ಈ ಸೆಲ್ಲಿನೊಳಗಿಂದ ನೋಟವೇ ಬೇರೆ-ಮೇಲಕ್ಕೆ ತೆರೆದ
ಅವಕಾಶದಲ್ಲಿ ಕತ್ತಲಾಗಿರಬಹುದು ಬೆಳಕಾಗಿರಬಹುದು
ಮೋಡ ಹಾಯುತ್ತಿರಬಹುದು ನಕ್ಷತ್ರಗಳ ಬೆಳಕು
ಬೀಳುತ್ತಿರಬಹುದು ಮುಖಗಳು ಮೂಡುತ್ತಿರಬಹುದು
ನೆನಪು ಹಣಿಕುತ್ತಿರಬಹುದು
ರಾತ್ರಿಯ ತಣ್ಣನೆ ಗಾಳಿ ಮಣ್ಣಿನ ವಾಸನೆ ಉಪ್ಪಿನ
ವಾಸನೆ ತರುವ ಕಿನಾರೆ ಗಾಳಿ ನಿದ್ದೆ ಜೊಂಪಿನ ಬೇಸಗೆಯ
ರಾತ್ರಿ ಗಾಳಿ ಗಾರೆ ಗೋಡೆಯ ಮೇಲೆ ವ್ಯರ್ಥ ಬಡಿದು
ಬೆಳಗಾದಾಗ ಇಲ್ಲಿಗೆ ಬಂದು ತಲುಪುತ್ತಿರುವ ಧ್ವನಿಗಳೇ ಬೇರೆ
ಅವುಗಳ ರೀತಿಯೇ ಬೇರೆ ಆ ಅಲೆಗಳೇ ಬೇರೆ
ರೇಲ್ವೆಯ ಹರಿತ ಧ್ವನಿ ಟ್ರಕ್ಕಿನ ಖಂಡಿ ಧ್ವನಿ
ಯಾವ ಜಗತ್ತಿಗೋ ಹೋಗುತ್ತಿರುವ ಜನರ ಸ್ಟೀಮರಿನ
ಸೈರರಿನ ಧ್ವನಿ ಸ್ವಂತಕ್ಕೆ ಸಂಬಂಧವಿಲ್ಲದೇ
ಮೂಕ ಧ್ವನಿಯಲ್ಲಿ ಸೇರಿ ನಿಶ್ಶಬ್ದವಾಗಿ
ಬಂದು ಬಡಿಯುವ ಶೈಲಿಯೇ ಬೇರೆ
ಈ ಗೋಡೆಗಳ ಒಳಗೆ
ಆ ಜಗತ್ತೇ ಬೇರೆ-ಎಂದಿಗೂ ಸಂಬಂಧವಿರದ
ಮಣ್ಣ ಬೊಂಬೆಗಳ ಸಾಲು ನಿರ್ವಿಕಾರ
ಆಕಾರಗಳ ಸಾಲು ಈ ಗೋಡೆಗಳ ಬದಿಗೆ
ನೆರಳಿದಲ್ಲದ ಜನಗಳ ನಿಟ್ಟುಸಿರು ತಾಗಿ ನಿಂತ ಈ ಕಲ್ಲುಗಳ
ಗೋಡೆ ಮೈಗಳ ಬೆವರು ಜಿಗುಟುಗಟ್ಟಿದ ಗೋಡೆ
ಬಿದ್ದರೂ ಎದ್ದು ನಿಲ್ಲುವ ಈ ಸ್ವಂತ ಮೈ
ಗೋಡೆ ಕಟ್ಟಿ ಮಾಡಿದ ಸಮಾಧಿ
ಸಮಾಧಿಯಲ್ಲಿ ಸತ್ತ ಸಂವೇದನೆ ಮತ್ತು
ಇದಕ್ಕೆಲ್ಲ ಹೊರತಾದ ನಿರ್ವಾತ ಕೋಶ
ಅದೃಶ್ಯಗಳೊಡನೆ ಮಾತಾಡಿ ಅರ್ಥಗಳ ಹಿಂದೆ ಅಲೆದಾಡಿ
ಗೇಣು ನೆಲದಲ್ಲಿ ಸುತ್ತಾಡಿ ದೂಳಿನ ರುಚಿ
ಅನ್ನದ ರುಚಿ ಕಾಮದ ರುಚಿ ವ್ಯತ್ಯಾಸವಿಲ್ಲದ ಅಸ್ತಿತ್ವವಿಲ್ಲದ
ನೆನಪಿನ ಪರೆಯಂತೆ ಅನುಭವ ಮತ್ತು ಸ್ವಂತದ ನಡುವೆ
ಮೈ ಮತ್ತು ಮಾತಿನ ನಡುವೆ ಮೂರ್ಛೆ ಮತ್ತು ಪ್ರಜ್ಞೆಯ ನಡುವೆ
ಮೊದಲಾಗುವುದಕ್ಕೆ ಮತ್ತು ಕೊನೆಗೊಳ್ಳುವುದಕ್ಕೆ
ಕಾಯುವ ಈ ಅವಸ್ಥೆಯೇ ಬೇರೆ
ಇರುವಿಕೆ ಇಲ್ಲದಿರುವಿಕೆಯ ಹೊರಗೆ.
*****