ಹದಿನಾರಕೆ
ಈಗತಾನೆ ಐನೀರು ಮುಳುಗಿ ಬಂದವಳು
ಗಾಳಿಗೆ ತಲೆಮುಡಿ ಹರಡಿ ಒಣಗಿಸುತಿದಾಳೆ
ಶಕುಂತಳೆ
ಇದು ವಿಶ್ವಾಮಿತ್ರ ಸೃಷ್ಟಿ
ಅಪರಿಮಿತ ಯುಗದ ಬ್ರಹ್ಮಚರ್ಯದ ಫಲ.
ಈ ಪ್ರಮೀಳೆ ಯಾರಾರ ಹೃದಯಕ್ಕೆ
ಹಚ್ಚುವಳೊ ಬೆಂಕಿ!
ಆರಿಸುವ
ಲಾಲಿಸುವ ತೋಳ ತೆರೆಮಾಲೆ
ಕುಡಿಮೊಲೆಯ ಕ್ಷೀರ ನಿಕ್ಷೇಪ
ಹೊತ್ತು ತಲೆಬಾಗಿಸಿದ ಕಲ್ಪವೃಕ್ಷ
ಛೀ ಸಾಕು
ಈ ಹುಚ್ಚು
ಇದು ಸೆಕೆಂಡ್ ಹ್ಯಾಂಡ್ ಕಾವ್ಯ
ಯಾರ ಟೇಸ್ಟಿಗೋ ಮಾಡಿದ ಅಡಿಗೆ ಇದು
ಪಂಪ, ಕುಮಾರವ್ಯಾಸ, ಮಿಲ್ಟನರ
ಕಿಸೆಗೆ ಕೈಹಾಕಿ
ಪದ ವಿಜೃಂಭಣೆಯ ಅಮಲಿನಲ್ಲಿ
ನಾನು ರಾಮಾಯಣ ಬರೆಯಲೊಲ್ಲೆ
ನನ್ನ ದರ್ಶನ ಬೇರೆ
ಕೊಂಡೆ ಕೊಳ್ಳಗಳಲ್ಲಿ ಗಲ್ಲಿಗಳಲ್ಲಿ
ಕಂಡ, ಅರಗಿಸಿಕೊಂಡ,
ಮರೆತೇ ಹೋದ ಸಂಕೀರ್ಣ
ಅನುಭವದ ವಿಸ್ಕಿ, ಅದು
ಇಲ್ಲಿ ವಿಶ್ವಾಮಿತ್ರನೂ
ನಾಯಿಯ ಮಾಂಸ ತಿಂದು ತೇಗಿದ್ದ
ಇದಕ್ಕೆ ನೂರೆಂಟು ಪ್ರಾಕಾರಗಳು
ಈಕೆಗೆ ಹದಿನಾರೆಂಬ ಛಲವೇಕೆ?
ಕಾಲದ ಪರೆ ತೆರೆದರೆ
ಒಳಗೆ ಮಸಿ ಹಿಡಿದ ಪೆಟ್ಟಿಕ್ಕೋಟು
ಅಗ್ಗ ಪೌಡರಿನಲ್ಲಿ ಬೆವರಿನ ಕಮಟು
ಹೆಲೆನಳ ಚರ್ಮದಲ್ಲೂ ಗ್ರೀಸಿನ ಜಾರು
ಈ ವಿಕೃತ ಮುಖಗಳ ವ್ಯಕ್ತಿ
ಇರಬಹುದು ನಾನು ನೀನು
ನನ್ನ ಹಾಡೇ ಬೇರೆ
ತಾಳಲಯ ವ್ಯಾಕರಣ ಸಿಂಟ್ಯಾಕ್ಸು ಎಲ್ಲ
ಒಡೆದು
ನೋವು ನಗೆ ಜಿಗುಪ್ಸೆ ವ್ಯಂಗ್ಯ
ತಿಳಿದ ತಿಳಿಯದ ಸುಪ್ತ ಜಾಗೃತ ಭಾವಗಳ
ಅಕ್ರೊಬಾಟಿಕ್ಸ್
ಏನೋ ಹೇಳಬೇಕು
ಏನೆಂಬುದು ಮಬ್ಬಿ
ಹೇಗೋ ಹೇಳಬೇಕು
ಹೇಗೆಂಬುದು ಅಸ್ಪಷ್ಟ
ಅತೃಪ್ತಿಯ ಉಗ್ಗು
ಕಳಚಿ ಬೀಳುವ ಇಂದ್ರಿಯ ಪ್ರಜ್ಞೆಗಳಿಗೆ ಜೋತು
ನನ್ನ ಪ್ಯಾಟರ್ನ್ ಕಂಡು ಹುಡುಕುವ
ಪ್ರಯತ್ನ ಇದು
ಈ ಸಂಕೀರ್ಣತೆಯ ಅಕ್ಷಯ ಜಿಡ್ಡುದಾರ ಮೈಬಿಗಿದು
ಅನುಭವವಾಗಿ, ಅದು ನಾನಾಗಿ
ನಾನೆ ಅಭಿವ್ಯಕ್ತಿಯಾದಾಗ
ಅದೇನು ನಾನೇ ನನ್ನ ಕಾವ್ಯ.
*****