ನಾವು ಸಾಮಾನ್ಯರು
ಕಡಿಯುತ್ತೇವೆ ಕುಡಿಯುತ್ತೇವೆ
ತಿನ್ನುತ್ತೇವೆ ಮಲಗುತ್ತೇವೆ
ಬಾಧೆಗಳಿಂದ ಮುಲುಗುತ್ತೇವೆ
ಹಸಿಯುತ್ತೇವೆ ಹುಸಿಯುತ್ತೇವೆ
ನುಸಿಯುತ್ತೇವೆ ಮಸೆಯುತ್ತೇವೆ
ಸಂದುಗಳಲ್ಲಿ ನುಸುಳುತ್ತೇವೆ
ಸಿಕ್ಕಷ್ಟು ಕಬಳಿಸುತ್ತೇವೆ
ಸಿಗಲಾರದ್ದಕ್ಕೆ ಹಳಹಳಿಸುತ್ತೇವೆ
ಕನಸುಗಳ ಹೆಣೆಯುತ್ತೇವೆ
ನನಸಾಗದೆ ದಣಿಯುತ್ತೇವೆ
ಪರದೆಗಳಲ್ಲಿ ಕುಣಿಯುತ್ತೇವೆ
ಕಾಣದುದರ ಬೆದರಿಕೆಗೆ ಮಣಿಯುತ್ತೇವೆ
ಹೊರಗೆ ಬಂದು ಬೀದಿಗಳಲ್ಲಿ
ನಿಸೂರಾಗಿ ನಡೆಯುತ್ತೇವೆ
ಗುಂಪಿನಲ್ಲಿ ಗೋವಿಂದಾ
ಸೀದಾ ಸಾದಾ ಸಾಚಾತನಗಳಿಗೆ
ನಾವೇ ಹಕ್ಕುದಾರರು
ನ್ಯಾಯ ನೀತಿ ಧರ್ಮಗಳಿಗೆ
ನಾವೇ ವಾರಸುದಾರರು
ಪೋಜು ಕೊಡುವ ಸರದಾರರು
ಪರರನ್ನು ಹೇಸುತ್ತೇವೆ
ಅಲ್ಲಿ ಇಲ್ಲಿ ಮೂಸುತ್ತೇವೆ
ಹಣಕ್ಕೆ ಹಡದಿ ಹಾಸುತ್ತೇವೆ
ಕಂಡವರ ಬೆಳೆಯ ಮೇಸುತ್ತೇವೆ
ಕಂಡು ಕೇಳಿದರೆ ಇಲ್ಲೆಂದು ವಾದಿಸುತ್ತೇವೆ
ರುಚಿಗಳನ್ನೇ ಬಯಸುತ್ತೇವೆ
ವಾಸನೆಗಳ ಹಿಂಬಾಲಿಸುತ್ತೇವೆ
ಕಡುಕೊಂಡು ಬಿದ್ದಾಗ ಹಲ್ಲು ಕಿಸಿಯುತ್ತೇವೆ
ಹೊರಳುತ್ತೇವೆ ನರಳುತ್ತೇವೆ
ಯಾರಿಗೆ ಬೇಕು ಕಷ್ಟ ನಷ್ಟ
ಸಾವು ನೋವು ಅನಿಷ್ಟ
ಅವುಗಳಿಂದ ದೂರ ಓಡುತ್ತೇವೆ
ಮೈ ಉಳಿಸಲು ಗೊಣಗಾಡುತ್ತೇವೆ
ಜೀವ ಉಳಿಸಲು ಹೆಣಗಾಡುತ್ತೇವೆ
ಚಟ ವ್ಯಸನಗಳು ನಮ್ಮ ಜೀವ ಬಂಧುಗಳು
ಅದಕ್ಕಾಗಿ ಬಿಟ್ಟೇವು ಜೀವ
ಸೋಮಾರಿತನ ಸುಳ್ಳು ತಗುಲುಗಳು
ನಮ್ಮ ಜಾಯಮಾನ
ಅದರಲ್ಲೇ ಸಾಗುತಿದೆ ದಿನಮಾನ
ಸಣ್ಣ ಸಣ್ಣದಕೆ ಸೆಣಸುತ್ತೇವೆ
ಕಚ್ಚಾಡುತ್ತೇವೆ ಬಡಿದಾಡುತ್ತೇವೆ
ನಾಯಿಗಳೂ ನಾಚುವಂತೆ
ಪುಕ್ಕಟೆ ಸಿಕ್ಕರೆ ಮುಕ್ಕುರುತ್ತೇವೆ
ಹರಕೊಂಡು ತಿನ್ನುತ್ತೇವೆ
ಕಾಗೆಗಳೂ ಬೆದರುವಂತೆ
ಏನೇನೂ ಕಿಸಿದಿಲ್ಲವಾದರೂ
ಮಾನ ಸನ್ಮಾನ ಪದವಿ ಪ್ರಶಸ್ತಿಗಳಿಗೆ
ಕೈ ಚಾಚುತ್ತೇವೆ ಬಾಚುತ್ತೇವೆ
ಪ್ರಚಾರ ನಮಗಲ್ಲದೆ ಇನ್ನಾರಿಗೆ
ಗೆದ್ದೆತ್ತಿನ ಬಾಲ ಹಿಡಿದು ಹಾಕಿ ಜೈಕಾರ
ಬೇಳೆ ಬೇಯಿಸಿಕೊಳ್ಳುತ್ತೇವೆ
ಗಾಳಿ ಬಂದಂತೆ ತೂರಿಕೊಳುತ್ತೇವೆ
ಹೆರರ ಚಪ್ಪರ ಉರಿಸಿ
ಮೈಕೈ ಕಾಯಿಸಿಕೊಳ್ಳುತ್ತೇವೆ
ಹೇಳುತ್ತಾ ಹೋದರೆ ನಮ್ಮ ಕಥನ
ಸಣ್ಣವು ಭಾರತ ರಾಮಾಯಣ
*****