ಸಾಗರದ ಆಚೆಗಿನ ಕೂಗೊಂದು ಕೇಳುತಿದೆ
ಆರದೋ ಏನೊ? ಯಾರಕರೆಯುತಿಹುದೇನೊ ?
ತೆರೆಯ ಮೇಲೇರಿ ಬೀಸುಗಾಳಿಯಲಿ ಈಸುತಿದೆ
ಬರುತಿದೆ; ಬಿಡದೆ ಬರುತಿದೆ; ಮುಗಿಯಲಿಲ್ಲವೇನೋ ?
ಆರಕೂಗಾರ ಕರೆಗಾಗಿರಬಹುದೀ ಕಾರಿರುಳಿನಲಿ ?
ಮುಗಿಲ ಮಾಳಿಗೆಯಲಿ ಮಿನುಗು ಚುಕ್ಕೆಗಳೂ ಇಲ್ಲ !
ನನಗಾಗಿಯೊ ಇನ್ನಾರಿಗೋ ಯಾರ ಇಚ್ಚೆಯಲಿ ?
ಈಗೇಕೆ ಈ ಮಧ್ಯ; ಮೌನವಾವರಿಸಿಹುದಲ್ಲ !
ಹಕ್ಕಿ ಹೊರಗಿಲ್ಲ; ನಿಶೆಯು ಹೆದರಿಲ್ಲ; ನಿಶ್ಯಬ್ದ !
ನೆಲದ ಮೇಲಲ್ಲಿ; ಬಾನಬಯಲಲ್ಲಿ; ಸಾಗರದ ಜಲದಲ್ಲಿ
ಮಸಣ ಶಾಂತಿಯ ಕುರುಡು ಕುರುಹಾದ ನಿಶ್ಯಬ್ದ !
ಧರೆ ಹಿರಿದು ಇರುವಾಗ ಕುರುಡಿನಲಿ ಕಿರಿದಾಗಿಹುದಿಲ್ಲಿ
ನನ್ನ ಕಂಡಿತೋ ಏನೊ ಕಾರಿರುಳ ಕತ್ತಲೆಯ ಕಣ್ಣು
ಅಲ್ಲ ನಿಜವಲ್ಲ; ಇರಬಹುದು ಆಂತರ್ಯ ಅವ್ಯಕ್ತ ಜ್ಯೋತಿ
ಸನಿಯದಲ್ಲಿಲ್ಲ; ಬಹುದೂರ. ಕಾಣದಾಗಿವೆ ಕಣ್ಣು
ಕರುಣೆ ಕರೆಯುವ ಅಕ್ಕರೆಯ ತಾಯಕರುಳ ಆತುರ ದ್ಯೋತಿ
ಎಲ್ಲಿಗೋ ಮುಳುಗಿಹೆನು; ಇರುವ ಅರುವಿಲ್ಲ
ಮನ ವಿಶ್ವದಲ್ಲಿ ಕಾರಿರುಳ ಸಾಗರದ ಆಳದಲಿ ಮುಳುಗಿಹೆನು
ಆ ಕೂಗು ಕೂಗಲ್ಲ; ಭಾಗ್ಯ ಕರೆ ಇರಬಹುದಲ್ಲ?
ದಾರಿ ತೋರುವ ಕೂಗು; ನನ್ನಿರವಿನ ಸತ್ಯ ಕೂಗು! ಓಗೊಡಲೇನು?
ನಂಬುವೆನು ನನಗಿರುವ ನನ್ನ ತಾಯ ಕರುಳು
ಅಜ್ಞಾತ; ಅರಿವಿಲ್ಲ! ಧ್ವನಿಯತ್ತ ನಡೆದು ಕೂಡುವೆ ಮೊದಲು
ಹಸಿದೊಡಲಿಗದೋ ಮೃಷ್ಟಾನ್ನ! ಮರೆದರೆ ಮರುಳು
ನಿಜಕು ಆ ಮಾತೆ ಜಗನ್ಮಾತೆ ದಿವ್ಯಮಾತೆ; ನಡೆ ಮೊದಲು
*****