ಕೃಷ್ಣಾಕುಮಾರಿಯ ಆತ್ಮಹತ್ಯೆ

(ಸೂ: ಜೋದಪುರ ಮತ್ತು ಜಯಪುರ ರಾಜವಂಶಗಳು ಕೃಷ್ಣಾಕುಮಾರಿಯ ಪಾಣಿಗ್ರಹಣ ನಿಮಿತ್ತ ಹೊಡೆದಾಡುವುದು.  ಅವಳ ತಂದೆ, ಭೀಸಿಂಹನ ದೆಸೆಯಿಂದ ಕೃಷ್ಣಾಕುಮಾರಿಯು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುವುದು)

ಪೇರಾನೆಗಳೆರಡರ ಕಡು ಕಲಹಕೆ ಮರಿಮಿಗವೆ?
ರಣಹದ್ದುಗಳೊಡೆದಾಟಕೆ ಶುಕಶಿಶುವಿನ ಬಲಿಯೆ?
ಎಳೆಕುವರಿಯು ಎಳೆ ಹರೆಯವು ತಂದೆ ತಾಯಿಗಳವಳ
ನಡುಕೆರೆಯಿಂ ಬರಲಾರದೆ ಬಿಟ್ಟಂತೆಯೆ:- ಅಲ್ಲಾ?
ಸುಖಸೋಗಿನಯೆಡೆಗಿಂತೀ ಬಾಧಕವದು ಆಗೆ
ಚೆಲು ಬಾನನು ಕಾರ್ಮೋಡವದಾವರಿಸಿದ ತೆರನೆ.  ||೧||

ಸಾರಸ್ವತ ಸಮತೆಯು ಈ ಜನತೆಯು ಎಡೆಯೆಲ್ಲಿ?
ಸಹಕಾರದ ಒಲದ್ಮೊಲೆಯು ಕಟುಹೃದಯದೊಳೆಲ್ಲಿ?
ಶ್ರುತಿಶಾಸ್ತ್ರವು ಆಗಮಗಳು ನಡೆವುದೆ ಇದರೆಡೆಗೆ-
ಅಕೊ ನೋಡೆ, ಘಾತುಕತನ ಬೀಡೊಳು ಸುಖವುಂಟೆ?
ವಿಧಿಪೊರೆದೊಡೆ ಬಾಳ್ಸವಿಯದು! ಬಾನ್ಮಂಡಲದಲ್ಲಿ
ಹಾರಾಡುವ ಖಗರಾಶಿಗೆ ಕಂಠಕತನವೆಲ್ಲಿ?  ||೨||

‘ಎಲೆ ರಮಣಿಯೆ, ಏನಿಂತಿದು? ಹೇ ಕುವರಿಯೆ ಕೇಳು-
ವಿಷಪಾನವೆ ಈ ಜನ್ಮಕೆ! ಇಂತಿರ್ಪುದೆ ಬಾಳೂ!!
ನೆಲೆಯಿಲ್ಲವೆ ನಿಯಮಿಲ್ಲವೆ; ನೀತಿಯು ಮೋಹಾಂಧ
ಯಶಃಕಂಠಕರಾಗಿ ಎಸಗಿದ ಕಲಹವೆನಿತೊಂದಂದ!
ಹಾಕುವರಿಯೆ!  ಕರುಳೆನ್ನಯ ಪಿತನಿನ್ನಯ ಎಂತು,
ತಡೆವುದೊ ಇದ!  ಎಂತಿರ್ಪುದೊ ನಿಯತಿಯ ಈ  ತಂತು  ||೩||

ಇಂತೆನ್ನಲು ಥಟ್ಟನೆಮನ ನೆಟ್ಟನೆ ತನುವಿರಿಸಿ
ಅರಳಿದ ನಸುನಗೆಯನು ಬಾಲೆಯು ಅಲ್ಲಿ ಸಲಿಸಿ.
ಇಬ್ಬನಿಯಿಂ ಸಮವರಳುತ ನಸುಚೆಲ್ವನು ಬೀರಿ
ತೋಷವನೆಮಗೀವಂತೆಯೆ ಕೃಷ್ಣಳ ಮುಖ ಬೀರಿ
ಬೇಸರದಾ ಕಡು ಬೇಗೆಯೊಳಿರಿತಾ ಸ್ತ್ರೀವೃಂದ-
ವನು ತಣಿಸುತ ರಾಜಸ್ಥಾನಕೆ ಮುದತೋರಿದಳಂದ!  ||೪||

‘ಹೇ ತಾಯೇ, ಎನ್ಜನನಿಯೆ ಭಾಗ್ಯದ ವರಮಾತೆ,
ಶೋಕಿಪೆಯ?  ಇದರೊಳು ಏನೀಪರಿಯಾ ಕೊರತೆ?
ಮೋಹಾಂಧದ ಬೀಡೊಳು ಚಲಿಸಲು ಬಿಡುವೆಲ್ಲಿ?
ಮಾತ್ಸರ್ಯದ ಗನಿಯಿಂ ಪೊರಮಡುವಾ ತೆರವೆಲ್ಲಿ
ಅನಿವಾರ್ಯವಾದೀ ಪರಿ ಕಾಟವ ಬಿಡಲೆಸಗೆ-
ವಿಷಸೇವಿಪೆ-ಚಿರಶಾಂತಿಯ ಲೋಕದಿ ನಾನೊರಗೆ.  ||೫||

‘ವಂದಿಪೆ ನಾಂ ಈಶನಿಗೂ ಮಾತಾಪಿತರರಿಗೂ!
ವಂದಿಪೆನಿನ್ನೊಮ್ಮೆಯು ನಾ ಸಖಲಾಪ್ತ ಜನಕೂ!!
ಪೋಷಿಸುತಾ ಪಾಲಿಸುತಾ ತಿನ್ನಿಸುತಾ ಎನ್ನ,
ನೋಡಿದಕೂ ಆದರ್ಶದ ಪ್ರೀತಿಯು ಬಿಡದನ್ನ.
ಇಂದಿನ ದಿನ ಈ ನಿಮಿಷಕೆ ತನುವಿದನೆನಗಿತ್ತ
ಹಿರಿಯರನಾ ವಂದಿಪೆನೋ ಇನ್ ತೆರಳುವೆನತ್ತ!!  ||೬||

‘ಸೇವಿಪೆನೀ ಪಾನಕವನು ದೇಶದ ಸುಖಕಾಗಿ-
ಸೇವಿಪೆನೋ ಎನ್ನಡೆದಾ ಜನಕನ ಸುಖಕಾಗಿ-
ಸೇವಿಪೆನಾ ಅಳಿಮನದಾ ದುರ್ಜನರೆದೆಗಾಗಿ-
ಸೇವಿಪೆನೆಂದಳು ಶಾಂತಿಯ ತಾಣದ ವಶಕಾಗಿ-
ಎನ್ನುತ ತಾಯ್ ತಾಂದೆಗೆ ಪ್ರದಕ್ಷಿಣೆಯನು ಮಾಡಿ
ವಂದಿಸಿ ಬಳಿಸೇರಿದ ಜನಸ್ತೋಮಕೆ ಸುತೆನೋಡಿ!  ||೭||

ಕುಡಿದಳು ಹಾ! ಸಾಯ್ವಳೆ ವಿಷ ಸೇವಿಸೆ ಆ ಬಾಲೆ?
ಭೋದಿಪ ತನ್‌ತಾಯಿಗೆ ಹಿತವಾಕ್ಯವನಂತುಸುರೆ!
ಋಣಿಯಾದೆನು ಹೇ ಪಿತನೇ, ಸಾಕಿದೆ ನೀ ವರೆಗೆ
ಮೀಸಲು ಈ ಮರಣದ ಪರಿ! ತಿಳಿದೂ ಹಾ ಕೊರಗೆ?
ಈ ವಿಶ್ವದ ಯಾವೆಡೆಯೊ ನಮ್ಮೆಲ್ಲರ ಸ್ಥಾನ
ನಾವ್ ಕೊರಗುತ ಮತಿಹೀನರಂತಾಗ್ವುದೆ ದುಮ್ಮಾನ!  ||೮||

ಎನ್ನಲು, ಅದೊ ಬಂದಿತು ಗರಳವ ತುಂಬಿಸಿ ಕುಡಿಯೆ,
ಕೊಟ್ಟರು ನೋಡಲ್ಲಿಯೆ ಕೆಡಹಲು ತರುಣಿಯ-ವಿಧಿಯೆ!
ಮುಖಕಾಂತಿಯು ತನುಶೋಭೆಯು ಹೃತ್ಪಠದಾ ಸ್ಥೈರ್ಯ
ಉತ್ಸಾಹವು-ಬೆಡಗೆನಿಸಿತು ಜನವೃಂದಕೆ ಸುತೆಯಾ!
ಕುಡಿದಳು ನೋಡೊಮ್ಮೆಗೆ ಜುಮ್ಮೆನ್ನಿಸುತ ಕ್ಷಣದಿ
ಸಖಲರ ಹಾಹಾಕಾರವು ಕೇಳಿಸಿದವು ನಿಜದಿ  ||೯||

ತರುಲತೆಗಳು ಅಲ್ಲಾಡಿತೆ ಉದ್ಯಾನದಿ ಅಂದು?
ಖಗಮಿಗಗಳೂ ಕುಣಿದಾಡಿತೆ ಸಂತಸದಲಿ ತಿಂದು?
ಜ್ವಲಿಸಿತೆ ರವಿ ಕಿರಣವು ಸಹ-ಕಳೆಗೆಟ್ಟಾ ದಿನವು;
ಪಡುವಣ ತನಿಮಾರುತವದು ಸೋಕಿತೆ ನೋಡಿದುವೂ?
ದಿವಸದ ಗತಿಗಳನರಿಯದೆ ಸೋಜಿಗವದು ಎಲ್ಲ;
ದುಃಖಾಂಬುಧಿಯೊಳು ಈಜುತ ಕಳೆದರು ದಿನವೆಲ್ಲಾ!  ||೧೦||

ಉತ್ಪಾತವಿದಿಂತಾದರು ಉತ್ತೇಜಿತ ಕಾರ್ಯ
ಕೊನೆಗೊಂಡಿತೆ?  ಕೃಷ್ಣಳು ಅದೊ-ನೆಟ್ಟನೆ ಇರೆ-ಶೌರ್ಯ!
ಕ್ಷುದ್ರಾತ್ಮರಲ್ಲಿಂದಲೆ ಅಗಲರು ನೋಡಂತೂ,
ಕುಸುಂಬ’ದಾ ಮೂಲಿಕೆರಸ ಸೇವಿಸೆ ಕೊಡಲನಿತು!
ಒಂದನೆಯೇ ಎರಡನೆಯೇ ಮಗುದೊಮ್ಮೆಗೆ ಎಂದೇ
ನೋಡಲು ಕಡು ಸಾಹಸದಿ ಮಾಡಿತ್ತರು ವಧೆಗೆಂದೆ.  ||೧೧||

ಸೆರಗೊಡ್ಡುತ ಕಾಲೂರುತ ನೆಲಕುರುಳುತ ತಾಯಿ,
ಬೇಡಿದರೂ ಬೇಡೆಂದರು ಕಡೆಗಾಲವು ಸ್ಥಾಯಿ!
ಕಲ್ಮನವದು ಕರಗುವುದೆ?  ಕುಮಾರಿಯು ಮನದಿ
ದೆಸೆಹತ್ತಕೆ, ದೇವತೆ, ಜನಸ್ತೋಮಕೆ ಒಂದಾಗಿ
ವಂದಿಸುತಾ, ಮಾತೆಯ ಆರೋದನವ ತಣಿಸಿ
ವಿನಯದಿ ತಲೆಬಾಗಿಸಿ ಕುಡಿದಳೂ ವಿಷವನು ಮುದದಿ!  ||೧೨||

ಕಣ್ಮುಚ್ಚಿತು, ಅಸುರರ ನಡುವಿರ್ದೀ ಸುಕುಮಾರಿ
ಅಗೊ ಹೋಯಿತು!  ನಾಡಗಲುತ ಸ್ತ್ರೀಮಣಿ ಎಳನಾರಿ!!
ಘೋರಾಂಧತೆ ರಾಜಸ್ಥಾನಕೆ!-ಕವಿಯಿತು ನಿಸ್ತೇಜ,
ರತ್ನವದಾ ಮಣ್ಣೊಕ್ಕಿತು-ನೆಲೆಸಲು ಸರಿ ಸಹಜ!
ಕಾಮಾದಿಗಳೀಜಗವನು ಸುಡುವುದು ನೋಡಿನಿತು,
ಏನ್ ಪೊಂದಿದರೀ ಕಾರ್ಯದೆ ಮೇಲಾಡುತಲಿಂತು?  ||೧೩||

ತಾ ಸಾಯೇ ಜನಕೋಟಿಗೆ ಚಿರಸುಖವಿದೆಯೆನಿಸಿ
ಆನಂದದಿ ಪ್ರಫುಲ್ಲಿತ ವದನದಿ ವಿಷಹೀರಿ;
ನೆನೆದಳು ಸುತೆಕೃಷ್ಣಳು ಆ ನಾರೀ ಮಣಿಗಳನು,
ನೆನೆದಳು ರಾಜಸ್ಥಾನಕೆ ಯಶಃಕಾಯರಾದರನೂ;
ಪದ್ಮಿನಿಯೂ ಸಂಜೋಗಿನಿ ಪನ್ನೆಯು ಮೊದಲಾದ
ಕರ್ಮದೇವಿ ತ್ಯಾಗಿ ಜನನಿಗಳಾನಂದದಿ ನೋಡ.  ||೧೪||

ಕಳೆಯಿತು ದಿನ ಕಳೆದಂತೆಯೆ ನೆನಪೊಂದನು ಉಳಿಸಿ
ಆ ಬಾಲೆಯ ದಿವ್ಯಾತ್ಮ ಸ್ವರ್ಗಲೋಕದಲುಳಿಸಿ,
ಜೀವವನಾ ತ್ಯಾಗದ ಆ ಸ್ಫಟಿಕದ ಎಡೆ ತೋರಿ,
ಸುಖಸಂಪದ ಇಹಜೀವನ ಬಯಕೆಯ ನೆಲೆ ಮೀರಿ;
ನಡೆದಳು ಆ ಸ್ಥಾನದೆ ಬಹು ಧವಳ ಪ್ರಭೆಯಾಗಿ,
ಮಿನುಗುತ ಪ್ರಕಾಶಿಸಿ ಮನಮೋಹಿಸಿ ಮಂಗಳಾಂಗಿ.  ||೧೫||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೩೩
Next post ತಂಪು

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…