ಬ್ರಿಟೀಷ್ ಏರ್‌ವೇಸ್ ಪಯಣ
ಒಳಗಡೆ ಬಿಳಿಯ ಐದೂ ಹುಡುಗಿಯರ ಕಲವರ;
ಇವರು ಪಂಚಕನ್ಯೆಯರೆ…..
ಹಾಗೆಂದೇ ಕರೆಯುತ್ತಿದ್ದಾರೆ ಸಹ
ಭಾರತೀಯ ಪಯಣಿಗರು. ಜೊತೆಗೆ
ಹಸಿರು ಕಣ್ಣಿನ ಕೆಂಪು ತುಟಿಯ
ಈಗಷ್ಟೇ ಅರಳಿದಂತಿರುವ ಗುಲಾಬಿ ಸಖಿಯರು.
ತೂಗುಬಿಟ್ಟ ಗೊಂಡೆಜಡೆ, ಎತ್ತಿ ಕಟ್ಟಿದ
ಕೂದಲಗಂಟು ಸುತ್ತಲೂ ಮಲ್ಲಿಗೆ ಮಾಲೆ
ಶಂಕಚಕ್ರ ಚಿಪ್ಪು ಮಣಿ ಹವಳ
ರುದ್ರಾಕ್ಷಿ ತಾಯಿತ ಕರಿಮಣಿಗಳ ಸರಗಳು
ಕತ್ತಿಗೆ ಭಾರವಾದರೂ ಸಂತೋಷಿಸುವ ರೀತಿ
ಕೊಲ್ಹಾಪೂರಿ ಚಪ್ಪಲಿ, ಬಣ್ಣಬಣ್ಣದ
ಹಾವು ಚೇಳಿನ ಅಂದದ ಕುಂಕುಮ ಬಿಂದಿಗಳು
ಕೈತುಂಬಾ ಗಾಜಿನ ಬಳೆ, ಕಾಲಿಗೆ ಗೆಜ್ಜೆ, ಮೂಗಿಗೆ ನತ್ತು
ಚೂಡಿದಾರ್, ಗಾಗರಾಚೋಲಿ, ಮಿಂಚು ಮಿಂಚಿನ
ಟೀಶರ್ಟ್, ಲಾಲ್ ದುಪ್ಪಟ್ಟಾ
ಹತ್ತಾರು ಹಿಂದಿ ಮಾತು ಕಥೆ ಹಾಡು
(ಹವಾಮೆ ಉಡತೆ ಜಾಯೆ ಮೇರೆ ಲಾಲದುಪಟ್ಟಾ
ಮಲ್ ಮಲ್ ಜಿಹೋ ಜೀ….)
ಇತಿಹಾಸ ಓದಿ ಕೇಳಿ ಬಂದ
ಇಂಗ್ಲೆಂಡ್ ಹುಡುಗಿಯರ ಭಾರತ ಪ್ರವಾಸ
ಕಂಡದ್ದೆಲ್ಲಾ ಕೊಂಡು ನೋಡಿದ ಪ್ರೀತಿ
ಇಡೀ ದೇಶಸುತ್ತಿ ಮೋಜು ಮಜ
ಮಾಡಿದಿರಾ? ಕುಟುಕಿದ್ದಕ್ಕೆ
ಸಂಶೋಧನಾ ವಿದ್ಯಾರ್ಥಿನಿಯರ
“ಸಂಸ್ಕೃತಿ ಅಧ್ಯಯನ” ಪರಿ ಬಿಡಿಬಿಡಿಸಿ
ಹೇಳಿದಂತೆ
ಕುತೂಹಲದ ಬಿಳಿಯ ಬ್ರಿಟೀಷರು
ಸುತ್ತಿ ಸುತ್ತಿ ಕಪ್ಪಾಗಿ ಮುಖತುಂಬ ಬೊಬ್ಬೆದ್ದ
ಪಂಚಕನ್ಯೆಯರನು ತಬ್ಬಿ
“ನಮ್ಮ ಹುಡುಗಿಯರ ಸಾಧನೆ” ಎಂದಾಗ
ಪೆಚ್ಚಾದ ಭಾರತೀಯ ಪಯಣಿಗರ ಮುಖ
ಮಂಗನಂತಾಗಿದ್ದೊಂದು ಬಗೆ.
*****