ಹೇಳಿರಲಿಲ್ಲಿವೆ ನಾನು ನಿಮಗೆ
ಅವನಿರುವುದೆ ಹಾಗೆ
ಅವನ ಕೆಣಕಬೇಡಿರಿ ಎಂದು
ಅವನೇನು ಹುಚ್ಚನಲ್ಲ ಹೆಡ್ಡನೂ ಅಲ್ಲ
ಪ್ರೀತಿಯ ನೆಪದಲ್ಲಿ
ತಲೆ ಸಡಿಲಾದವನಲ್ಲ
ವಂಶಪಾರಂಪರ್ಯವಲ್ಲ
ಅವನ ಪೂರ್ವಜರಲ್ಲಿ
ಹೀಗೆ ಯಾರಿಗೂ ಇದ್ದಿರಲಿಲ್ಲ
ಅವನಷ್ಟಕ್ಕೆ ಬಿಟ್ಟರೆ ಅವನು
ಯಾರಿಗೇನೂ ಮಾಡುವುದಿಲ್ಲ
ಮಾತು ಬಯ್ಗಳದಂತೆ
ನಿಮಗೆ ಅನ್ನಿಸಬಹುದು
ಅವನ ರೀತಿ ಬೇರೆ-
ಪದಗಳನ್ನು ಹಣ್ಣಿನಂತೆ
ಕಚ್ಚುತ್ತಾನೆ
ಕಲ್ಲಿನಂತೆ ಎಸೆಯುತ್ತಾನೆ
ಜಗಲಿಯಲ್ಲಿ ಕುಳಿತು ವಾಕ್ಯಗಳನ್ನು
ನೂಲಿನಂತೆ ನೇಯುತ್ತಾನೆ
ಬೀಡಿಯ ಹೊಗೆಯಂತೆ
ಉಗುಳುತ್ತಾನೆ ಅರ್ಥದ
ದಟ್ಟ ಮೋಡಗಳನ್ನು
ದೇಶವಿದೇಶ ಸುತ್ತಿದವನಲ್ಲ
ಬಿಹಾರ ಬಂಗಾಳ ಒರಿಸ್ಸ
ಕಾಶ್ಮೀರ ಹಿಮಾಚಲಪ್ರದೇಶ
ಪಂಜಾಬ ಗುಜಾರಾತ ಮರಾಠ
ಎಲ್ಲಿಗೂ ಹೋಗಿಲ್ಲ
ಬೆಲ್ಚಿ ಭೋಪಾಲ ಭಾಗಲ್ಪುರ
ಮೀನಾಕ್ಷಿಪುರ ಕಾಮಾಟಿಪುರ ತಿರುವನಂತಪುರ
ಚಾರ್ಮಿನಾರ್ ಕುತುಬ್‌ಮಿನಾರ್ ಶ್ರವಣಬೆಳಗೂಳ
ಹಳದೀಘಾಟ ರಾಜಘಾಟ ತಾಳೀಕೊಟೆ
ಜಲಿಯನ್‌ವಾಲಾಬಾಗ್
ನೋಡಿದವನಲ್ಲ
ಗಾಂಧಿ ನೆಹರು ಪಟೇಲ ಜಿನ್ನ
ಶೇಖ್‌ಅಬ್ದುಲ್ಲ ಇಂದಿರಾಗಾಂಧಿ ಸಂಜಯಗಾಂಧಿ
ಫೂಲನ್ ದೇವಿ ಹಾಜಿಮಸ್ತಾನ
ಮೊರಾರ್ಜಿ ದೇಸಾಯಿ ಕಾಂತಿದೇಸಾಯಿ ವಾಜಪೇಯಿ
ಅಕ್ಬರ್ ಆಶೋಕ ತುಘಲಕ
ಚರಣ್‌ಸಿಂಗ್ ಸ್ವರಣ್‌ಸಿಂಗ್ ಭಿಂದ್ರಾನ್‌ವಾಲೆ
ರಾಜನಾರಾಯಣ್ ಅಮಜದ್‌ಖಾನ್
ಖಾನ್ ಅಬ್ದುಲ್ ಗಫಾರ್‌ಖಾನ್
ಡಾಕ್ಟರ್ ರಾಮ ಮನೋಹರ ಲೋಹಿಯಾ
ಯಾರನ್ನೂ ಕಂಡವನಲ್ಲ
ಆದರೂ ಅವನು ಹೇಳುವುದರಲ್ಲಿ ಸುಳ್ಳಿಲ್ಲ
ಎಲ್ಲ ಕಡೆ ಹೋಗಿದ್ದಾನೆ
ಎಲ್ಲ ನೋಡಿದ್ದಾನೆ
ಎಲ್ಲ ಕಂಡಿದ್ದಾನೆ
ಯಾರು ನಂಬಿದರೆಷ್ಟು ಬಿಟ್ಟರೆಷ್ಟು
ಮಹಾತ್ಮಾ ಗಾಂಧಿ ತಾನೇ ಎಂದು
ಕಿತ್ತೊಗೆದಿದ್ದನು ಅಂಗಿಯನ್ನು
ದಂಡಿಯಾತ್ರೆ ಕೈಗೊಳ್ಳುವೆನೆಂದು
ನಡೆದು ಹೋಗಿದ್ದನು ಕುಂಬಳೆಗೆ
ಅದೆಷ್ಟೋ ಬಾರಿ ಅನ್ನನೀರು ಬಿಟ್ಟು
ಉಪವಾಸ ಮಲಗಿದ್ದನು
ಗಾಂಧಿಯ ಕೊಲೆಯಾದಂದು
ತಾನೇ ಸತ್ತ ಎಂದುಕೊಂಡಿದ್ದನು
ನಂತರ ನಾಥೂರಾಮ್ ಗೋಡ್ಸೆಯನ್ನು
ಗಲ್ಲಿಗೇರಿಸಿದಾಗ
ತಲೆಬಾಗಿಸಿ ನಿಂತವನು ಇವನೇ!
ಕೊಲೆ ಸುಲಿಗೆ ಅತ್ಯಾಚಾರ ಅಹಿಂಸೆ
ಕ್ಷಾಮ ದಾಮರ ರೋಗ ರುಜಿನು ಮಹಾಯುದ್ಧ
ಎಲ್ಲ ವಿಧಿಗೂ ಬದ್ಧ
ನಡು ಮಧ್ಯಾಹ್ನದ ಸೂರ್ಯನನ್ನು
ಬಿಡುಗಣ್ಣಿನಿಂದ ನೋಡಿ ನಿಲ್ಲುವನು
ಎಂಥ ಸತ್ಯಕ್ಕೂ ಸಿದ್ಧ
ಆದರೂ ಯಾವ ದೇಶ ತಾನೆ
ಇಬ್ಬರು ಸೂರ್ಯರನ್ನು ಸಹಿಸುವುದು?
ಇವನು ಈಗಾಗಲೆ
ಅಂಧನಾಗತೊಡಗಿದ್ದಾನೆ !
*****