ಹೊಗೆಯ ಮೇಲೆ ಇಬ್ಬನಿ ಇಳಿದು
ಇರುಳ ಮಬ್ಬು ಬೆಳಕಿಗೆ ಟ್ರಾನ್ಸ್ ಪೆರೆನ್ಸ್
ಹಿಡಿದಂತೆ
ಛಾವಣಿ ಬಿದ್ದ ಹಳೆ ಮನೆಯ ಒಳಗೆ
ಮುರಿದ ತೊಲೆಗಳಲಿ ತಲೆಕೆಳಗಾಗಿ
ತೊನೆವ ಬಾವಲಿಗಳ ಹಾಗೆ
ಜೇಡನ ಬಲೆಯ ಗಂಭೀರತೆಯ ಮೇಲೆ
ಬಿಸಿಲು ಮಳೆ ಸುರಿದು ಗುಂಯ್ ಗುಟ್ಟುವಂತೆ
ಪದರಗಳು
ಈ ಮಹಾ ಸರೋವರದ ಮೇಲೆ
ಎಣ್ಣೆ ಬಿಂದುಗಳಂತೆ
ಹೊಸ ಅನುಭವಗಳಿಳಿದು
ಹೊಸ ಚಿತ್ರಗಳ ಬಿಡಿಸುವುದೇಕೆ?
ಶಿಲಾಯುಗದ ತೋಳು ಅಗೆದು ಹಾಕಿದ ಗಡ್ಡೆ
ಮಲ್ಟಿ ವಿಟಾಮಿನಿನ ಗುಳಿಗೆಯಾಗಿ ನುಂಗುವಾಗ,
ಯುಗಾಂತರಗಳ ಹಿಂದೆ
ನಿದ್ದೆ ಹೋದ ಜೀವ
ಕೈಚೀಲದಲಿ ಎದ್ದು ಅಳುವಾಗ
ಸ್ಪಂದಿಸುವುದೇನು?
ಆಡಮಿನ ನರಮಂಡಲದಿಂದ ಹುರಿತೆಗೆದು
ಬಿಗಿದು ಮಿಡಿಯುತಿಹೆವಲ್ಲ
ಯುಗಾದಿಗಳ ಹಾಡು-
ಡೈಡೋಳ ದುಃಖ, ಬುದ್ಧನ ಮರುಕ,
ರಾಮಾದಲ್ಲಿ ರೇಚಲ್-
ಅಸ್ತವ್ಯಸ್ತದ ಈ ಪ್ರಾಕಾರದಲ್ಲಿ
ನಿನ್ನೆ
ಇಂದು
ನಾಳೆಗಳನ್ನು
ಮೌನವಾಗಿ ನುಂಗಿ ಹಾಕುತ್ತ
ಬಂದಿದೆ ನನ್ನ ಪ್ರಜ್ಞೆ
ಒಮ್ಮೆ ಟೈರೀಸಿಯಸ್ ನ ನಿಲಿಸಿ
ಕೇಳಬೇಕು:
ಇದೆಲ್ಲ ಏನು?
ಮತ್ತು ಎಕೆ?
*****