆಂದೂ ಇಷ್ಟು ದೊಡ್ಡ ಮೊತ್ತವನ್ನು ಹೋಟೆಲು ಊಟಕ್ಕಾಗಿ ಅವನು ಖರ್ಚುಮಾಡಿರಲಿಲ್ಲ. ಆದರೂ ಮನಸ್ಸು ಹಗುರಾಗಿತ್ತು. ರಿಸರ್ಚ್ ಅವಕಾಶ, ಅದರ ಮೇಲೆ ತಿಂಗಳಿಗೆ ಐದುನೂರು ರೂಪಾಯಿ ಫೆಲೊಶಿಪ್ ಭಾಗ್ಯದ ಬಾಗಿಲಿನಂತೆ ಕಂಡುವು.
ಮರ್ಕ್ಸುರಿ ಬೆಳಕಿನಲ್ಲಿ ಕವಿತ ಥಳಥಳನೆ ಹೊಳೆಯುತ್ತಿದ್ದಳು. ಕಾರು ತಂದಿದ್ದಳು. ಅವಳ ಪಕ್ಕದಲ್ಲಿ ಕುಳಿತ.
“ಅರವಿಂದ್”
ಅವಳ ಕಡೆ ನೋಡಿದ.
“ನನ್ನದೊಂದು ರಿಸರ್ಚ್ ಪ್ರೊಪೋಸಲ್ ತಯಾರಾಗಬೇಕು.”
“ಕೊಟ್ಟಿಲ್ಲವೇ ಇನ್ನೂ?”
“ಇಲ್ಲ ಸ್ವಲ್ಪ ಅದೇನಂತ ನೋಡುತ್ತೀರ? ನಾಳೆ?”
“ಓಕೇ.”
“ಥ್ಯಾಂಕ್ಸ್ ಫಾರ್ ದಿ ಡಿನ್ನರ್.”
“ಅದರಲ್ಲೇನಿದೆ”
ಅರವಿಂದ ತಾನಿಳಿಯಬೇಕಾದಲ್ಲಿ ಇಳಿದ. “ಗುಡ್ ನ್ಯಾಟ್” ಎಂದಳು. “ಗುಡ್ ನ್ಯಾಟ್.” ಅನೇಕ ವಾಹನಗಳ ಮಧ್ಯೆ ಕವಿತಳ ಕಾರು ಮರೆಯಾಯಿತು.
ಅರವಿಂದ ತನ್ನ ವಸತಿಯ ಕಡೆ ಹಜ್ಜೆ ಹಾಕಿದ.
ಹೋಟೆಲಿನ ವೆರಾಂಡಗಳಲ್ಲಿ ಬೆಳಕಿಲ್ಲ. ಬೀದಿ ಬೆಳಕಿನಲ್ಲಿ ತನ್ನ ಕೋಣೆಯ ಬೀಗವನ್ನು ಕಂಡು ಹುಡುಕಿ ಬಾಗಿಲು ತೆರೆದು ಲೈಟು ಹಾಕಿದ, ಫಕ್ಕನ ಚಳಕು ಬಿದ್ದು ತಬ್ಬಿಬ್ಬಾದ ಜಿರಳೆಗಳು ಕತ್ತಲಿರುವ ಕಡೆಗೆ ಓಡಿಹೋದುವು.
*****