ಕುಂಬಳೆಯೆಂಬ ನಿಲ್ದಾಣ ಅದು ಬಹಳ ದೊಡ್ದದೇನಲ್ಲ
ಮದರಾಸು ಮೈಲು ಜಯಂತಿ ಜನತಾ ಅಲ್ಲಿ ನಿಲ್ಲುವು-
ದಿಲ್ಲ. ಇತರ ಗಾಡಿಗಳು ತುಸು ಹೊತ್ತು ತಂಗುವುವು
ಜನ ಇಳಿಯುವರು ಹತ್ತುವರು ಎಲ್ಲಿಂದೆಲ್ಲಿಗೊ
ಹೋಗುವರು ಕಣ್ಣು ತೆರೆಯುವುದರೊಳಗೆ
ಐನೂರು ವರ್ಷದ ಆಲದ ಮರಗಳಿವೆ ಅಲ್ಲಿ
ಬಿಳಲುಗಳು ಬೆಳೆದು ಬೇರುಗಳಾಗಿವೆ ಅವುಗಳ
ನೆರಳಲ್ಲಿ ದನಗಳು ಮಲಗಿ ಮೆಲಕುಹಾಕುತ್ತವೆ
ಪ್ರಯಾಣಿಕರು ಕುಳಿತು ಗಾಡಿಗೆ ಕಾಯುತ್ತಾರೆ
ಮೇಲೆ ಹಕ್ಕಿಗಳು ಹಣ್ಣುಗಳನ್ನು ಹೆಕ್ಕುತ್ತವೆ-ಆಚೆ
ಅರಬೀಸಮುದ್ರ ಬಿದ್ದು ಹೊರಳುತ್ತದೆ
ಊರಿಗೆ ಹೊಸಬನಂತಿರುವ ಯಾತ್ರಿಕನೆ!
ಎಲ್ಲಿಂದ ಬಂದಿಳಿದೆ ನೀನು ಇಂಥ ಹೊತ್ತಿನಲ್ಲಿ
ಎತ್ತ ಹೋಗುವವ ಯಾರಲ್ಲಿ ಕೆಲಸ? ಅಹಾ!
ಅಲ್ಲಿ ಬಚ್ಚಂಗಾಯಿ ಕೊರೆದಿಟ್ಟು ಗಿರಾಕಿಗಳ
ಕಾಯುವ ಮುದುಕನ ಬಳಿ ಸಾಗು!
ಅವನಿಗೆಲ್ಲವೂ ಗೊತ್ತು ಐನೂರು ವರ್ಷಗಳಿಂದ
ಹೀಗೆ ಕಾಯುತ್ತ ಕುಳಿತಿದ್ದಾನೆ! ಅವನ ಕಣ್ಣುಗಳಲ್ಲಿ
ಕಣ್ಣಿಟ್ಟು ನೋಡಿದರೆ ಎಲ್ಲ ಕಾಣಿಸುವುದು!
ಊರು ಮನೆ ಮಠ ಬಿಸಿಲು ಮಳೆಗಾಳಿ
ಮಾಗಿಯ ಚಳಿ ಊರದೇವರ ತೇರು ಯಾರಿಗೂ
ಹೇಳದೆ ಓಡಿಹೋದ ಜೋಡಿ ಕಾರಣವಿರದೆ
ಮಾಡಿದ ಆತ್ಮಹತ್ಯೆ ಎಷ್ಟು ಗಾಲಿಗಳು ಉರುಳಿ
ಹೋದುವು ಎಷ್ಟೊಂದು ಸರ್ತಿ ಎಷ್ಟು ಬೆಂಕಿಯ
ಕಣಗಳು ಸಿಡಿದುವು ಇವನ ಕಣ್ಣುಗಳಲ್ಲಿ!
ಅದೊ ಅದೋ ಸಮೀಪಿಸುವ ಅದೆಂಥ ಸದ್ದು ?
ಇನ್ನೊಂದು ಲೋಕದಿಂದೆದ್ದು ಬಂದಂತಿದೆ!
ಭೀತನಾಗದಿರು! ಅದು ಇನ್ನೊಂದು ಗಾಡಿ
ತುಸು ಹೊತ್ತು, ನಿಂತು ಹೋಗುವುದು, ಆಮೇಲೆ
ಎಲ್ಲ ಮೊದಲಿನಂತಾಗುವುದು
*****