ಇದು ನನ್ನ ಕಲ್ಪನೆಯ
ಕಥೆಯಲ್ಲ ಮಗಳೇ
ನನ್ನಮ್ಮ ನನಗೆ ಹೇಳಿದ್ದು
ಅವಳಮ್ಮ ನನ್ನಮ್ಮನಿಗೆ ಹೇಳಿದ್ದಂತೆ
ಈಗ ನಾ ನಿನಗೆ ಹೇಳಿದಂತೆ
ನಾಳೆ ನೀ ನಿನ್ನ ಮಗಳಿಗೆ ಹೇಳುವಂತೆ
ಇದೊಂದು ರೀತಿ ಚಕ್ರದಂತೆ!
ಇದು ಕಥೆಯ ಮೂಲರೂಪವೂ
ಅಲ್ಲ ಮಗಳೇ
ನನ್ನಮ್ಮ, ಅವರಮ್ಮ,
ಅವರಮ್ಮ, ಅವರಮ್ಮನಮ್ಮನ
… … … … … …
… … … … … …
ಬಾಯ್ಗೆ ಹರಿದು
ಮೂಲರೂಪ ಹೇಗಿತ್ತೋ
ಸೃಷ್ಟಿಕರ್ತನಿಗೇ ಗೊತ್ತು!
*
“ಅಳಬೇಡ ಕಂದಮ್ಮ
ನಿನ ಪುಣ್ಯ ಇಲ್ಲಿ ರಾಕ್ಷಸನಿಲ್ಲ!”
ಏಳು ಸಮುದ್ರದಾಚೆ
ಅವನಿರುವುದೆಲ್ಲಾ
ನೀ ಅಳದಿದ್ದರೆ
ಅವನಿಲ್ಲಿಗೆ ಬರುವುದೂ ಇಲ್ಲ!
ಬಿಡು ಮಗಳೇ
ನಾವೂ ಅಲ್ಲಿಗೆ ಹೋಗುವುದಿಲ್ಲವಲ್ಲಾ!
*
ಅವನು ಕುಡಿಯುವುದು
ನನ್ನ – ನಿನ್ನಂತೆ
ಹಾಲು ಕಾಫಿಯಲ್ಲ
ಬೆಳಗು – ಬೈಗು
ಹಸಿ – ಹಸಿ ನೆತ್ತರೇ ಬೇಕಂತಲ್ಲಾ?
ನಿನ್ನಂತವರ ಕಣ್ಣೀರೆಂದರೆ
ಅವನಿಗೆ ಸಿಹಿ ತಿಂಡಿಯ ತರಹ!
ಅವ ತಿನ್ನುವುದೂ
ಸೊಪ್ಪು ಸದೆ ಹಣ್ಣಲ್ಲ
ನನ್ನ-ನಿನ್ನಂತವರೇ ಆಹಾರ
“ಅಳದಿರು ಬಂಗಾರಿ
ರಾಕ್ಷಸ ಇಲ್ಲಿಲ್ಲ!”
*
“ಹುಷ್ ಸುಮ್ಮನಿರೆ ನನ್ನ ಚಿನ್ನ”
ಅವನಂತವರೂ ಇಲ್ಲಿಲ್ಲ
ದೈತ್ಯ ಪರ್ವತವೇ
ಅವನ ಆಕೃತಿಯಂತಲ್ಲಾ!
ಅವನ ಘರ್ಜನೆಗೆ
ಏಳೇಳು ಸಮುದ್ರವೇ ನಡುಗಿ
ಅಲೆಗಳೇಳುವುದಂತಲ್ಲ
ಸಮುದ್ರದಲಿ ಅಲೆಗಳಿರುವವರೆಗೂ
ಅವನಿಗೋ ಸಾವಿಲ್ಲ!
*
ಆದರೂ ಅವನ ಪ್ರಾಣ
ಅವನ ಹೃದಯದಲಿಲ್ಲ!
“ಅಯ್ಯೋ ಹೀಗ್ಯಾಕಳುವೆ ನನ್ನ ಜೀವವೇ?”
ಏಳು ಕಾಡನು ದಾಟಿ ಮತ್ತೇಳೂ ಕಡಲನು ಮೀಟಿ
ಕೊಟ್ಟ ಕೊನೆಯ ಗುಹೆಯೊಳಗಿನ
ಗಿಣಿಯೊಳಗೇ ಇದೆಯಂತೆ ಆ
ರಾಕ್ಷಸನೆಂಬುವನ ಪ್ರಾಣ!
*
“ನನ ಮುದ್ದು ಮಗುವೇ ಅಳಬೇಡ”
ರಾಕ್ಷಸನಿಗೋ ಸಾವಿಲ್ಲ
ಅಮ್ಮ ಹೇಳಿದ್ದಳಲ್ಲಾ
ಅವ ನಿನ್ನ ಕದ್ದರೆ
ಕಾಪಾಡಲು ಯಾವ
ರಾಜಕುಮಾರನೂ ಬರುವುದಿಲ್ಲ
ಏಕೆಂದರೆ ಇಲ್ಲಿ ರಾಜಕುಮಾರ ಇಲ್ಲ!
ಅದಕೆಂದೇ ಮಗಳೇ ನೀ ಅಳಬೇಡ
*
ಹೀಗೇ… ಹೀಗೇ…
ನಗಬೇಕು ಕಂದಮ್ಮ
ಎಂದೆಂದೂ ಇಲ್ಲಿ ರಾಕ್ಷಸನಿಲ್ಲ
ನೀ ಅಳದಿದ್ದರೆ
ಅವನಿಲ್ಲಿಗೆ ಬರುವುದೂ ಇಲ್ಲ
ಬಿಡು ನಾವು ಜಾಣರು
ಅವನ ಬಾಯಿಗೆ
ಹೋಗುವುದೂ ಇಲ್ಲ!
*
ಅತ್ತವರಿಗಷ್ಟೇ ನನ್ನ ರನ್ನ
ರಾಕ್ಷಸನ ಹೆದರಿಕೆ
ಅಳುನುಂಗಿ ನಗುವವರಿಗೆ
ರಾಕ್ಷಸನ ಕಥೆಯೇಕೆ?
ಹೀಗೇ ಏನನ್ನೂ ಪ್ರಶ್ನಿಸದೇ
ನಗುನಗುತ್ತಿದ್ದರೆ ಬೇರೆ ಮಾತೇಕೆ?
*****