ತಾಯ್ ಕನ್ನಡ, ನಡೆ ಕನ್ನಡ ,
ನುಡಿ ಕನ್ನಡ – ಬಾಳ್ ಕನ್ನಡ !
ಕನ್ನಡಿಗನೆಲ್ಲಿದ್ದೊಡಲ್ಲಿ ಕನ್ನಡ ನಾಡ
ಕೀರ್ತಿ ಧ್ವಜ !
ಕನ್ನಡಿಗ ನಿಂತಿರ್ದ ನೆಲಮೆ ಕನ್ನಡ ನುಡಿಯ
ಸ್ಫೂರ್ತಿ ಧ್ವಜ !
ಕನ್ನಡದ ನೆಲದ ನೆಲೆ ಬಿಟ್ಟು ಬೇರೆಡೆ ನಡೆದು
ಕಾಲ ದೂಡುವ ಪಾಡು ಬಂದರೆಂದಾದರೂ,
ಯಾವ ಕಡೆಗಾದರೂ ಬಾಳ ಬಿರುಗಾಳಿಯಲಿ
ಸಾಗಿ ತೂರಿದರಲ್ಲಿ ನನ್ನೆದೆಗೆ ತಂಪೀವ
ಮಾತಿದೊಂದಿದೆ, ಗೆಳೆಯ; ನಾಡಿ ನಾಡಿಗಳಲ್ಲಿ
ನುಡಿಯುತಿದೆ ಕನ್ನಡದ ನಾದಮಯ ಕಾವ್ಯ ರವ!
ಅಡಿಯಿಟ್ಟ ನೆಲ ನನ್ನ ಕನ್ನಡದ ಕರುನಾಡು-
ಗಾಳಿ ತೋರುವ ತಂಪು ಮಲೆನಾಡ ಸೆರಗಿನಲಿ
ಕನ್ನಡದ ತಾಯಿಟ್ಟ ತೆಂಗು ಕಂಗಿನ ಜೋಡು-
ಬೀಸಣಿಗೆ ಕಳುಹಿದುದು. ಹೃದಯದೀ ಗುಡಿಯಲ್ಲಿ
ಉರಿವ ನಂದಾದೀಪ, ಕನ್ನಡದ ಹಿರಿಯೊಲುಮೆ
ಹೊತ್ತಿಸಿದ ಉಷೆಯೊಲವ ಕಿಡಿ ಕೊಟ್ಟ ಮುಡುಪು!
ಆತ್ಮ ಕನ್ನಡದೊಲವು, ಒಲವು ಕನ್ನಡದಾತ್ಮ!
ನಾಡಿ ನಾಡಿಯ ಉಳಿವು, ಇರವು, ಸಿರಿಗನ್ನಡಂ!
*****