ಅರೆ,
ಈಗ ಈ ಹಕ್ಕಿಯೂ ಹಾರಬಲ್ಲದು!
ನಿಮ್ಮೆಲ್ಲರಂತೆ
ನಿಮ್ಮ ಆಕಾಶಕ್ಕೆ!
ನಿಮ್ಮದೇ ಆಗಿದ್ದ
ಕನಸಿನಾ ಲೋಕಕ್ಕೆ!
ರಂಗುರಂಗಿನ
ನವಿಲುಗರಿಯ ಸಹಸ್ರಾಕ್ಷಿ
ಕಂಡಿದ್ದು ಆ ಕನಸೋ?
ಈ ಕನಸೋ? ಕೇಳುವುದಾರ ಸಾಕ್ಷಿ?
ಕನಸುಗಳು ಕನಸುಗಳೇ
ಅವುಗಳಲೆಂತಾ ಆಯ್ಕೆ?
ಕಂಡದ್ದು, ಕಾಣದ್ದು
ನೆನಸಿದ್ದು, ಕನಸಿದ್ದು
ಅದೂ ಬೇಕು
ಇದೂ ಬೇಕು
ಎಲ್ಲವೂ ಬೇಕು ತೆಕ್ಕೆಗೆ
ಬಲಕೊಡಲು ಪಕ್ಕೆಗೆ
ಹಾರಲು ಹಕ್ಕಿಗೆ!
ಯಾರಿಟ್ಟ ಶಾಪವೋ?
ಯಾರು ಕೊಟ್ಟ ವರವೋ?
ಈಗ ಹಕ್ಕಿಯ
ಕಣ್ಣ ತುಂಬಾ ಕನಸು
ಮೈ ತುಂಬಾ ಕನಸು
ಮನಸ ತುಂಬೆಲ್ಲಾ ಕನಸು
ಕೊನೆ ಕೊನೆಗೆ
ಹಕ್ಕಿಯೇ ಕನಸು
ಕನಸೇ ಹಕ್ಕಿಯು!
ಕನಸಿನಾ ಲೋಕದಲಿ
ಸಹಸ್ರಾಕ್ಷಿ ತೆರೆವ
ಈ ಹಕ್ಕಿ ‘ಕನಸು’
ಕನಸೀಗ ನನಸು!
*****