ತಿಕ್ಕಿ ತೀಡಿ ಕಸಗುಡಿಸಿ
ನೀರೆರೆಚಿ ಹದ ಮಾಡಿ ಮಣ್ಣು
ಬಿಳುಪು ನುಣ್ಣಗಿನ ರಂಗೋಲಿ ಹಿಟ್ಟು
ತೋರು-ಹೆಬ್ಬೆರಳಿನ ಮಧ್ಯೆ
ನಾಜೂಕು ಬೊಟ್ಟು!
ಚುಕ್ಕೆ ಚುಕ್ಕೆಗಳ ಎಣಿಸಿ
ಸಮಾನಾಂತರದಿ ಬಿಡಿಸಿ
ಆಚೀಚೆ ರೇಖೆ ಜಾರದಂತೆ ಒರೆಸಿ
ಒಂದಿನಿತೂ ಲೆಕ್ಕ
ತಪ್ಪುವಂತಿಲ್ಲ ಇಲ್ಲಿ.
ಚಿತ್ತ ಚಿತ್ತಾರವಾಗಿ
ಮನದೊಳಗೇ ಕುಳಿತು
ಶಿಲ್ಪ ಕುಟ್ಟುತ್ತಿದ್ದ ಮರಕುಟಿಗ
ಚಿತ್ತವನ್ನೇ ಚಿತ್ರವಾಗಿಸಿ
ಹಾದಿಬೀದಿಯವರ ಕಣ್ಣರಳಿಸಿ
ಕಣ್ಣಿರುವವರ ಮನವರಳಿಸಿ
ನಲಿಸಿ-ನಗಿಸಿದ ರಂಗವಲ್ಲಿ
ಹೊತ್ತು ಏರಿದಂತೆಲ್ಲಾ
ಕಣ್ಣಿದ್ದೂ ಇಲ್ಲದವರ ಕಾಲ್ತುಳಿತಕ್ಕೆ ಸಿಕ್ಕು
ಸತ್ತು ಸುಣ್ಣವಾಗಿ
ಕದಡಿದ ಅಸ್ಪಷ್ಟ ರೇಖೆಗಳ
ವಿಕಾರ ರೂಪವಾಗಿ
ಹೊರ ಹರಿಯದ ಬಿಕ್ಕು!
ಮಣ್ಣೊಳಗೆ ಹದ ಕಲಸಿದ
ಕಣ್ಣೀರಾಗಿ ಬೆರೆತು
ಅವರಿವರ ಅಡಿಗಳ
ಕೆಳಗೆ ಹೂತು
ಅನಾಥವಾಗಿ ಮರೆಯಾಗುತ್ತದೆ
ಸೋತು!
ಆದರೂ
ನಾಳೆಗೆ ಮತ್ತೆ ಹೊಸತು!
*****